ಹಲ್ಲೆ ಪ್ರಕರಣ: ಮಹಾರಾಷ್ಟ್ರದಲ್ಲಿ ಬಿಜೆಪಿ ಶಾಸಕ ರಾಜು ಕಾಗೆ ಬಂಧನ
ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಗವಾಡ ಬಿಜೆಪಿ ಶಾಸಕ ರಾಜು ಕಾಗೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ: ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಗವಾಡ ಬಿಜೆಪಿ ಶಾಸಕ ರಾಜು ಕಾಗೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಹಲ್ಲೆ ಪ್ರಕರಣ ಸಂಬಂಧ ಎಫ್ ಐಆರ್ ದಾಖಲಾಗುತ್ತಿದ್ದಂತೆಯೇ ಶಾಸಕ ಕಾಗೆ ಮತ್ತು ಅವರ ಕುಟುಂಬ ನಾಪತ್ತೆಯಾಗಿದ್ದರು. ಹೀಗಾಗಿ ಅವರ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದರು. ಶಾಸಕ ರಾಜು ಕಾಗೆ ಮಹಾರಾಷ್ಟ್ರದ ಭೀಮಾಶಂಕರದ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಇರುವ ಕುರಿತು ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಶಾಸಕರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಪ್ರಕರಣದ ಇತರೆ ಆರೋಪಿಗಳಾಗಿರುವ ಕಾಗೆ ಸಹೋದರ ಮತ್ತು ಪ್ರಕರಣದ ಮೊದಲ ಆರೋಪಿ ಪ್ರಸಾದ್ ಸಿದ್ದಗೌಡ ಕಾಗೆ, ಪುತ್ರಿ ತೃಪ್ತಿ ಕಾಗೆ, ಸಿದಗೌಡ ಕಾಗೆ ಪತ್ನಿ ಶೋಭಾ, ರಾಜು ಕಾಗೆ ಅವರ ಕಾರು ಚಾಲಕ ಬಾಹುಬಲಿ ಮತ್ತು ಅಶೋಕ್ ಕಾಗೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಲ್ಲ ಆರೋಪಿಗಳನ್ನು ಮಹಾರಾಷ್ಟ್ರದಿಂದ ಪೊಲೀಸರು ಅಥಣಿಗೆ ಕರೆದುಕೊಂಡು ಬರುವ ಸಾಧ್ಯತೆ ಇದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಅಂತೆಯೇ ಇದೇ ಪ್ರಕರಣದ ಇತರೆ ಏಳು ಮಂದಿ ಆರೋಪಿಗಳು ಇನ್ನೂ ನಾಪತ್ತೆಯಾಗಿದ್ದು, ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ. ಹಲ್ಲೆ ಪ್ರಕರಣ ಸಂಬಂಧ ಕಾಗವಾಡ ಠಾಣೆಯಲ್ಲಿ ಬಿಜೆಪಿ ಶಾಸಕ ರಾಜು ಕಾಗೆ ಸೇರಿ ಕುಟುಂಬದ 13 ಮಂದಿ ವಿರುದ್ಧ ಪೊಲೀಸರು ಗೂಂಡಾಗಿರಿ ಪ್ರಕರಣ ದಾಖಲಿಸಿದ್ದರು. ಆದರೆ ಪ್ರಕರಣದ ಇನ್ನೂ ಏಳು ಮಂದಿ ಆರೋಪಿಗಳು ನಾಪತ್ತೆಯಾಗಿದ್ದಾರೆ.
ಪ್ರಕರಣದಲ್ಲಿ ಶಾಸಕ ರಾಜು ಕಾಗೆ 12ನೇ ಆರೋಪಿಯಾಗಿದ್ದು, ಶಾಸಕರ ಸಹೋದರ ಪ್ರಸಾದ್ ಸಿದಗೌಡ ಕಾಗೆ ಎ1, ಗಜಾನನ ಸದಾಶಿವ ಕಾಗೆ ಎ2, ಗಜಾನನ ಮಹಾದೇವ ಎ3, ಶೇಖರ ತಮ್ಮಾಣಿ ಎ4, ವಿನೋದ ಪಾಟೀಲ ಎ5, ಅಶೋಕ ಪಾಟೀಲ ಎ7, ಬಾಹುಬಲಿ ಎ8, ಅಶೋಕ ತಮ್ಮಣಿ ಕಾಗೆ ಎ8, ಸಿದಗೌಡ ಆಲಗೌಡ ಕಾಗೆ ಎ9, ತೃಪ್ತಿ ಕಾಗೆ ಎ10, ಶೋಭಾ ಸಿದಗೌಡ ಕಾಗೆ ಎ11, ರಾಜುಕಾಗೆ ಎ12, ಡಾ ಪ್ರಸನ್ನ ಕಾಗೆ ಎ13 ಆರೋಪಿಗಳಾಗಿದ್ದಾರೆ. ಇವರೆಲ್ಲರ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 342, 452, 307, 302, 323, 324, 326, 354 ಹಾಗೂ 367, 504, 506,149 ಸೆಕ್ಷನ್ ಅಡಿ ಎಫ್‍ಐಆರ್ ದಾಖಲಾಗಿದೆ.
ಏನಿದು ಪ್ರಕರಣ?
ಫೇಸ್ ಬುಕ್'ನಲ್ಲಿ ಕಾಂಗ್ರೆಸ್ ನಾಯಕ ವಿವೇಕ್ ಶೆಟ್ಟಿ ಬಿಜೆಪಿ ವಿರುದ್ಧ ಅವಹೇಳನಕಾರಿ ಸ್ಟೇಟಸ್ ಹಾಕಿದ್ದರು ಎಂದು ಆರೋಪಿಸಿ ರಾಜು ಕಾಗೆ ಸಹೋದರ ಪ್ರಸಾದ್ ಸಿದ್ದಗೌಡಕಾಗೆ ಹಾಗೂ 12 ಜನ ಅಥಣಿ ತಾಲೂಕಿನ ಉಗಾರ ಗ್ರಾಮದ ವಿವೇಕ್ ಶೆಟ್ಟಿ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದರು. ಜನವರಿ 1ರ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮನೆಯ ಮೆಟ್ಟಿಲುಗಳ ಮೇಲೆ ಧರಧರನೆ ಎಳೆದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಈ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ವಿವೇಕ್ ಶೆಟ್ಟಿ ದೂರಿನ ಮೇರೆಗೆ ರಾಜುಕಾಗೆ ಸೇರಿದಂತೆ 13 ಮಂದಿ ವಿರುದ್ಧ ಪೊಲೀಸರು ಗೂಂಡಾಗಿರಿ ಕೇಸ್ ದಾಖಲಿಸಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


