ದಕ್ಷ ಅಧಿಕಾರಿ ಡಿ.ಕೆ.ರವಿ ಕುಟುಂಬ ರಕ್ಷಣೆಗೆ ಮುಂದಾದ ಜಿಲ್ಲಾಡಳಿತ
ದಕ್ಷ ಅಧಿಕಾರಿ ಡಿ.ಕೆ.ರವಿ ಸಾವನ್ನಪ್ಪಿ ವರ್ಷಗಳು ಕಳೆದರೂ ಅವರ ಕುಟುಂಬಸ್ಥರ ಕಷ್ಟಗಳ ಕಡೆ ಮುಖ ಹಾಕಿ ನೋಡದ ಸರ್ಕಾರ ಇದೀಗ ಮುಖಮಾಡಿ ನೋಡಿದ್ದು, ಡಿ.ಕೆ.ರವಿ...

ಬೆಂಗಳೂರು: ದಕ್ಷ ಅಧಿಕಾರಿ ಡಿ.ಕೆ.ರವಿ ಸಾವನ್ನಪ್ಪಿ ವರ್ಷಗಳು ಕಳೆದರೂ ಅವರ ಕುಟುಂಬಸ್ಥರ ಕಷ್ಟಗಳ ಕಡೆ ಮುಖ ಹಾಕಿ ನೋಡದ ಸರ್ಕಾರ ಇದೀಗ ಮುಖಮಾಡಿ ನೋಡಿದ್ದು, ಡಿ.ಕೆ.ರವಿ ಕುಟುಂಬದ ರಕ್ಷಣೆಗೆ ಮುಂದಾಗಿದೆ.
ಡಿ.ಕೆ.ರವಿ ಕುಟುಂಬಸ್ಥರ ಕೂಗನ್ನು ಕೇಳಿರುವ ಜಿಲ್ಲಾಡಳಿತ ಮಂಡಳಿಯು ಇದೀಗ ಕುಟುಂಬಸ್ಥರಿಗೆ ಸೌಲಭ್ಯಗಳನ್ನು ವಿತರಣೆ ಮಾಡಿದೆ. ಡಿ.ಕೆ. ರವಿ ಅಂತಿಮ ಸಂಸ್ಕಾರದ ವೇಳೆ ಹಾಕಿದ್ದ ಶಾಮಿಯಾನದ ಬಾಡಿಗೆ ಹಣವನ್ನು ಜಿಲ್ಲಾಡಳಿತವು ಶುಕ್ರವಾರ ಚೆಕ್ ಮೂಲಕ ರವಿ ಅವರ ತಾಯಿಗೆ ನೀಡಿದೆ.
ಕೆಲ ದಿನಗಳ ಹಿಂದಷ್ಟೇ ರವಿ ಅವರ ತಾಯಿ, ಅಂತಿಮ ಸಂಸ್ಕಾರದ ವೇಳೆ ಹಾಕಿದ್ದ ಶಾಮಿಯಾನದ ಬಾಡಿಗೆ ಹಣವನ್ನು ಪಾವತಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಹಣವನ್ನು ಸರ್ಕಾರವೇ ಭರಿಸಬೇಕಿದೆ ಎಂದು ಹೇಳಿದ್ದರು. ಅಲ್ಲದೆ, ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಂಡಳಿಯು ರು.35 ಸಾವಿರ ಹಣವನ್ನು ಚೆಕ್ ಮೂಲಕ ನೀಡಿದೆ.
ನಿನ್ನೆಯಷ್ಟೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅವರು, ಡಿ.ಕೆ.ರವಿ ಅವರ ಕುಟುಂಬಕ್ಕೆ ಜಿಲ್ಲಾಡಳಿತದ ವತಿಯಿಂದ ನೀಡಲಾದ ನಾನಾ ಸೌಲಭ್ಯಗಳ ವಿತರಣೆ ಕುರಿತಂತೆ ಮಾತನಾಡಿದರು.
ರವಿ ಪೋಷಕರು ಸಾಗುವಳಿ ಮಾಡುತ್ತಿರುವ ಬಗರ್ ಹುಕುಂ ಭೂಮಿಯ 2.20 ಗುಂಟೆಯಲ್ಲಿ 9 ಗುಂಟೆ ಮಾತ್ರ ಮಂಜೂರಾಗಿದ್ದು, ಉಳಿದ ಭೂಮಿ ಕುರಿತಂತೆ ಕೇಸ್ ನ್ನು ಮತ್ತೆ ತೆಗೆದು ಪರಿಶೀಲನೆ ನಡೆಸಿ ಮರು ಮಂಜೂರಾತಿ ಮಾಡುವಂತೆ ಶಾಸಕರ ನೇತೃತ್ವದ ಬಗರ್ ಹುಕುಂ ಸಮಿತಿಯ ಮುಂದೆ ಮಂಡಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲಾಡಳಿತ ಮತ್ತು ಸರ್ಕಾರ ಮಾನವೀಯ ನೆಲೆಯಲ್ಲಿ ಡಿ.ಕೆ. ರವಿ ಅವರ ತಾಯಿ ಗೌರಮ್ಮ ಮತ್ತು ತಂದೆ ಕರಿಯಪ್ಪ ಅವರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿಯಲ್ಲಿ ಪ್ರತೀ ತಿಂಗಳು ತಲಾ ರು.500 ಹಣವನ್ನು ಮಾಸಾಶನ ವೇತನವನ್ನು ಮಂಜೂರು ಮಾಡಲಿದೆ. ಅಲ್ಲದೆ, ಅವರ ಕೃಷಿ ಭೂಮಿಗೆ ಕೃಷಿ ಇಲಾಖೆಯಿಂದ ಕೃಷಿ ಹೊಂಡವನ್ನು ನಿರ್ಮಿಸಿಕೊಡುವ ಕಾಮಗಾರಿಯನ್ನೂ ಆರಂಭಿಸಿದೆ.
ಇನ್ನು ರವಿ ಅವರ ಸಹೋದರ ರಮೇಶ್ ಅವರಿಗೆ ಪ್ರವಾಸೋದ್ಯ ಇಲಾಖೆ ವತಿಯಿಂದ ಬ್ಯಾಂಕ್ ಸಾಲದ ರೂಪದಲ್ಲಿ ವಾಹನ ಸೌಲಭ್ಯವನ್ನು ಮಾಡಲು ಜಿಲ್ಲಾಡಳಿತ ಮುಂದಾಗಿದೆ. ರವಿ ಅವರ ಆಶಯದಂತೆಯೇ ದೊಡ್ಡಕೊಪ್ಪಲಿನಲ್ಲಿರುವ ಸರ್ಕಾರಿ ಶಾಲೆಯನ್ನು ಎಚ್.ಪಿ.ಗ್ಯಾಸ್ ಕಂಪನಿಯವರು ದುರಸ್ತಿ ಮಾಡಲು ಮುಂದೆ ಬಂದಿದ್ದು, ಅದೂ ಕೂಡ ಕಾರ್ಯಗತಗೊಳ್ಳಲಿದೆ.
ಕೋಲಾರ ಜಿಲ್ಲೆಯನ್ನು ಪೋಡಿಮುಕ್ತ ಜಿಲ್ಲೆಯಾಗಿ ಮಾಡುವ ಹಂಬಲವನ್ನು ರವಿ ಅವರು ಹೊಂದಿದ್ದರು. ಅವರ ಆಸೆಯಂತೆಯೇ ದೊಡ್ಡಕೊಪ್ಪಲು ಗ್ರಾಮವನ್ನು ಪೋಡಿಮುಕ್ತ ಗ್ರಾಮವನ್ನಾಗಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


