ರಾಜ್ಯ

ಶೀಘ್ರದಲ್ಲೆ ರಾಜ್ಯದ ದೇವಾಲಯಗಳಲ್ಲಿ ದಲಿತ ಅರ್ಚಕರ ನೇಮಕ

ದೇವಸ್ಥಾನಗಳಲ್ಲಿ ದಲಿತ ಅರ್ಚಕರ ನೇಮಕಾತಿಗೆ ಕೇರಳ ರಾಜ್ಯವನ್ನು ಅನುಸರಿಸಲು ಸರ್ಕಾರ...

ಶೀಘ್ರದಲ್ಲೆ ರಾಜ್ಯದ ದೇವಾಲಯಗಳಲ್ಲಿ ದಲಿತ ಅರ್ಚಕರ ನೇಮಕ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
Published On :
ಬೆಂಗಳೂರು: ದೇವಸ್ಥಾನಗಳಲ್ಲಿ ದಲಿತ ಅರ್ಚಕರ ನೇಮಕಾತಿಗೆ ಕೇರಳ ರಾಜ್ಯವನ್ನು ಅನುಸರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ದಲಿತ ಸಮುದಾಯದ ತಂಡವೊಂದು ಮುಜರಾಯಿ ಇಲಾಖೆ ನಡೆಸುವ ಆಗಮ ಶಾಲೆಯಲ್ಲಿ ಹೆಸರು ನೋಂದಾಯಿಸಿಕೊಂಡಿದೆ.
ಮುಜರಾಯಿ ಇಲಾಖೆ ದೇವಸ್ಥಾನದ ದಲಿತ ಅರ್ಚಕರಿಗೆ ಪ್ರಮಾಣಪತ್ರ ನೀಡುತ್ತದೆ. ನೋಂದಾವಣೆಗೊಂಡ ದಲಿತರು ಪೂಜಾ ವಿಧಿ ವಿಧಾನದ ಕೋರ್ಸ್ ನ್ನು ಮುಗಿಸಿದರೆ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸಬಹುದು.
ರಾಜ್ಯಾದ್ಯಂತ 38 ಆಗಮ ಶಾಲೆಗಳನ್ನು ತೆರೆಯಲಾಗಿದ್ದು 18ರಿಂದ 40 ವರ್ಷದೊಳಗಿನವರು ಆಗಮ ಶಾಸ್ತ್ರ ಕೋರ್ಸ್ ಗೆ ದಾಖಲಾತಿ ಮಾಡಿಕೊಳ್ಳಬಹುದು. ಅರ್ಚಕರಾಗುವ ಮುನ್ನ ಅಭ್ಯರ್ಥಿಗಳು ಪ್ರವರ, ಪ್ರವೀಣ ಮತ್ತು ವಿದ್ವತ್ ಶಾಸ್ತ್ರಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. 
ಸರ್ಕಾರ ಆರಂಭಿಸಿರುವ ಆಗಮ ಶಾಸ್ತ್ರ ಕೋರ್ಸಿಗೆ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳು ಮಾತ್ರ ನೋಂದಾಯಿಸಿಕೊಳ್ಳುತ್ತಿದ್ದರು. ದಲಿತ ಸಮುದಾಯದವರಿಗೆ ಹಿಂಜರಿಕೆ ಅಥವಾ ಸಾಮಾಜಿಕ ಒತ್ತಡ ಇದಕ್ಕೆ ಕಾರಣವಾಗಿದ್ದಿರಬಹುದು. ಆದರೆ ಇದೀಗ ಕೆಲವು ದಲಿತ ಸಮುದಾಯದ ಅಭ್ಯರ್ಥಿಗಳು ಕೂಡ ಕೋರ್ಸ್ ಓದಲು ಮುಂದೆ ಬರುತ್ತಿದ್ದಾರೆ ಎಂದು ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಯಾವುದೇ ಜಾತಿಗೆ ಸೇರಿದ ಶಾಸ್ತ್ರ ಓದಿದ ಅಭ್ಯರ್ಥಿಗಳಿಗೆ ಅರ್ಚಕರಾಗಲು ಅನುವು ಮಾಡಿಕೊಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಲೇ ಬಂದಿದೆ. 
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮುಜರಾಯಿ ಇಲಾಖೆ ಸಚಿವ ರುದ್ರಪ್ಪ ಲಮಣಿ, ಉಡುಪಿಯಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್ ನಲ್ಲಿ ದೇವಸ್ಥಾನಗಳಲ್ಲಿ ದಲಿತ ಅರ್ಚಕರನ್ನು ನೇಮಕ ಮಾಡುವ ತೀರ್ಮಾನವನ್ನು ಹಲವು ಮಠಾಧೀಶರು ಸ್ವಾಗತಿಸಿದ್ದಾರೆ. ಇಲ್ಲಿಯವರೆಗೆ ದಲಿತರನ್ನು ಅಸ್ಪ್ರಶ್ಯರು ಎಂದು ನೋಡಲಾಗುತ್ತಿತ್ತು. ಧಾರ್ಮಿಕ ಮುಖಂಡರು ಈ ದಿಸೆಯಲ್ಲಿ ಒಂದು ಹೆಜ್ಜೆ ಮುಂದಿರಿಸಿದಾಗ ಜಾತ್ಯತೀತ ಸರ್ಕಾರವಾಗಿ ನಾವು ಮತ್ತೊಂದು ಹೆಜ್ಜೆ ಮುಂದಿಡುತ್ತೇವೆ. ದೇವಸ್ಥಾನಗಳಲ್ಲಿ ಪೂಜೆ ಮಾಡುವವರನ್ನು ಆಗಮ ಶಾಸ್ತ್ರ ಪಂಡಿತರಾಗಿ ಕಾಣುತ್ತೇವೆಯೇ ಹೊರತು ಯಾವುದೇ ಜಾತಿಯಾಧಾರದಿಂದ ನೋಡುವುದಿಲ್ಲ ಎಂದರು.
ರಾಜ್ಯದ 34,000 ದೇವಾಲಯಗಳು ಮುಜರಾಯಿ ಇಲಾಖೆಯಡಿ ಬರುತ್ತಿದ್ದು, ಇಲ್ಲಿ ಸುಮಾರು 1.2 ಲಕ್ಷ ಅರ್ಚಕರು ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಬೇರೆ ಇಲಾಖೆಗಳಂತೆ ಇಲ್ಲಿ ನೇಮಕಾತಿ ನಡೆಯುವುದಿಲ್ಲ. ಬ್ರಾಹ್ಮಣ ಸಮುದಾಯದ ನಿರ್ದಿಷ್ಟ ಕುಟುಂಬದ ವ್ಯಕ್ತಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅರ್ಚಕರು ತೀರಿಹೋದರೆ ಅಥವಾ ಅವರಿಗೆ ವಯಸ್ಸಾದ ಮೇಲಷ್ಟೇ ಬೇರೆ ಅರ್ಚಕರು ಬರುತ್ತಿದ್ದರು. ಎಸ್.ಸಿ/ಎಸ್.ಟಿ/ಒಬಿಸಿ ಸಮುದಾಯಗಳಿಗೆ ಇಲ್ಲಿ ಮೀಸಲಾತಿ ಇರುತ್ತಿರಲಿಲ್ಲ. ಆದರೆ ಇನ್ನು ಮುಂದೆ ಆಗಮ ಶಾಸ್ತ್ರ ಪ್ರಮಾಣಪತ್ರ ಹೊಂದಿರುವವರು ದೇವಸ್ಥಾನದ ಅರ್ಚಕರಾಗಬಹುದು ಎಂದರು.
ಮುಜರಾಯಿ ಇಲಾಖೆಯಡಿ ಬರುವ ಸಣ್ಣಪುಟ್ಟ ದೇವಸ್ಥಾನಗಳಲ್ಲಿ ಅರ್ಚಕರಿಗೆ ವೇತನ ಎಂಬುದಿರುವುದಿಲ್ಲ. ಭಕ್ತರು ನೀಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ಅರ್ಚಕರಿಗೆ ನೀಡಲಾಗುತ್ತದೆ. ಕೊಲ್ಲೂರು ಮುಕಾಂಬಿಕೆ, ಕುಕ್ಕೆ ಸುಬ್ರಹ್ಮಣ್ಯದಂತಹ ದೇವಸ್ಥಾನಗಳಲ್ಲಿ ಭಕ್ತರು ಮಾಡಿಸುವ ಅರ್ಚನೆ, ಸೇವೆಗಳಲ್ಲಿ ಒಂದು ಭಾಗವನ್ನು ಅರ್ಚಕರಿಗೆ ನೀಡಲಾಗುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.