ರಾಜ್ಯ

ಕೊಡಗು, ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆಯ ಆರ್ಭಟ: ಹಲವೆಡೆ ಭೂಕುಸಿತ

ಕಂಡು ಕೇಳರಿಯದ ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿದ್ದ ಕೊಡಗು ಜಿಲ್ಲೆಯಲ್ಲಿ ವರುಣ ಸ್ವಲ್ಪ ಮಟ್ಟಿಗೆ ಶಾಂತವಾಗಿದ್ದಾನೆಂದು ಕೊಳ್ಳುವಷ್ಟರಲ್ಲೇ ಮತ್ತೆ ಮಳೆಯ ಆರ್ಭಟ ಆರಂಭವಾಗಿದ್ದು, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಭಾನುವಾರ ಕೂಡ ಹಲವೆಡೆ ಭೂಕುಸಿತ ಸಂಭವಿಸಿತ್ತು...

ಕೊಡಗು, ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆಯ ಆರ್ಭಟ: ಹಲವೆಡೆ ಭೂಕುಸಿತ
ಕೊಡಗು, ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆಯ ಆರ್ಭಟ: ಹಲವೆಡೆ ಭೂಕುಸಿತ
Published On :
ಮಡಿಕೇರಿ: ಕಂಡು ಕೇಳರಿಯದ ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿದ್ದ ಕೊಡಗು ಜಿಲ್ಲೆಯಲ್ಲಿ ವರುಣ ಸ್ವಲ್ಪ ಮಟ್ಟಿಗೆ ಶಾಂತವಾಗಿದ್ದಾನೆಂದು ಕೊಳ್ಳುವಷ್ಟರಲ್ಲೇ ಮತ್ತೆ ಮಳೆಯ ಆರ್ಭಟ ಆರಂಭವಾಗಿದ್ದು, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಭಾನುವಾರ ಕೂಡ ಹಲವೆಡೆ ಭೂಕುಸಿತ ಸಂಭವಿಸಿತ್ತು. 
ಮಳೆಯ ಆರ್ಭಟದಿಂದ ಭೂಕುಸಿತ ಸಂಭವಿಸಿದ ಹಿನ್ನಲೆಯಲ್ಲಿ ಹಲವೆಡೆ ರಕ್ಷಣಾ ಕಾರ್ಯಾಚರಣೆಗಳಿಗೆ ಸಮಸ್ಯೆಗಳೆದುರಾಗಿತ್ತು. 
ಮುಕ್ಕೊಡ್ಲು ಮತ್ತು ಕಾಲೂರು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿತ್ತು. ಮಳೆಯ ನಡುವೆಯೂ ಮುಕ್ಕೊಡ್ಲು ಪ್ರದೇಶದಲ್ಲಿ ನೀರು ತುಂಬಿದ ಪ್ರದೇಶದಲ್ಲಿ ಸೇನೆ ಹಗ್ಗಗಳನ್ನು ಕಟ್ಟಿ ಸಂಕಷ್ಟದಲ್ಲಿದ್ದ ಜನರನ್ನು ರಕ್ಷಣೆ ಮಾಡುವ ಕಾರ್ಯವನ್ನು ಮುಂದುವರೆಸಿತ್ತು. 
ಹವಾಮಾನ ಇಲಾಖೆಯ ಅಧಿಕಾರಿಗಳು ಇನ್ನು 36 ಗಂಟೆಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಮಳೆಯಿಂದಾಗಿ ಹೆಲಿಕಾಪ್ಟರ್'ನಿಂದ ನಡೆಸಲಾಗುತ್ತಿದ್ದ ರಕ್ಷಣಾ ಕಾರ್ಯಾಚರಣೆಗಳಿಗೆ ಸಮಸ್ಯೆಯಾಗುತ್ತಿತ್ತು ಎಂದು ಎಡಿಜಿಪಿ ಭಾಸ್ಕರ್ ರಾವ್ ಅವರು ಹೇಳಿದ್ದಾರೆ. 
ಈ ನಡುವೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಭಾನುವಾರ ಕೊಡಗು ಜಿಲ್ಲೆಯಲ್ಲಿ 2ನೇ ದಿನ ಕೂಡ ವೈಮಾನಿಕ ಸಮೀಕ್ಷೆ ನಡೆಸಿದರು. ಬಳಿಕ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಅವರು ಭೂಕುಸಿತದಿಂದಾಗಿ ಮನೆಗಳನ್ನು ಕಳೆದುಕೊಂಡ ಜನರಿಗೆ, ರಸ್ತೆ ಸಂಪರ್ಕಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಎಂದು ಸೂಚಿಸಿದರು. 
ಈ ನಡುವೆ ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕುಗಳಲ್ಲಿ 41 ಪರಿಹಾರ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು, ನಿರಾಶ್ರಿತರಿಗೆ ನೆರವು ಕಾರ್ಯಾಚರಣೆ ಭರದಿಂದ ಸಾಗಿದೆ. 
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿರುವ ಪರಿಣಾಮ ಹಲವೆಡೆ ಸಂಚಾರಕ್ಕೆ ಸಮಸ್ಯೆಗಳೆದುರಾಗಿತ್ತು.  ಎಸ್'ಕೆ ಬಾರ್ಡರ್ ಮತ್ತು ಕುದರೇಮುಖ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ಮಂಗಳೂರು-ಬೆಂಗಳೂರು ಹೆದ್ದಾರಿ ಸಂಚಾರಕ್ಕೆ ತಡೆಯುಂಟಾಗಿತ್ತು. ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಕುದುರೆಮುಖದಿಂದಲೇ ಕೆಎಸ್ಆರ್'ಟಿಸಿ ಬಸ್ ಗಳನ್ನು ತಡೆಯಲಾಯಿತು. ಆದರೆ, ಖಾಸಗಿ ಬಸ್ ಗಳು, ಲಾರಿಗಳು ಹಾಗೂ ಟ್ರಕ್ ಗಳು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪರಿಣಾಮ ಗಂಟೆಗಟ್ಟಲೆ ಸಂಚಾರ ದಟ್ಟಣೆ ಎದುರಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.