"ಕಾವೇರಿ"ದ ಪ್ರತಿಭಟನೆ: ನಾರಿಮನ್ ಬದಲಾವಣೆಗೆ ಮಂಡ್ಯ ವಕೀಲರ ಸಂಘ ಆಗ್ರಹ
ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮಂಡ್ಯದಲ್ಲಿ ಆಕ್ರೋಶ ಭುಗಿಲೆದ್ದಿರುವಂತೆಯೇ ರೈತರ ಹೋರಾಟಕ್ಕೆ ವಕೀಲರು ಕೂಡ ಸಾಥ್ ನೀಡಿದ್ದಾರೆ.

ಮಂಡ್ಯ: ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮಂಡ್ಯದಲ್ಲಿ ಆಕ್ರೋಶ ಭುಗಿಲೆದ್ದಿರುವಂತೆಯೇ ರೈತರ ಹೋರಾಟಕ್ಕೆ ವಕೀಲರು ಕೂಡ ಸಾಥ್ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ ವಿರೋಧಿ ಮಂಡ್ಯದಲ್ಲಿ ಕಾವೇರಿ ಹಿತರಕ್ಷಣಾ ಸಮಿತಿ ಮಂಡ್ಯ ಬಂದ್ ಆಚರಿಸುತ್ತಿರುವಂತೆಯೇ ಬಂದ್ ಗೆ ಬೆಂಬಲ ನೀಡಿರುವ ಮಂಡ್ಯ ವಕೀಲರ ಒಕ್ಕೂಟ, ಕರ್ನಾಟಕದ ಪರ ವಕೀಲ ಫಾಲಿ ನಾರಿಮನ್ ರನ್ನು ಕೂಡಲೇ ಬದಲಾಯಿಸುವಂತೆ ಆಗ್ರಹಿಸಿದೆ. ಮಂಡ್ಯದಲ್ಲಿ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿದ ಮಂಡ್ಯ ವಕೀಲರ ಸಂಘದ ಸದಸ್ಯರು, ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಪರ ವಕೀಲ ಫಾಲಿ ನಾರಿಮನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಪರ ವಕೀಲರಾದ ನಾರಿಮನ್ ಅವರು ಸಮರ್ಥ ವಾದ ಮಂಡಿಸುವಲ್ಲಿ ಪದೇ ಪದೇ ವಿಫಲರಾಗುತ್ತಿದ್ದು, ಹೀಗಾಗಿ ಅವರ ಬದಲಾವಣೆ ಅನಿವಾರ್ಯವಾಗಿದೆ. ಕಾವೇರಿ ವಿಚಾರದಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದು, ಅವರ ಬದಲಾವಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಾವು ಮನವಿ ಸಲ್ಲಿಸುತ್ತಿದ್ದೇವೆ. ಅಂತೆಯೇ ಪ್ರಕರಣ ಸಂಬಂಧ ಎಲ್ಲ ರೀತಿಯ ದಾಖಲೆಗಳನ್ನು ತಾವು ಕಲೆಹಾಕುತ್ತಿದ್ದು, ಸುಪ್ರೀಂ ಕೋರ್ಟ್ ನಲ್ಲಿ ಕನ್ನಡಿಗ ವಕೀಲರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸುತ್ತೇವೆ. ಕನ್ನಡ ನೆಲ-ಜಲ ಸಂಸ್ಕೃತಿಯ ಪರಿಚಯವಿರುವ ಕನ್ನಡಿಗ ವಕೀಲರನ್ನೇ ನೇಮಿಸುವಂತೆ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ಮಂಡ್ಯ ವಕೀಲರ ಸಂಘದ ಸದಸ್ಯರು ಹೇಳಿದರು.
ಔದಾರ್ಯ ತೋರಿ ಎಡವಿದ ರಾಜ್ಯ ಸರ್ಕಾರ
ಇದೇ ವೇಳೆ ಸುಪ್ರೀಂಕೋರ್ಟ್ ನಲ್ಲಿನ ರಾಜ್ಯ ಸರ್ಕಾರದ ವಾದ ಮಂಡನೆಯನ್ನು ಟೀಕಿಸಿದ ವಕೀಲರು, ತಮಿಳುನಾಡಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡಲು ಮಾತ್ರ ಸಾಧ್ಯ ಎಂದು ಸರ್ಕಾರ ವಾದ ಮಂಡಿಸಿತ್ತು. ಸರ್ಕಾರದ ಈ ವಾದವೇ ತಮಿಳುನಾಡು ಪರ ತೀರ್ಪು ಬರಲು ಕಾರಣವಾಯಿತು ಎಂದು ಕೆಲ ವಕೀಲರು ಆರೋಪಿಸಿದ್ದಾರೆ. ಸರ್ಕಾರ 10 ಸಾವಿರ ಕ್ಯೂಸೆಕ್ ನೀರು ಬಿಡಲು ಸಿದ್ಧ ಎಂದಾಗ ತಮಿಳುನಾಡು 20 ಸಾವಿರ ಕ್ಯೂಸೆಕ್ ನೀರು ಕೇಳಿತು. ಹೀಗಾಗಿ ಸುಪ್ರೀಂ ಕೋರ್ಟ್ ಎರಡರ ನಡುವಿನ ಸಂಖ್ಯೆ ಅಂದರೆ 15 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದೆ. ಒಂದು ಕರ್ನಾಟಕ ಸರ್ಕಾರ ತನ್ನ ವಾದ ಮಂಡನೆ ವೇಳೆ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ವಾದ ಮಂಡಿಸಿದ್ದರೆ ಆಗ ಚಿತ್ರಣವೇ ಬದಲಾಗಿರುತ್ತಿತ್ತು ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


