ಪ್ರತ್ಯೇಕ ರಾಜ್ಯ ರಚನೆ ಬೇಡಿಕೆ: ಉತ್ತರ ಕರ್ನಾಟಕದವರಲ್ಲಿಯೇ ಭಿನ್ನಮತ?
ಪ್ರತ್ಯೇಕ ರಾಜ್ಯ ರಚನೆ ಬೇಡಿಕೆಗೆ ಸಂಬಂಧಪಟ್ಟಂತೆ ಉತ್ತರ ಕರ್ನಾಟಕದ ಜನರಲ್ಲಿಯೇ ಭಿನ್ನಾಭಿಪ್ರಾಯ ...

ಹುಬ್ಬಳ್ಳಿ: ಪ್ರತ್ಯೇಕ ರಾಜ್ಯ ರಚನೆ ಬೇಡಿಕೆಗೆ ಸಂಬಂಧಪಟ್ಟಂತೆ ಉತ್ತರ ಕರ್ನಾಟಕದ ಜನರಲ್ಲಿಯೇ ಭಿನ್ನಾಭಿಪ್ರಾಯ ಉಂಟಾಗಿದೆ. ಹುಬ್ಬಳ್ಳಿ ಅಥವಾ ಬೆಳಗಾವಿಯನ್ನು ರಾಜಧಾನಿ ಮಾಡಿ ಪ್ರತ್ಯೇಕ ರಾಜ್ಯ ರಚನೆ ಮಾಡಿದರೆ ಮಾತ್ರ ಉತ್ತರ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಯಾಗಬಹುದೆಂದು ಯುವಜನತೆಯ ವಾದವಾದರೆ ಹಲವರು ಅದನ್ನು ಒಪ್ಪುವುದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರ ಇತ್ತೀಚಿನ ಹೇಳಿಕೆ ಪ್ರತ್ಯೇಕ ರಾಜ್ಯ ರಚನೆಯ ಬೇಡಿಕೆಗೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ನಾಳೆ ನಡೆಯುವ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದರೆ ಕೆಲವರು ಬೆಂಬಲ ನೀಡುವುದರಿಂದ ಹಿಂದೆ ಸರಿದಿದ್ದಾರೆ. ಕೆಲವು ರಾಜಕಾರಣಿಗಳು ಮತ್ತು ಮಠಾಧೀಶರು ನಾಳೆ ನಡೆಯುವ ಉತ್ತರ ಕರ್ನಾಟಕ ಬಂದ್ ಗೆ ಬೆಂಬಲ ನೀಡಿದ್ದಾರೆ.
ಇದುವರೆಗೆ ಬಂದಿರುವ ಎಲ್ಲಾ ಸರ್ಕಾರಗಳು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿವೆ. ಪ್ರತ್ಯೇಕ ರಾಜ್ಯ ರಚನೆ ಮಾಡಿದರೆ ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯವಾಗಿದ್ದು ರಾಜಧಾನಿ ಹತ್ತಿರವಾಗುತ್ತದೆ. ಪ್ರತ್ಯೇಕ ರಾಜ್ಯ ರಚನೆಯಾದರೆ ಅದಕ್ಕೆ ಪ್ರತ್ಯೇಕ ಬಜೆಟ್ ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಯಾಗುತ್ತದೆ ಎನ್ನುತ್ತಾರೆ ಹುಬ್ಬಳ್ಳಿಯ ಉದ್ಯಮಿ ಆನಂದ್ ಸಿಂಗತಲೂರು.
ಉತ್ತರ ಕರ್ನಾಟಕದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿವೆ. ಇಲ್ಲಿನ ನದಿಗಳು, ಗಣಿ, ಥರ್ಮಲ್ ವಿದ್ಯುತ್, ಗಾಳಿಮಿಲ್ ಗಳು ಪ್ರಮುಖವಾಗಿವೆ. ಹಿಂದಿನ ಮತ್ತು ಇಂದಿನ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಪ್ರದೇಶಗಳ ಅಭಿವೃದ್ಧಿಯಾಗಿಲ್ಲ. ಇದೀಗ ಪ್ರತ್ಯೇಕ ರಾಜ್ಯ ರಚನೆ ಮಾಡುವ ಸಮಯ ಬಂದಿದೆ ಎನ್ನುತ್ತಾರೆ ಹುಬ್ಬಳ್ಳಿಯ ಎಂಜಿನಿಯರಿಂಗ್ ವಿದ್ಯಾರ್ಥಿ ಕಾರ್ತಿಕ್ ದಿವಾನ್.
ಇಲ್ಲಿನ ಉದ್ಯಮಗಳು ಸಮಸ್ಯೆಗಳನ್ನು ಎದುರಿಸುತ್ತಿವೆ ಎನ್ನುತ್ತಾರೆ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ನ ಮಾಜಿ ಅಧ್ಯಕ್ಷ ರಮೇಶ್ ಪಾಟೀಲ್. ಪ್ರತಿ ಕೆಲಸಕ್ಕೆ ನಾವು ಬೆಂಗಳೂರಿಗೆ ಹೋಗಬೇಕು. ಇಲ್ಲಿನ ಸ್ಥಳೀಯ ಪ್ರತಿಭೆಗಳು ಬೆಂಗಳೂರಿಗೆ ಉದ್ಯೋಗಕ್ಕೆ ಪಲಾಯನ ಮಾಡುತ್ತಾರೆ. ಪ್ರತ್ಯೇಕ ರಾಜ್ಯ ರಚನೆಯಾದರೆ ಇಡೀ ಪರಿಸ್ಥಿತಿ ಬದಲಾಗುತ್ತದೆ. ರಾಜ್ಯದಲ್ಲಿಯೇ ಹುಬ್ಬಳ್ಳಿಯಲ್ಲಿ ಆದಾಯ ಬರುವ ಜಿಲ್ಲೆಗಳಲ್ಲಿ ಎರಡನೇ ಸ್ಥಾನದಲ್ಲಿದೆ ಎನ್ನುತ್ತಾರೆ.
ಆದರೆ ಸಿಪಿಐ ಮತ್ತು ಇತರ ಕಾರ್ಮಿಕ ಸಂಘಟನೆಗಳು ಪ್ರತ್ಯೇಕ ರಾಜ್ಯ ರಚನೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ರಾಜಕೀಯ ನಾಯಕರು ಈ ಜಿಲ್ಲೆಗಳ ಅಭಿವೃದ್ಧಿಗೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರ ವೈಫಲ್ಯವನ್ನು ಮುಚ್ಚಿಹಾಕಲು ಇಂತಹ ಭಾವನಾತ್ಮಕ ವಿಷಯಗಳ ಬಗ್ಗೆ ಮಾತನಾಡುತ್ತಾರೆ ಮತ್ತು ಪ್ರತಿಭಟನೆ ಮಾಡುತ್ತಾರೆ. ಸರ್ಕಾರ ಇಡೀ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕು. ಆಯಾ ಪ್ರದೇಶಗಳ ಅಭಿವೃದ್ಧಿಗೆ ಜನನಾಯಕರು ಹೋರಾಡುವುದು ಬಿಟ್ಟು ಪ್ರತ್ಯೇಕ ರಾಜ್ಯ ಬೇಕೆಂದು ಕೇಳುವುದು ಮೂರ್ಖತನ ಎನ್ನುತ್ತಾರೆ ಕಾರ್ಮಿಕ ಸಂಘಟನೆ ನಾಯಕ ಮಹೇಶ್ ಪಟ್ಟರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


