ನಿರ್ಮಾಣ ಹಂತದ ಶೌಚಾಲಯ ನೆಲಸಮ ಮಾಡಿದ ತಂದೆಯ ವಿರುದ್ಧ ಬಾಲಕಿ ದೂರು
ನಿರ್ಮಾಣ ಹಂತದಲ್ಲಿದ್ದ ಶೌಚಾಲಯನ್ನು ನೆಲಸಮ ಮಾಡಿದ್ದ ತಂದೆಯ ವಿರುದ್ಧ 14 ವರ್ಷದ ಬಾಲಕಿಯೊಬ್ಬಳು ದೂರು ದಾಖಲಿಸಿರುವ ಘಟನೆಯೊಂದು ಚಾಮರಾಜನಗರದಲ್ಲಿ...

ಮೈಸೂರು: ನಿರ್ಮಾಣ ಹಂತದಲ್ಲಿದ್ದ ಶೌಚಾಲಯನ್ನು ನೆಲಸಮ ಮಾಡಿದ್ದ ತಂದೆಯ ವಿರುದ್ಧ 14 ವರ್ಷದ ಬಾಲಕಿಯೊಬ್ಬಳು ದೂರು ದಾಖಲಿಸಿರುವ ಘಟನೆಯೊಂದು ಚಾಮರಾಜನಗರದಲ್ಲಿ ನಡೆದಿದೆ.
ಜೆ.ವಚನ ಜ್ಯೋತಿ (14) ದೂರು ದಾಖಲಿಸಿದ ಬಾಲಕಿಯಾಗಿದ್ದು, ಗುಂಡ್ಲುಪೇಟೆಯ ಕಡಸೊಗೆ ಗ್ರಾಮದ ನಿವಾಸಿಯಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮಗಳು ಪ್ರಾಯಕ್ಕೆ ಬಂದಿದ್ದಳು. ಆಕೆಗೆ ಸಮಸ್ಯೆ ಎದುರಾಗಬಾರದೆಂಬ ಕಾರಣಕ್ಕೆ ಶೌಚಾಲಯ ನಿರ್ಮಿಸಲು ತೀರ್ಮಾನಿಸಿದ್ದೆ. ಇದರಂತೆ ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿಯಲ್ಲಿ ರು.10 ಸಾವಿರ ಪ್ರೋತ್ಸಾಹ ಧನ ನೀಡುವಂತೆ ಅರ್ಜಿ ಸಲ್ಲಿಸಿದ್ದೆ. ಆದರೆ, ಹಣ ಬಿಡುಗಡೆಯಾಗುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ ಎಂದು ಎನ್ ಜಿಒ ವೊಂದರ ಬಳಿ ರು.8000 ಹಣವನ್ನು ಸಾಲ ಪಡೆದು ಪತಿಯ ವಿರೋಧದ ನಡುವೆಯೂ ಶೌಚಾಲಯವನ್ನು ನಿರ್ಮಿಸುತ್ತಿದ್ದೆ ಎಂದು ವಚನ ತಾಯಿ ಹೇಳಿಕೊಂಡಿದ್ದಾರೆ.
ತಂದೆಯಿಂದ ನಾವು ಬೇರೆಯಿದ್ದು, ನಮ್ಮ ಮನೆಗೂ ತಂದೆಯ ಮನೆಗೂ ಕೇವಲ ಒಂದು ರಸ್ತೆಯ ಅಂತರವಿದೆ. ಇನ್ನು ನನ್ನ ತಂದೆ ಇರುವ ಮನೆ ನನ್ನ ತಾತನ ಆಸ್ತಿಯಾಗಿದ್ದು. ಇದರಲ್ಲಿ ನನಗೂ ಹಕ್ಕಿದೆ. ನಮ್ಮ ಮನೆಯ ಬಳಿ ಶೌಚಾಲಯ ನಿರ್ಮಿಸಲು ಸ್ಥಳವಿರಲಿಲ್ಲ. ಹೀಗಾಗಿ ಅಪ್ಪನ ಮನೆಯ ಪಕ್ಕದಲ್ಲಿ ಜಾಗವಿದ್ದರಿಂದ ವಿರೋಧದ ನಡುವೆಯೂ ಅಲ್ಲಿಯೇ ಶೌಚಾಲಯವನ್ನು ನಿರ್ಮಿಸಲಾಗುತ್ತಿತ್ತು ಎಂದು ವಚನ ಹೇಳಿದ್ದಾಳೆ.
ಶೌಚಾಲಯ ನಿರ್ಮಾಣ ಶೇ.75ರಷ್ಟು ಪೂರ್ಣಗೊಂಡಿತ್ತು. ಸೆಪ್ಟೆಂಬರ್ 2 ರಂದು ನಾನು, ಅಮ್ಮ ಮತ್ತು ನನ್ನ ತಂಗಿ ಹೆಚ್.ಡಿ. ಕೋಟೆಯಲ್ಲಿರುವ ಅಜ್ಜಿಯ ಮನೆಗೆ ಹೋಗಿದ್ದೆವು. ಸೆ.4 ರಂದು ಮರಳಿ ಮನೆಗೆ ಬಂದಾಗ ಶೌಚಾಲಯ ನೆಲಸಮಗೊಂಡಿತ್ತು ಎಂದು ಬಾಲಕಿ ಹೇಳಿದ್ದಾಳೆ.
ನನ್ನ ಪತಿ ಚಾಮರಾಜನಗರದ ಬಿಇಒ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದಾರೆ. ಶೌಚಾಲಯ ನೆಲಸಮ ಮಾಡಿರುವ ಕುರಿತಂತೆ ಇಲ್ಲಿನ ಎಸ್ ಪಿ ಕುಲ್ದೀಪ್ ಕುಮಾರ್ ಜೈನ್ ಅವರ ಬಳಿ ದೂರು ದಾಖಲಿಸಿದ್ದೆ. ಪತಿ ಕೆ.ಎಂ. ಜ್ಯೋತಿ ಪ್ರಕಾಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದೆ. ಆದರೆ, ಈ ವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಬಾಲಕಿಯ ತಾಯಿ ಸುಮತಿ ಅವರು ಹೇಳಿದ್ದಾರೆ.
ಪತಿ ನೀಡುತ್ತಿರುವ ರು.4,500 ಹಣದಿಂದಲೇ ಮನೆಯ ಎಲ್ಲಾ ಖರ್ಚುವೆಚ್ಚಗಳನ್ನು ನಿಭಾಯಿಸುತ್ತಿದ್ದು, ಮತ್ತೆ ಸಾಲ ಪಡೆದು ಶೌಚಾಲಯ ನಿರ್ಮಿಸುವ ಶಕ್ತಿ ನನ್ನಲ್ಲಿಲ್ಲ. ಶೌಚಾಲಯ ನಿರ್ಮಿಸಲು ಜಿಲ್ಲಾಧಿಕಾರಿಗಳು ಸಹಾಯ ಮಾಡಬೇಕಿದೆ ಮತ್ತು ನಿರ್ಮಾಣ ಹಂತದಲ್ಲಿದ್ದ ಶೌಚಾಲಯವನ್ನು ನೆಲಸಮ ಮಾಡಿದ ಪತಿಯ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಅವರು ಅಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ ಪಿ ಜೈನ್ ಅವರು, ಯಾವುದೇ ರೀತಿಯ ನೆಲಸಮವನ್ನು ಮಾಡಿಲಾಗಿಲ್ಲ. ಪತ್ನಿಯ ಮನೆಯಲ್ಲಿಯೇ ಶೌಚಾಲಯ ನಿರ್ಮಾಣಕ್ಕೆಂದು ಜ್ಯೋತಿ ಪ್ರಕಾಶ್ ಜಾಗ ಮಾಡಿದ್ದಾರೆ. ಆದರೆ, ಅಲ್ಲಿ ಶೌಚಾಲಯ ನಿರ್ಮಿಸಲು ಅವರು ತಯಾರಿಲ್ಲ. ತಮ್ಮ ಮನೆಯಲ್ಲಿರುವ ಸ್ಥಳದಲ್ಲಿಯೇ ಶೌಚಾಲಯ ನಿರ್ಮಿಸುವಂತೆ ಸುಮತಿಯವರಿಗೆ ಸಲಹೆ ನೀಡಿದ್ದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


