ಹುಬ್ಬಳ್ಳಿ: ಪ್ರೇಯಸಿ ಕೊಲೆ ಮಾಡಿ ದೃಶ್ಯ ಸಿನಿಮಾ ಮಾದರಿಯಲ್ಲಿ ಸಾಕ್ಷಿನಾಶ ಪಡಿಸಿದ್ದ ಆರೋಪಿ ಬಂಧನ
ಕಳೆದ ವರ್ಷ ಮೇ ನಲ್ಲಿ ನಡೆದಿದ್ದ ಯುವತಿ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು ಸುಮಾರು ಒಂದೂವರೆ ವರ್ಷದ ನಂತರ ಹುಬ್ಬಳ್ಳಿ–ಧಾರವಾಡ ಪೊಲೀಸರು...

ಹುಬ್ಬಳ್ಳಿ: ಕಳೆದ ವರ್ಷ ಮೇ ನಲ್ಲಿ ನಡೆದಿದ್ದ ಯುವತಿ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು ಸುಮಾರು ಒಂದೂವರೆ ವರ್ಷದ ನಂತರ ಹುಬ್ಬಳ್ಳಿ–ಧಾರವಾಡ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ಹುಬ್ಬಳ್ಳಿಯಲ್ಲಿನ ಗಬ್ಬೂರ ಕ್ರಾಸ್ ಬಳಿ ಒಂದೂವರೆ ವರ್ಷದ ಹಿಂದೆ ವಿಜಯಾಪುರ ಮೂಲದ ಅರ್ಪಿತಾ ಬಿರಾದರ್ ಎಂಬ ಯುವತಿಯನ್ನು ಹತ್ಯೆ ಮಾಡಲಾಗಿತ್ತು. ಕೊಲೆ ಮಾಡಿದ ಆರೋಪದ ಮೇರೆಗೆ ಅರುಣಕುಮಾರ ಶಿವಲಿಂಗಪ್ಪ ಪಾಟೀಲ (24) ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿ ಮೂಲತಃ ವಿಜಯಪುರದ ಆದರ್ಶ ನಗರ ನಿವಾಸಿ. ಬೆಂಗಳೂರಿನಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾನೆ. ಅರುಣ ಮತ್ತು ಅರ್ಪಿತಾ ಇಬ್ಬರೂ ವಿಜಯಪುರದಲ್ಲಿ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದರು. ಮೂರು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು.
ಮದುವೆ ಆಗುವಂತೆ ಅರ್ಪಿತಾ ಆತನನ್ನು ಒತ್ತಾಯಿಸುತ್ತಿದ್ದರು. ಆದರೆ, ಓದುವುದಕ್ಕೆ ಅಡ್ಡಿಯಾಗುತ್ತದೆ ಎಂದು ಆತ ಮದುವೆಗೆ ನಿರಾಕರಿಸಿದ್ದ. ಆದರೂ ಒತ್ತಡ ಹೆಚ್ಚಾದಾಗ ಆಕೆಯನ್ನು ಕೊಲ್ಲಲು ನಿರ್ಧರಿಸಿ, 2015ರ ಮೇ 30ರಂದು ಸಂಜೆ ಗಬ್ಬೂರ ಕ್ರಾಸ್ ಬಳಿ ಹೊಲದಲ್ಲಿ ಆಕೆಯನ್ನು ಥಳಿಸಿ, ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಹೊಲದಲ್ಲಿಯೇ ಶವವನ್ನು ಬಿಟ್ಟು ಹೋಗಿದ್ದ. ಸುಮಾರು 3 ದಿನಗಳ ನಂತರ ಶವ ಗುರುತು ಹಿಡಿಯಲು ಆಗದೇ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು, ಅರ್ಪಿತಾ ದೇಹದ ಹಲವು ಭಾಗಗಳು ಬೀದಿನಾಯಿಗಳಿಗೆ ಆಹಾರ ವಾಗಿದ್ದವು.
ಅರ್ಪಿತಾ ತಂದೆ ನಾಪತ್ತೆ ಪ್ರಕರಣ ದಾಖಲಿಸಿದ ನಂತರ ಶವವನ್ನು ಪರಿಶೀಲಿಸಲಾಯಿತು. ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಲಾಕೆಟ್ ನ ಆಧಾರದ ಮೇಲೆ ಆಕೆಯ ತಮ್ಮ ಮಗಳು ಎಂದು ಪೋಷಕರು ಪತ್ತೆ ಹಚ್ಚಿದ್ದರು.
ದೃಶ್ಯ ಸಿನಿಮಾ ನೋಡಿ ಪ್ರಭಾವಿತನಾಗಿದ್ದ ಆತ ಕೊಲೆ ಮಾಡಿ ಸಿಕ್ಕಿ ಹಾಕಿಕೊಳ್ಳದಂತೆ ಸಂಚು ರೂಪಿಸಿದ್ದ. ಆರೋಪಿಗೆ ಡೈರಿ ಬರೆಯುವ ಹವ್ಯಾಸವಿತ್ತು. ತಾನು ತಪ್ಪಿಸಿಕೊಳ್ಳುವುದು ಹೇಗೆ? ಪೊಲೀಸರಿಗೆ ಯಾವ ರೀತಿ ಉತ್ತರ ಹೇಳಬೇಕು ಎಂಬುದನ್ನೆಲ್ಲ ಡೈರಿಯಲ್ಲಿ ಬರೆದಿಟ್ಟಿದ್ದ. ಇತ್ತೀಚೆಗೆ ಆತನ ಮನೆಯಲ್ಲಿ ತಪಾಸಣೆ ನಡೆಸಿದಾಗ ಸಿಕ್ಕ ಡೈರಿ ಪ್ರಕರಣ ಭೇದಿಸಲು ನೆರವಾಯಿತು ಎಂದು ಪೊಲೀಸ್ ಕಮಿಷನರ್ ಪಾಂಡುರಂಗ ರಾಣೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


