ರಾಜ್ಯ

ಮೈಸೂರು: ಮನೆ ಇಲ್ಲದ ಕಾರಣ, ಮಾವಿನ ಮರದಲ್ಲೇ ಈ ಜೇನು ಕುರುಬನ ವಾಸ!

ಸರ್ಕಾರಗಳು ಹಲವು ವಸತಿ ಯೋಜನೆಗಳನ್ನು ಘೋಷಿಸುತ್ತಿದ್ದರೂ ಕೂಡ ವಾಸ್ತವವಾಗಿ ಹಲವರ ಪರಿಸ್ಥಿತಿ ಬದಲಾಗಿಲ್ಲ....

ಮೈಸೂರು: ಮನೆ ಇಲ್ಲದ ಕಾರಣ, ಮಾವಿನ ಮರದಲ್ಲೇ ಈ ಜೇನು ಕುರುಬನ ವಾಸ!
ಪೆರಿಯಾಪಟ್ಟಣ ತಾಲ್ಲೂಕಿನ ಮಲಗನಕೆರೆ ಬುಡಕಟ್ಟು ಹಾಡಿಯಲ್ಲಿ ಕಳೆದೆರಡು ವರ್ಷಗಳಿಂದ ಮರದ ಮೇಲೆ ವಾಸಿಸುತ್ತಿರುವ ಗಜ್ಜ
Published On :
ಮೈಸೂರು: ಸರ್ಕಾರಗಳು ಹಲವು ವಸತಿ ಯೋಜನೆಗಳನ್ನು ಘೋಷಿಸುತ್ತಿದ್ದರೂ ಕೂಡ ವಾಸ್ತವವಾಗಿ ಹಲವರ ಪರಿಸ್ಥಿತಿ ಬದಲಾಗಿಲ್ಲ. ಮೈಸೂರು ಜಿಲ್ಲೆಯ ಜೇನು ಕುರುಬ ಬುಡಕಟ್ಟು ಜನಾಂಗದ  ಗಜ್ಜನಿಗೆ ತಲೆಯ ಮೇಲೊಂದು ಸೂರು ಇಲ್ಲ. ಪೆರಿಯಾಪಟ್ಟಣ ತಾಲ್ಲೂಕಿನ ಮಲಗನಕೆರೆ ಬುಡಕಟ್ಟು ಹಾಡಿಯಲ್ಲಿ ಗಜ್ಜ ಕಳೆದೆರಡು ವರ್ಷಗಳಿಂದ ಮರದ ಮೇಲೆ ವಾಸಿಸುತ್ತಿದ್ದಾನೆ. ಆತನಲ್ಲಿ ಮನೆ ಕಟ್ಟಲು ಹಣ ಇಲ್ಲ. ಅಧಿಕಾರಿಗಳು ಕೂಡ ಯಾವುದೇ ಸಹಾಯ ಮಾಡಿಲ್ಲ.
ಮೈಸೂರು ಜಿಲ್ಲೆಯ ನವಿಲೂರು ಗ್ರಾಮದ ಮಲಗನಕೆರೆ ಹಾಡಿಯಲ್ಲಿ ಗುಡಿಸಲೊಂದರಲ್ಲಿ ಕಳೆದ 50 ವರ್ಷಗಳಿಂದ ಗಜ್ಜ ವಾಸಿಸುತ್ತಿದ್ದ. ಒಂದು ದಿನ ಅರಣ್ಯಾಧಿಕಾರಿಗಳು ಆತನ ಗುಡಿಸಲನ್ನು ಕೊಡವಿ ಹಾಕಿದರು. ಅಲ್ಲದೆ ಗಜ್ಜ ಸೇರಿದಂತೆ 24 ಕುಟುಂಬಗಳು ಅಲ್ಲಿ ಓಡಾಡಬಾರದೆಂದು ಗುಂಡಿ ತೋಡಿ ಸೋಲಾರು ಬೇಲಿ ಹಾಕಿದರು. ಗಜ್ಜನಿಗೆ ಬೇರೆ ದಾರಿ ಕಾಣದೆ ಮಾವಿನ ಮರವೊಂದರ ಮೇಲೆ ವಾಸಿಸಲು ಆರಂಭಿಸಿದ. ಅದು ಆತನ ತಾತ ನೆಟ್ಟ ಮಾವಿನ ಮರವಾಗಿದೆ.
ಕಾಡಿನಿಂದ ಬಿದಿರು ತಂದು ಮರದ ಮೇಲೆ 40 ಅಡಿ ಅಳತೆಯಲ್ಲಿ ಗುಡಿಸಲನ್ನು ಕಟ್ಟಿದನು. ಅದು ಆನೆ ಮೊದಲಾದ ವನ್ಯಮೃಗಗಳಿಂದ ರಕ್ಷಿಸಿಕೊಳ್ಳಲು. ಮರದ ಕೆಳಗೆ ಸೂರ್ಯಾಸ್ತಮಾನವಾಗುವುದಕ್ಕೆ ಮೊದಲು ಅಡುಗೆ ಮಾಡುವ ಗಜ್ಜ ರಾತ್ರಿಯಾದ ಮೇಲೆ ಎಲ್ಲಾ ಪಾತ್ರೆ-ಪಗಡನ್ನು ಎತ್ತಿಕೊಂಡು ಮರದ ಮೇಲೇರುತ್ತಾನೆ. ಮರದ ಮೇಲೆ ಹತ್ತಲು ಸಾಧ್ಯವಾಗದ ಆತನ ಪತ್ನಿ ಶೋಭಾ ತಾನು ಮನೆ ಕೆಲಸ ಮಾಡುವ ಮಾಲಿಕರ ಮನೆಯಲ್ಲಿ ರಾತ್ರಿ ತಂಗುತ್ತಾಳೆ. ಆತನ ದೊಡ್ಡ ಮಗ ಮದುವೆಯಾಗಿ ಪಕ್ಕದ ಜಮೀನ್ದಾರರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಎರಡನೆಯ ಮಗ ಆಶ್ರಮವೊಂದರಲ್ಲಿ ಉಳಿದುಕೊಂಡು ಶಾಲೆಗೆ ಹೋಗುತ್ತಿದ್ದಾನೆ. 
ಹಾಡಿ ಜನಾಂಗಕ್ಕೆ ಮೂಲಭೂತ ಸೌಕರ್ಯಗಳಿಲ್ಲ, ತಮಗೆ ಸೌಕರ್ಯ ಒದಗಿಸಿಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರೂ ಅರಣ್ಯಾಧಿಕಾರಿಗಳಾಗಲಿ, ಕಂದಾಯ ಇಲಾಖೆ ಅಧಿಕಾರಿಗಳಾಗಲಿ ಗಮನವೇ ಹರಿಸುತ್ತಿಲ್ಲ ಎನ್ನುತ್ತಾರೆ ಗ್ರಾಮದ ಮುಖ್ಯಸ್ಥ ರಾಜಯ್ಯ. ಬುಡಕಟ್ಟು ಜನಾಂಗದವರಿಗೆ ಅರ್ಧ ಎಕರೆ ಜಮೀನು ನೀಡಲಾಗುವುದೆಂದು ಹೇಳಿದರೂ ಕೂಡ ಹಲವು ಕುಟುಬಗಳಿಗೆ ಸಿಕ್ಕಿಲ್ಲ ಎನ್ನುತ್ತಾರೆ. ಮಳೆಗಾಲದಲ್ಲಿ ಗಜ್ಜನಿಗೆ ಭಾರೀ ತೊಂದರೆಯಾಗುತ್ತದೆ. ಆನೆಗಳ ಹಾವಳಿ ಕೂಡ ವಿಪರೀತವಾಗಿದೆ. ನಾನು ವಾಸಿಸುತ್ತಿರುವ ಮರದ ರೆಂಬೆ, ಕೊಂಬೆಗಳನ್ನು ಆನೆಗಳು ಕೆಡವಿ ಹಾಕುವಾಗ ಜೀವಭಯವಾಗುತ್ತದೆ ಎನ್ನುತ್ತಾನೆ ಗಜ್ಜ.
ಗಜ್ಜನಿಗೆ ಸೈಟು ಅಥವಾ ಜಮೀನು ನೀಡಲು ಸಾಧ್ಯವಿಲ್ಲ, ಏಕೆಂದರೆ ಆತ ಕಾಡಿನೊಳಗೆ ವಾಸಿಸುತ್ತಿರುವುದರಿಂದ ಆತ ಸ್ಥಳ ಬಿಟ್ಟು ಹೋದರೆ ಅಲ್ಲಿ ಪುನರ್ವಸತಿಗೆ ಅವಕಾಶವಿದೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಈ ಬಗ್ಗೆ ಜಿಲ್ಲಾಧಿಕಾರಿ ರಣದೀಪ್ ಅವರನ್ನು ಕೇಳಿದರೆ, ಕಳೆದೆರಡು ವರ್ಷಗಳಿಂದ ಬುಡಕಟ್ಟು ಜನಾಂಗದ ವ್ಯಕ್ತಿ ಮನೆಯಿಲ್ಲದೆ ಮರದಲ್ಲಿ ವಾಸಿಸುತ್ತಿರುವ ವಿಷಯ ತಿಳಿದಿರಲಿಲ್ಲ. ಸಹಾಯಕ ಆಯುಕ್ತರು ಮತ್ತು ಬುಡಕಟ್ಟು ಅಭಿವೃದ್ಧಿ ಅಧಿಕಾರಿಯನ್ನು ಹಾಡಿಗೆ ಕಳುಹಿಸಿ ಮಾಹಿತಿ ಪಡೆಯಲಾಗುವುದು. ಗಜ್ಜನಿಗೆ ವಸತಿ ನೀಡಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.