ರಾಜ್ಯ

ಡಾ.ಬಿ.ಆರ್.ಅಂಬೇಡ್ಕರ್'ರನ್ನು ಎಂದಿಗೂ ಅವಮಾನಿಸಿಲ್ಲ: ಪೇಜಾವರ ಶ್ರೀ

ಸಂವಿಧಾನವನ್ನು ತಿದ್ದುಪಡಿ ಕುರಿತ ನನ್ನ ಹೇಳಿಕೆಯನ್ನು ತಿರುಚಲಾಗಿದ್ದು, ನಾನು ದಲಿತರ ವಿರೋಧಿಯಲ್ಲ. ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಎಂದಿಗೂ ಅವಮಾನಿಸಿಲ್ಲ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರು...

ಡಾ.ಬಿ.ಆರ್.ಅಂಬೇಡ್ಕರ್'ರನ್ನು ಎಂದಿಗೂ ಅವಮಾನಿಸಿಲ್ಲ: ಪೇಜಾವರ ಶ್ರೀ
ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ
Published On :
ಬೆಂಗಳೂರು: ಸಂವಿಧಾನವನ್ನು ತಿದ್ದುಪಡಿ ಕುರಿತ ನನ್ನ ಹೇಳಿಕೆಯನ್ನು ತಿರುಚಲಾಗಿದ್ದು, ನಾನು ದಲಿತರ ವಿರೋಧಿಯಲ್ಲ. ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಎಂದಿಗೂ ಅವಮಾನಿಸಿಲ್ಲ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರು ಸೋಮವಾರ ಸ್ಪಷ್ಟನೆ ನೀಡಿದ್ದಾರೆ. 
ಉಡುಪಿಯಲ್ಲಿ ನಡೆದ ಧರ್ಮ ಸಂಸದ್'ನಲ್ಲಿ ಈ ಹಿಂದೆ ಮಾತನಾಡಿದ್ದ ಪೇಜಾವರ ಶ್ರೀಗಳು, ಸಂವಿಧಾನವನ್ನು ತಿದ್ದುಪಡಿ ಮಾಡುವ ಅಗತ್ಯವಿದ್ದು, ಸಮಾಜದ ಸಮಾನತೆಗಾಗಿ ಹಿಂದುಳಿದವರಿಗೆ ಸರ್ಕಾರ ನೀಡುತ್ತಿರುವ ವಿಶೇಷ ಸವಲತ್ತುಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಹೇಳಿದ್ದರು ಎಂದು ಹೇಳಲಾಗುತ್ತಿತ್ತು. 
ಈ ಹೇಳಿಕೆಗೆ ತೀವ್ರ ವಿರೋಧಗಳು ವ್ಯಕ್ತವಾದ ಹಿನ್ನಲೆಯಲ್ಲಿ ನಿನ್ನೆ ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿರುವ ಅವರು, ನಾನು ಎಂದಿಗೂ ದಲಿತರ ವಿರೋಧಿಯಲ್ಲ. ಆದರೆ, ಕೆಲವರು ನನ್ನನ್ನು ಆ ರೀತಿ ಬಿಂಬಿಸುತ್ತಿದ್ದಾರೆ. ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂದು ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ನಾನು ಎಂದಿಗೂ ಅವಮಾನಿಸಿಲ್ಲ ಎಂದು ಹೇಳಿದ್ದಾರೆ. 
ಸ್ವತಂತ್ರ ಭಾರತದ ಸಂವಿಧಾನದಲ್ಲಿ ಸಾಕಷ್ಟು ಬಾರಿ ತಿದ್ದುಪಡಿಗಳನ್ನು ತರಲಾಗಿದೆ. ಸಂವಿಧಾನವನ್ನು ತಿದ್ದುಪಡಿ ಮಾಡಬೇಕೆಂದು ಹೇಳಿದ್ದೇನೆಯೇ ವಿನಃ ಸಂವಿಧಾನವನ್ನು ರದ್ದುಗೊಳಿಸಬೇಕೆಂದು ಅಥವಾ ಬದಲಾಯಿಸಬೇಕೆಂದು ಎಲ್ಲಿಯೂ ಹೇಳಿಲ್ಲ. 
ಅಲ್ಪಸಂಖ್ಯಾತರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಬಹುಸಂಖ್ಯಾತರಿಗೂ ನೀಡುವಂತೆ ಸಂವಿಧಾನವನ್ನು ತಿದ್ದುಪಡಿ ಮಾಡಬೇಕು ಎಂದು ಧರ್ಮ ಸಂಸದ್ ನಲ್ಲಿ ಮಂಡಿಸಿದ್ದೆ ಎಂದು ತಿಳಿಸಿದ್ದಾರೆ. 
ಕ್ರೈಸ್ತ, ಮುಸ್ಲಿಂ ಇತ್ಯಾದಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂವಿಧಾನ ಕೆಲವು ವಿಶೇಷ ಸೌಲಭ್ಯಗಳನ್ನು ನೀಡಿದೆ. ಅವರ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಸವಲತ್ತುಗಳನ್ನು ನೀಡಿದೆ. ಅವರ ಚರ್ಚು, ಮಸೀದಿಗಳಿಗೂ ಸ್ವಾಯತ್ತತೆ ನೀಡಿದೆ. ಇದು ತಪ್ಪಲ್ಲ. ಆದರೆ, ಈ ಸೌಲಭ್ಯಗಳು ಧಾರ್ಮಿಕ ಬಹುಸಂಖ್ಯಾತ ಹಿಂದೂಗಳಿಗೆ ಸಿಗುತ್ತಿಲ್ಲ. ದಲಿತರಿಗೂ ಸಿಗುತ್ತಿಲ್ಲ. ಅದ್ದರಿಂದ ಈ ಸೌಲಭ್ಯಗಳನ್ನು ಹಿಂದೂಗಳಿಗೂ ವಿಸ್ತರಿಸಿ. ಇದರಿಂದ ಈ ಸೌಲಭ್ಯಗಳು ದಲಿತರಿಗೂ ಸಿಗುತ್ತದೆ ಎಂದಿದ್ದಾರೆ. 
ದಲಿತರಿಗೆ ಮೀಸಲಾತಿಯನ್ನು ರದ್ದುಗೊಳಿಸಬೇಕು ಎಂದು ನಾನು ಹೇಳಿಲ್ಲ. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚಿಸಿದ ಈ ಸಂವಿಧಾನವನ್ನು ನಾನು ಅವಮಾನಿಸಿದರೆ ಅಂಬೇಡ್ಕರ್ ಅವರಿಗೆ ಮಾತ್ರವಲ್ಲ ಇಡೀ ದೇಶಕ್ಕೆ ಅವಮಾನಿಸಿದಂತೆ. ಅಂತಹ ಕೆಲಸವನ್ನು ನಾನು ಮಾಡಲಾರೆ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.