ಬಾದಾಮಿ: ನೇಕಾರರ ಮುನಿಸು 'ಕೈ'ಗೆ ತಿರುಗುಬಾಣ, ಸರ್ಕಾರಕ್ಕೆ ಸವಾಲಾದ ಸಮುದಾಯದ ಓಲೈಕೆ
ಗೆದ್ದೇ ಗೆಲ್ಲುವ ವಿಶ್ವಾಸದೊಂದಿಗೆ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಅಲ್ಲಿನ ನೇಕಾರರ ಸಮುದಾಯದ ಮುನಿಸು ತಿರುಗುಬಾಣವಾಗಲಿದೆ ಎಂದು ಹೇಳಲಾಗುತ್ತಿದೆ.

Published On :
ಬಾದಾಮಿ: ಗೆದ್ದೇ ಗೆಲ್ಲುವ ವಿಶ್ವಾಸದೊಂದಿಗೆ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಅಲ್ಲಿನ ನೇಕಾರರ ಸಮುದಾಯದ ಮುನಿಸು ತಿರುಗುಬಾಣವಾಗಲಿದೆ ಎಂದು ಹೇಳಲಾಗುತ್ತಿದೆ.
ಬಾದಾಮಿಯಿಂದ ಕೇವಲ 23 ಕಿ.ಮೀ ದೂರದಲ್ಲಿರುವ ಗುಳೇದ ಗುಡ್ಡ ನೇಕಾರರ ಸಮುದಾಯದಿಂದಲೇ ಖ್ಯಾತಿ ಪಡೆದಿದೆ. ಇಲ್ಲಿನ ಬಹುತೇಕ ಎಲ್ಲ ಮನೆಗಳಲ್ಲೂ ಕನಿಷ್ಠ ಒಂದು ಅಥವಾ ಎರಡು ವಿದ್ಯುತ್ ಮಗ್ಗಗಳಿವೆ. ದಶಕಗಳಿಂದ ನೇಕಾರಿಕೆಯನ್ನೇ ಕಸುಬಾಗಿ ಸ್ವೀಕರಿಸುವ ಅನೇಕ ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು, ಆದರೆ ಕಸುಬಿನಲ್ಲಿನ ಸಮಸ್ಯೆಗಳಿಂದಾಗಿ ಇದೀಗ ನೇಕಾರರ ಸಮುದಾಯ ಸಂಕಷ್ಟಕ್ಕೆ ಸಿಲುಕಿವೆ. ಆದರೆ ಈ ಹಿಂದೆ ಇದೇ ನೇಕಾರರ ಸಮಸ್ಯೆಗಳನ್ನು ಈಡೇರಿಕೆ ಮಾಡುವುದಾಗಿ ಹೇಳಿ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಬಳಿಕ ಒಂದಷ್ಟು ಕಣ್ಣೊರೆಸುವ ಕ್ರಮಗಳನ್ನು ಕೈಗೊಂಡು ಸುಮ್ಮನಾಗಿತ್ತು.
ಹೀಗಾಗಿ ಈ ಸಮುದಾಯದ ಸಮಸ್ಯೆ ಮತ್ತೆ ಮುಂದುವರೆದಿದ್ದು, ಇದೀಗ ಮತ್ತೆ ಚುನಾವಣೆ ಹಿನ್ನಲೆಯಲ್ಲಿ ಜನಪ್ರತಿನಿಧಿಗಳು ನೇಕಾರರ ಓಲೈಕೆಯಲ್ಲಿ ತೊಡಗಿದ್ದಾರೆ. ಗುಳೇದ ಗುಡ್ಡದ ಪ್ರತೀಯೊಂದು ಮನೆಯಲ್ಲಿ ಮಗ್ಗಗಳಿವೆಯಾದರೂ, ಪ್ರಸ್ತುತ ಇಲ್ಲಿ ಅರ್ಧದಷ್ಟು ಮಂದಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಗುಳೆ ಹೋಗಿದ್ದಾರೆ. ಅಲ್ಲಿನ ಪ್ರತಿಯೊಂದು ಮನೆಗಳಲ್ಲೂ ಕುಟುಂಬದ ಓರ್ವ ಅಥವಾ ಇಬ್ಬರು ಸದಸ್ಯರು ಮನೆ ತೊರೆದು ಬೆಂಗಳೂರು ಮತ್ತು ಇತರೆಡೆ ಕೆಲಸ ಅರಸಿಕೊಂಡು ಹೋಗಿದ್ದಾರೆ.
ಎರಡೆರಡು ಮಗ್ಗಗಳನ್ನು ಹಾಕಿಕೊಂಡು ವೃತ್ತಿ ಮಾಡುತ್ತಿದ್ದ ನೇಕಾರರ ಕುಟುಂಬದಲ್ಲಿ ಇದೀಗ ಅರ್ಧದಷ್ಚು ಮಂದಿ ಮಾತ್ರ ಮಗ್ಗಳನ್ನು ನೆಚ್ಚಿಕೊಂಡಿದ್ದಾರೆ. ಉಳಿದ ಅರ್ಧದಷ್ಟು ಮಗ್ಗಗಳು ಕಾರ್ಯಸ್ಥಗಿತಗೊಳಿಸಿದ್ದು, ಉಳಿದ ಮಗ್ಗಗಳನ್ನು ನೇಕಾರರೇ ಮಾರಾಟ ಮಾಡಿ, ಇತರೆ ಉದ್ಯೋಗಗಳತ್ತ ಗುಳೆ ಹೋಗುತ್ತಿದ್ದಾರೆ.
ಇನ್ನು ಈ ಹಿಂದೆ ನೇಕಾರರ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಎಸ್ ಸಿ, ಎಸ್ ಟಿ ಸಮುದಾಯದವರಿಗೆ ಉಚಿತ ವಿದ್ಯುತ್ ಮಗ್ಗಗಳನ್ನು ನೀಡಿತ್ತು. ಆದರೆ ಹೀಗೆ ಸರ್ಕಾರದಿಂದ ಉಚಿತ ಮಗ್ಗ ಸ್ವೀಕರಿಸಿದ ಕೆಲವರು ಮಗ್ಗಗಳನ್ನು ಮಾರಾಟ ಮಾಡಿದ್ದು ಮತ್ತೆ ಕೆಲವರು ಬೇರೆಯವರಿಗೆ ಬಾಡಿಗೆಗೆ ನೀಡಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಸರ್ಕಾರ ನೆಪಮಾತ್ರಕ್ಕೆ ನೇಕಾರರಿಗೆ ಮಗ್ಗ ನೀಡುವ ಭರವಸೆ ನೀಡಿ ನಿಜವಾದ ಅರ್ಹ ಫಲನುಭವಿಗಳಿಗೆ ನೆರವಾಗುವಂತೆ ಮಾಡಿಲ್ಲ. ಬದಲಿಗೆ ಅವಶ್ಯಕತೆಯೇ ಇಲ್ಲದವರು ಫಲಾನುಭವಿಗಳಾಗುವಂತೆ ಮಾಡಿದೆ ಎಂಬ ಆಕ್ರೋಶ ಕೂಡ ಕೇಳಿಬರುತ್ತಿದೆ. ಈ ಬಗ್ಗೆ ಸಾಕಷ್ಟು ದೂರು ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದು ನೇಕಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸರ್ಕಾರದ ಈ ನಿರ್ಲಕ್ಷ್ಯದಿಂದಾಗಿ ಇಂದು ಯುವ ನೇಕಾರರು ತಮ್ಮ ವೃತ್ತಿಯನ್ನೇ ಬಿಟ್ಟು ಬೇರೆ ಊರು, ಬೇರೆ ವೃತ್ತಿಗೆ ಗುಳೆ ಹೋಗುತ್ತಿದ್ದು, ನೇಕಾರರ ಸಮುದಾಯ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆ, ವಿಜಯಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರು ಇದ್ದಾರೆಯಾದರೂ, ಅವರಿಗೆ ಸರ್ಕಾರದಿಂದ ಹೆಚ್ಚಿನ ಬೆಂಬಲ ದೊರೆಯುತ್ತಿಲ್ಲ. ಬಾಗಲಕೋಟೆಯಲ್ಲಿ ಸರ್ಕಾರ ಟೆಕ್ಸ್ ಟೈಲ್ ಪಾರ್ಕ್ ಮಾಡುವುದಾಗಿ ಹೇಳಿತ್ತು. ಆದರೆ ಅಧಿಕಾರಕ್ಕೆ ಬಂದಾಗ ಅದನ್ನು ಮರೆತೇ ಬಿಟ್ಟಿತು.
ಇನ್ನು ನೇಕಾರರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ದರ ತಾರತಮ್ಯ ಕೂಡ ಹಾಗೆಯೇ ಮುಂದುವರೆದಿದ್ದು, ತಮ್ಮಿಂದ ಕನಿಷ್ಟ ಬೆಲೆಗೆ ಕೊಳ್ಳುವ ಮಾರಾಟಗಾರರು ದುಬಾರಿ ಬೆಲೆಗೆ ಮಾರಾಟ ಮಾಡಿ ನಮಗೆ ಬಿಡಿಗಾಸು ನೀಡುತ್ತಾರೆ. ಅದಕ್ಕೂ ಕೂಡ ಮಳಿಗೆಗಳ ಮುಂದೆ ಬಿಕ್ಷುಕರಂತೆ ಅಲೆದಾಡಿಸುತ್ತಾರೆ ಎಂದು ನಿಜಗುಣಪ್ಪ ಕೊಳ್ಳಿ ಹೇಳಿದ್ದಾರೆ. ನಿಜಗುಣಪ್ಪ ಕೊಳ್ಳಿ ಗುಳೇದಗುಡ್ಡದ ನೇಕಾರರಾಗಿದ್ದು, ಕಳೆದ 60 ವರ್ಷಗಳಿಂದ ನೇಕಾರಿಕೆಯನ್ನು ಮಾಡುತ್ತಿದ್ದಾರೆ. ಕಳೆದ ಬಾರಿ ವಿಧಾನಸಭೆ ಚುನಾವಣೆ ನಿಮಿತ್ತ ತಾಲ್ಲೂಕಿಗೆ ಆಗಮಸಿದ್ದ ಶಾಸಕ ಬಿಬಿ ಚಮನಕಟ್ಟಿ ಅದಾದ ಬಳಿಕ ಈಗಲೇ ಅಂದರೆ ಮತ್ತೆ ಚುನಾವಣೆ ಬಂದಾಗಲೇ ಇತ್ತ ಆಗಮಸಿದ್ದಾರೆ. ಇಂತಹವರನ್ನು ನಂಬಿ ಹೇಗೆ ನಾವು ಮತಹಾಕುವುದು. ನಿಮಗೆ ಮತಹಾಕಲು ಮಾತ್ರ ನಾವು ಬೇಕು..ನಮ್ಮ ಸಮಸ್ಯೆಗೆ ಬೇರಾರೂ ಇಲ್ಲ.. ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್Siddaramaiahಸಿದ್ದರಾಮಯ್ಯBadamiಬಾದಾಮಿWeaversKarnataka Assembly Electionಕರ್ನಾಟಕ ವಿಧಾನಸಭೆ ಚುನಾವಣೆನೇಕಾರ ಸಮುದಾಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


