ಭರವಸೆ ಈಡೇರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ: ಅಂಗನವಾಡಿ ಕಾರ್ಯಕರ್ತೆಯರು
ಕನಿಷ್ಟ ವೇತನಕ್ಕೆ ಆಗ್ರಹಿಸಿ ರಾತ್ರಿಯಿಡೀ ರಾಜಧಾನಿಯ ರಸ್ತೆಯಲ್ಲೇ ಮಲಗಿ ಸರ್ಕಾರ ನಿದ್ದೆಗೆಡಿಸಿರುವ ಅಂಗನವಾಡಿ ಕಾರ್ಯಕರ್ತೆಯರ ಹೋರಾಟವನ್ನು ಶಮನಗೊಳಿಸಲು ಸ್ವತಃ ಮುಖ್ಯಂತ್ರಿ ಸಿದ್ದರಾಮಯ್ಯ ಅವರು ನಡೆಸಿದ...

Published On :
ಬೆಂಗಳೂರು: ಕನಿಷ್ಟ ವೇತನಕ್ಕೆ ಆಗ್ರಹಿಸಿ ರಾತ್ರಿಯಿಡೀ ರಾಜಧಾನಿಯ ರಸ್ತೆಯಲ್ಲೇ ಮಲಗಿ ಸರ್ಕಾರ ನಿದ್ದೆಗೆಡಿಸಿರುವ ಅಂಗನವಾಡಿ ಕಾರ್ಯಕರ್ತೆಯರ ಹೋರಾಟವನ್ನು ಶಮನಗೊಳಿಸಲು ಸ್ವತಃ ಮುಖ್ಯಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಸಂಧಾನ ಯತ್ನ ವಿಫಲವಾಯಿತು.
ಖಚಿತ ಭರವಸೆ ನೀಡದೇ ಉಪ ಚುನಾವಣೆಯ ನೀತಿ ಸಂಹಿತೆಯ ನೆಪ ಮುಂದು ಮಾಡಿ ಏ.19ಕ್ಕೆ ಮತ್ತೆ ಸಭೆ ನಡೆಸಿ ಚರ್ಚಿಸುವ ಸರ್ಕಾರದ ನಡೆ ಬೀಸೋ ದೊಣ್ಣೆಯಿ ತಪ್ಪಿಸಿಕೊಳ್ಳುವ ತಂತ್ರವೆಂದು ಹೇಳಿರುವ ಪ್ರತಿಭಟನಾನಿತರ ಅಂಗನವಾಡಿ ಕಾರ್ಯಕರ್ತೆಯಲು ಈ ಬಾರಿಯ ಯುಗಾದಿಯ ಹಬ್ಬವನ್ನು ಬೆಂಗಳೂರಿನ ರಸ್ತೆಯಲ್ಲಿಯೇ ಆಚರಿಸುವ ಘೋಷಣೆಯೊಂದಿಹೆ ಆಹೋರಾತ್ರಿ ಧರಣಿಯನ್ನು ಮುಂದುವರೆಸಿದ್ದಾರೆ.
ಸಿಐಟಿಯು ನೇತೃತ್ವದಲ್ಲಿ ಹೋರಾಟಕ್ಕಿಳಿದಿರುವ ಅಂಗನವಾಡಿ ಕಾರ್ಯಕರ್ತೆಯರ ಮನವೊಲಿಸಲು ನಿನ್ನೆ ಶತಾಯಗತಾಯ ಪ್ರಯತ್ನ ನಡೆಸಿದ ಸರ್ಕಾರ, ಒಂದು ಹಂತದಲ್ಲಿ ಯಶಸ್ವಿಯಾಯಿತು ಎಂದು ಭಾವಿಸುವಷ್ಟರಲ್ಲಿಯೇ ಕನಿಷ್ಠ ವೇತನ ಘೋಷಣೆ ಆಗುವತನಕ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದರು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಟ ಹೋರಾಟ ಮುಗಿಯಿತೆಂದೇ ಭಾವಿಸಿ, ವಿಧಾನಸಭೆಯಲ್ಲಿ ಆ ವಿಚಾರವನ್ನು ಪ್ರಸ್ತಾಪಿಸಿದ್ದರು. ಆದರೆ, ಅಂತಿಮವಾಗಿ ಪ್ರತಿಭಟನೆ ಮುಂದುವರೆದಿದ್ದರಿಂದ ಪ್ರತಿಭಟನಾನಿಕರಿಗೆ ಕುಡಿಯುವ ನೀರು, ಶೌಚಾಲಯ ಹಾಗೂ ಆ್ಯಂಬುಲೆನ್ಸ್ ಸೌಲಭ್ಯವನ್ನು ಸರ್ಕಾರ ಒದಗಿಸಿತು.
ರಾಜ್ಯ ಹಲವು ಭಾಗಗಳಿಂದ 10 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಸೋಮವಾರ ಬೆಳಿಗ್ಗೆಯಿಂದಲೂ ಫ್ರೀಡಂ ಪಾರ್ಕ್ ಮುಂದೆ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಕೆಲ ಮಹಿಳೆಯರು ತಮ್ಮ ಮಕ್ಕಳೊಂದಿಗೇ ಪ್ರತಿಭಟನೆಗೆ ಬಂದಿದ್ದು, ರಸ್ತೆ ಮಧ್ಯೆಯೇ ಮಕ್ಕಳೊಂದಿಗೆ ಮಲಗಿದ್ದರು. ಇನ್ನು ಕೆಲ ಮಹಿಳೆಯರೂ ರಾತ್ರಿಯಿಡೀ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘದ ಅಧ್ಯಕ್ಷೆ ಎಸ್. ವರಲಕ್ಷ್ಮಿ ಅವರೂ ಕೂಡ ನಿನ್ನೆ ನಡೆದ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳಲು ನಿರಾಕರಿಸಿದರು. ಸಿದ್ದರಾಮಯ್ಯ ಅವರು ಕೇವಲ ಭರವಸೆಯನ್ನಷ್ಟೇ ನೀಡಿದ್ದಾರೆ. ಹೀಗಾಗಿ ಭರವಸೆ ಈಡೇರಿಸುವ ಖಚಿತತೆ ಇಲ್ಲ. ಶೀಘ್ರದಲ್ಲಿಯೇ ಮತ್ತಷ್ಟು ಪ್ರತಿಭಟನಾಕಾರರು ಪ್ರತಿಭಟನೆಯೊಂದಿಗೆ ಕೈಜೋಡಿಸಲಿದ್ದಾರೆಂದು ಹೇಳಿದ್ದಾರೆ.
ಎರಡು ತಾಲೂಕುಗಳಲ್ಲಿ ಉಪ ಚುನಾವಣೆಗಳಿರುವುದಿಂದ ನೀತಿ ಸಂಹಿತೆಯ ನೆಪವನ್ನು ಸಿದ್ದರಾಮಯ್ಯ ಅವರು ಮುಂದಿಟ್ಟಿದ್ದಾರೆ. ಇಲ್ಲಿಂದಲೇ ನಾವು ಚುನಾವಣೆಯಲ್ಲಿ ಬಾಗಿಯಾಗುತ್ತೇವೆ. ಭರವಸೆ ಈಡೇರಿಸುವವರೆಗೂ ಏನೇ ಆದರೂ ನಮ್ಮ ಪ್ರತಿಭಟನೆಯನ್ನು ನಾವು ಹಿಂದಕ್ಕೆ ಪಡೆಯುವುದಿಲ್ಲ. ರಸ್ತೆ ಮಧ್ಯೆಯೇ ನಾವು ಯುಗಾದಿ ಹಬ್ಬವನ್ನು ಆಚರಿಸುತ್ತೇವೆಂದು ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ವಿಚಾರ ಸದನದಲ್ಲಿಯೂ ಚರ್ಚೆಯಾಯಿತು. ಹೆಚ್.ಡಿ. ಕುಮಾರಸ್ವಾಮಿ ಮತ್ತು ಜಗದೀಶ್ ಶೆಟ್ಟರ್ ಅವರು ಸರ್ಕಾರದ ವಿರುದ್ದ ಹರಿಹಾಯ್ದರು. ಅಂಗನವಾಡಿ ಕಾರ್ಯಕರ್ತರು ರೂ.4000 ವೇತನವನ್ನು ಹೆಚ್ಚಳ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಈ ಆಗ್ರಹವನ್ನೂ ಸರ್ಕಾರ ಈಡೇರಿಸಲು ಸಾಧ್ಯವಾಗುತ್ತಿಲ್ಲ.
ಪ್ರಸ್ತುತ ಅಂಗನಾಡಿ ಕಾರ್ಯಕರ್ತೆಯರಿಗೆ ಸರ್ಕಾರ ರೂ.6000 ವೇತನವನ್ನು ನೀಡುತ್ತಿದೆ. ಸಹಾಯಕರಿಗೆ ರೂ.3000 ವೇತನವನ್ನು ನೀಡುತ್ತಿದೆ. ಇತ್ತೀಚೆಗಷ್ಟೇ ರಾಜ್ಯ ಬಜೆಟ್ ಮಂಡನೆ ಮಾಡಿದ್ದ ಸಿದ್ದರಾಮಯ್ಯ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ರೂ.1 ಸಾವಿರ ಹಾಗೂ ಸಹಾಯಕರಿಗೆ ರೂ.500 ವೇತನ ಹೆಚ್ಚಳ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ ಕೇವಲ ರೂ. 1,500 ವೇತನವನ್ನು ನೀಡುತ್ತಿದೆ ಎಂದು ರಾಜ್ಯ ಸರ್ಕಾರ ವಾದ ಮಂಡಿಸುತ್ತಿದೆ. ರೂ. 7,000 ವೇತನವನ್ನು ನಮಗೆ ನೀಡಲಾಗುತ್ತಿದೆ. ಕೇರಳ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ರೂ.10,000 ವೇತನವನ್ನು ನೀಡಲಾಗುತ್ತಿದೆ. ನಮ್ಮ ರಾಜ್ಯದಲ್ಲೇಕೆ ಇದು ಸಾಧ್ಯವಿಲ್ಲ?... ಪಂಜಾಬ್ ರಾಜ್ಯದಲ್ಲಿ ರೂ.14,000 ವೇತನವನ್ನು ನೀಡುತ್ತಿದೆ. ತಮಿಳುನಾಡು ರಾಜ್ಯದಲ್ಲಿ ಹಬ್ಬದ ದಿನಗಳಲ್ಲಿ ಬೋಸನ್ ಕೂಡ ನೀಡುತ್ತದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಸುನಂದ ಹೆಚ್.ಎಸ್ ಅವರು ಹೇಳಿದ್ದಾರೆ.
ಹೊಸಕೋಟೆಯಲ್ಲಿ 40 ಮಹಿಳೆಯರು ಪ್ರತಿಭಟನಾ ಸ್ಥಳಕ್ಕೆ ಬರುತ್ತಿದ್ದ ವೇಳೆ ಅವರನ್ನು ಬಂಧನಕ್ಕೊಳಪಡಿಸಲಾಗಿದೆ. ಅವರಿಗೆ ರೈಲು ಟಿಕೆಟ್ ಗಳೂ ಕೂಡ ದೊರಕಿಲ್ಲ. ಎಷ್ಟೆಲ್ಲಾ ಆದರೂ, ಪ್ರತಿಭಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರರಿದ್ದಾರೆ. ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ. ಕುಡಿಯಲು ನೀರಿಲ್ಲ. ಶೇಷಾದ್ರಿ ರಸ್ತೆಯಲ್ಲಿ ಸೋಮವಾರ ರಾತ್ರಿ ವಿದ್ಯುತ್ ದೀಪಗಳನ್ನು ಆರಿಸಲಾಗಿತ್ತು. ರಾತ್ರಿಯಿಡೀ ಮಹಿಳೆಯರು ರಸ್ತೆಯಲ್ಲಿ ಓಡಾಡುತ್ತಿದ್ದರು. ಪ್ರತಿಭಟನಾನಿರತ 6 ಮಂದಿ ಮಹಿಳೆಯರು ನಿರ್ಜಲೀಕರಣ ಹಾಗೂ ಅನಾರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಸುನಂದ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


