ರಾಜ್ಯ

ರೈತರ ಪವರ್ ಇನ್ನೂ ತಿಳಿದಿಲ್ಲ, ಸಿಡಿದೆದ್ದರೆ ಗೊತ್ತಾಗುತ್ತೆ: ರಮ್ಯಾಗೆ ದರ್ಶನ್ ಟಾಂಗ್

ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ವಿರೋಧಿಸಿ ಕಳೆದ 3 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ಗುರುವಾರ ತಾರಾಮೆರುಗು ಬಂದಿದ್ದು, ಚಿತ್ರರಂಗದ ಖ್ಯಾತನಾಮರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ರೈತರ ಪವರ್ ಇನ್ನೂ ತಿಳಿದಿಲ್ಲ, ಸಿಡಿದೆದ್ದರೆ ಗೊತ್ತಾಗುತ್ತೆ: ರಮ್ಯಾಗೆ ದರ್ಶನ್ ಟಾಂಗ್
ನಟ ದರ್ಶನ್ ಹಾಗೂ ನಿರ್ದೇಶಕ ಜೋಗಿ ಪ್ರೇಮ್ (ಸಂಗ್ರಹ ಚಿತ್ರ)
Published On :

ಮಂಡ್ಯ: ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ವಿರೋಧಿಸಿ ಕಳೆದ 3 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ಗುರುವಾರ ತಾರಾಮೆರುಗು ಬಂದಿದ್ದು,  ಚಿತ್ರರಂಗದ ಖ್ಯಾತನಾಮರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಮಂಡ್ಯದಲ್ಲಿ ನಡೆದ ರೈತಪರ ಸಂಘಟನೆಗಳ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನಟ ದರ್ಶನ್ ಅವರು ಮಂಡ್ಯಗೆ ಬರಲು ಸೆಕ್ಯುರಿಟಿ ಬೇಕು ಎಂದಿದ್ದ ಮಾಜಿ ಸಂಸದೆ ನಟಿ ರಮ್ಯಾಗೆ ಟಾಂಗ್  ನೀಡಿದ್ದಾರೆ. ರಮ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ತಾನು ಇಲ್ಲಿಗೆ ಓರ್ವ ನಟನಾಗಿ ಬಂದಿಲ್ಲ. ಸಾಮಾನ್ಯ ಪ್ರಜೆಯಾಗಿ ಬಂದಿದ್ದೇನೆ. ನಾನು ಕೂಡ ಇಲ್ಲಿನ ನೀರು ಮತ್ತು ಉಪ್ಪು  ತಿಂದಿದ್ದೇನೆ. ಹೀಗಾಗಿ ಆ ಉಪ್ಪಿನ ಋಣ ತೀರಿಸಲು ಇಲ್ಲಿಗೆ ಬಂದಿದ್ದೇನೆ. ಮಂಡ್ಯಗೆ ನನ್ನ ಭೇಟಿ ಇದೇ ಮೊದಲೇನಲ್ಲ. ಈ ಹಿಂದೆ ಸಾಕಷ್ಟು ಬಾರಿ ಇದೇ ಕಾವೇರಿ ವಿಚಾರವಾಗಿ ಬಂದಿದ್ದೇನೆ.  ಮುಂದೆಯೂ ಬರುತ್ತೇನೆ. ಇಲ್ಲಿಗೆ ಬರಲು ನನಗಾವುದೇ ಭಯವಿಲ್ಲ. ತನಗೆ ಯಾವ ಸೆಕ್ಯೂರಿಟಿಯೂ ಇಲ್ಲ. ಯಾರ ಭದ್ರತೆಯೂ ಬೇಕಿಲ್ಲ. ರೈತರ ಪವರ್ ಇನ್ನೂ ತಿಳಿದಿಲ್ಲ. ಅವರು ಸಿಡಿದೆದ್ದರೆ  ಅವರನ್ನು ಯಾರಿಂದಲೂ ತಡೆಯೋಕ್ಕಾಗಲ್ಲ ಎಂದು ಹೇಳುವ ಮೂಲಕ ದರ್ಶನ್ ಪರೋಕ್ಷ ಟಾಂಗ್ ನೀಡಿದರು.

ಮಂಡ್ಯದ ಜನ ಒರಟು, ಆದರೆ ಅವರ ಮನಸ್ಸು ಸಿಹಿ: ಜೋಗಿ ಪ್ರೇಮ್
ಇನ್ನು ಮಂಡ್ಯದ ಸಂಜಯ್ ವೃತ್ತದಲ್ಲಿ ಕನ್ನಡಪರ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಖ್ಯಾತ ಚಿತ್ರ ನಿರ್ದೇಶಕ ಜೋಗಿ ಪ್ರೇಮ್ ಪಾಲ್ಗೊಂಡಿದ್ದರು. ಅಲ್ಲದೆ ಚಿತ್ರರಂಗದ ಇತರರೂ  ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಪ್ರೇಮ್, ಮೈಸೂರಿನಲ್ಲಿ ಗಾಂಧಿಗಿರಿ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ  ಕೆಲ ಪ್ರತಿಭಟನಾಕಾರರು ರಸ್ತೆಯಲ್ಲಿ ಸಿಕ್ಕಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಈಗ ಸಮಯವಾಯಿತೇ ಎಂದು ಕೇಳಿದರು. ಆದರೆ ಕಾವೇರಿ ಪ್ರತಿಭಟನೆ ನಮ್ಮ ಬೆಂಬಲ ಎಂದಿಗೂ ಇರುತ್ತದೆ.  ಕಾರಣಾಂತರಗಳಿಂದ ನಾವು ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ. ಈಗ ಪ್ರತಿಭಟನೆಗೆ ನಮ್ಮ ಗಾಂಧಿಗಿರಿ ಚಿತ್ರತಂಡದೊಂದಿಗೆ ಆಗಮಿಸಿ ಬೆಂಬಲ ನೀಡುತ್ತಿದ್ದೇವೆ ಎಂದು ಹೇಳಿದರು.

ಇದೇ ವೇಳೆ ಮಂಡ್ಯಗೆ ಬರುವ ಕುರಿತು ನಟಿ ರಮ್ಯಾ ನೀಡಿದ್ದ ಹೇಳಿಕೆ ಕುರಿತಂತೆ ಮಾತನಾಡಿದ ಪ್ರೇಮ್, ಮಂಡ್ಯಗೆ ಬರಲು ಯಾವುದೇ ಭಯ ಬೇಡ. ಇಲ್ಲಿನ ಜನ ಒರಟಾದರೂ ಅವರ  ಮನಸ್ಸು ಮಾತ್ರ ಸಿಹಿ. ಅವರು ಎಷ್ಟು ಕೋಪಿಸಿಕೊಳ್ಳುತ್ತಾರೆಯೋ ತಮ್ಮನ್ನು ಪ್ರೀತಿಸುವವರನ್ನೂ ಅಷ್ಟೇ ಪ್ರೀತಿಯಿಂದ ನಡೆಸಿಕೊಳ್ಳುತ್ತಾರೆ. ಹೀಗಾಗಿ ಮಂಡ್ಯಗೆ ಬರಲು ಯಾವುದೇ ಭಯ ಬೇಡ  ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.