ರಾಜ್ಯ

ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಸೃಷ್ಟಿ, ತನಿಖೆಗೆ ಕಾಂಗ್ರೆಸ್ ಆಗ್ರಹ

ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ....

ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಸೃಷ್ಟಿ, ತನಿಖೆಗೆ ಕಾಂಗ್ರೆಸ್ ಆಗ್ರಹ
ರಾಹುಲ್ ಗಾಂಧಿ
Published On :
ಹುಬ್ಬಳ್ಳಿ: ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಸೃಷ್ಟಿಯಾಗಿದ್ದು, ಅನುಮಾನಸ್ಪದ ಮತ್ತು ಕಳಪೆ ನಿರ್ವಹಣೆ ಕುರಿತು ಸೂಕ್ತ ತನಿಖೆ ನಡೆಸುವಂತೆ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಈ ಸಂಬಂಧ  ರಾಹುಲ್ ಗಾಂಧಿ ಜೊತೆಗಿದ್ದ ಕೌಶಲ್ ವಿದ್ಯಾರ್ಥಿ ಎಂಬವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅವರಿಗೆ ದೂರು ನೀಡಿದ್ದಾರೆ.
ಇನ್ನು ಘಟನೆ ಬಗ್ಗೆ ಪರಿಶೀಲಿಸುವುದಾಗಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ) ಹೇಳಿದ್ದು, ಈ ಸಂಬಂಧ ಪೊಲೀಸರು ಸಹ ಪೈಲಟ್ ಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಕುರಿತು ಟ್ವೀಟ್ ಮಾಡಿರುವ ಕೌಶಲ್ ಕೆ ವಿದ್ಯಾರ್ಥಿ, ನಾನು ಈಗ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ. ನಾನು ಜೀವಂತವಾಗಿರುವುದಕ್ಕೆ ಧನ್ಯವಾದ. ನನ್ನ ಜೀವನದಲ್ಲಿ ಇಂತಹ ಭಯಾನಕ ಸ್ಥಿತಿ ಎದುರಿಸಿರಲಿಲ್ಲ. ವಿಮಾನ ಬೀಳುತ್ತೆ ಎಂಬಂತೆ ಭಾಸವಾಗುತ್ತಿತ್ತು. ಆದರೆ ನಮ್ಮ ಅಧ್ಯಕ್ಷರು ಶಾಂತಚಿತ್ತರಾಗಿ ಪೈಲಟ್‍ಗಳ ಜೊತೆ ಮಾತನಾಡಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಮಾಡುವ ಬಗ್ಗೆ ಗಮನಹರಿಸಿದ್ದರು ಎಂದು ಅನುಭವ ಹೇಳಿಕೊಂಡಿದ್ದಾರೆ.
ರಾಹುಲ್​ ಗಾಂಧಿ ವಿಮಾನ ಅನುಮಾನಾಸ್ಪದ ಲ್ಯಾಂಡಿಂಗ್​ ಪ್ರಕರಣದ ಹಿಂದೆ ಹಲವು ಪ್ರಶ್ನೆಗಳು ಮೂಡಿದ್ದು, ವಿಮಾನ ಕೆಲಕಾಲ ರೆಡಾರ್ ಸಂಪರ್ಕ ಸಹ ಕಳೆದುಕೊಂಡಿತ್ತು ಎಂದು ಮಾಜಿ ಸಂಸದೆ, ನಟಿ ರಮ್ಯಾ ಅವರು ಟ್ವೀಟ್ ಮಾಡಿದ್ದಾರೆ.
ವಿಮಾನ ಹುಬ್ಬಳ್ಳಿಯಲ್ಲಿ ಮೂರು ಬಾರಿ ಲ್ಯಾಂಡಿಂಗ್ ಮಾಡಲು ಯತ್ನಿಸಿ ವಿಫಲವಾಗಿದ್ದು, ಇದಕ್ಕೆ  ಪೈಲಟ್ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಕಿರ್ ಸನದಿ ನೀಡಿದ ದೂರಿನ ಆಧಾರದ ಮೇಲೆ ಹುಬ್ಬಳ್ಳಿಯ ಗೋಕುಲ ಠಾಣೆಯಲ್ಲಿ ರಾಹುಲ್ ಗಾಂಧಿ ವಿಶೇಷ ವಿಮಾನದ ಇಬ್ಬರು ಪೈಲಟ್‍ಗಳ ವಿರುದ್ಧ ಕರ್ತವ್ಯ ಲೋಪ ಆರೋಪದಡಿ,  ಏರ್ ಕ್ರಾಫ್ಟ್ ಕಾಯ್ದೆ 287, 336, ಐಪಿಸಿ ಸೆಕ್ಷನ್ 11 ಅನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.