ಮೈಸೂರು ಅರಮನೆಯೊಳಗೆ ಫೋಟೋಶೂಟ್; ಸಾಮಾಜಿಕ ತಾಣಗಳಲ್ಲಿ ಆಕ್ರೋಶ
ವಿಶ್ವವಿಖ್ಯಾತ ಮೈಸೂರು ಅರಮನೆಯೊಳಗೆ ಪೋಟೋ ತೆಗೆಯಲು ಅಥವಾ ಚಿತ್ರೀಕರಣಕ್ಕೆ ಯಾರಿಗೂ ಅವಕಾಶವಿಲ್ಲ ಎಂಬ ನಿಯಮವಿದೆ.

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯೊಳಗೆ ಪೋಟೋ ತೆಗೆಯಲು ಅಥವಾ ಚಿತ್ರೀಕರಣಕ್ಕೆ ಯಾರಿಗೂ ಅವಕಾಶವಿಲ್ಲ ಎಂಬ ನಿಯಮವಿದೆ. ಆದರೆ ಈ ನಿಯಮವನ್ನು ಗಾಳಿಗೆ ತೂರಿ ಹೊರರಾಜ್ಯದ ಚಿತ್ರತಂಡಕ್ಕೆ ಫೋಟೋ ಶೂಟ್ ಗೆ ಅವಕಾಶ ಕೊಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಕನ್ನಡ ಸಿನಿಮಾಗಳಿಗೆ ಹಾಗು ಸೂಪರ್ ಸ್ಟಾರ್ ರಜನಿಕಾಂತ್ ಅವರ ಲಿಂಗ ಸಿನಿಮಾಕ್ಕೂ ಮೈಸೂರು ಅರಮನೆಯಲ್ಲಿ ಶೂಟಿಂಗ್ ನಡೆಸಲು ಅವಕಾಶ ಕೊಟ್ಟಿರಲಿಲ್ಲ. ಆದರೆ ಇದೀಗ ಅರಮನೆಯೊಳಗೆ ವಿವಾಹ ಪೂರ್ವ ಫೋಟೋ ಶೂಟ್ ನಡೆಸಲು ಅನುಮತಿ ಕೊಟ್ಟಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇದು ನಿಜವಾದ ವಿಡಿಯೋವೇ , ನಕಲಿಯೇ, ಪ್ರಚಾರದ ಗಿಮಿಕ್ಕೋ ಎಂಬುದು ಇನ್ನಷ್ಟೇ ತಿಳಿದುಬರಬೇಕಾಗಿದೆ.
ಬೆಂಗಳೂರಿನ ಆದಿತ್ಯ ಬಿಎನ್ ಮತ್ತು ನವ್ಯತಾಗೆ ಮೈಸೂರು ಅರಮನೆಯೊಳಗೆ ರಾಜಾರೋಷವಾಗಿ ಫೋಟೋ ಶೂಟ್ ನಡೆಸಲು ಅನುಮತಿ ಕೊಟ್ಟವರು ಯಾರು? ಭಾರೀ ಭದ್ರತೆ ಇರುವ ಅರಮನೆಯೊಳಗೆ ಹೋಗಲು ನೆರವು ನೀಡಿದವರು ಯಾರು ಎಂಬ ಹಲವು ಪ್ರಶ್ನೆಗಳು, ಸಂದೇಹಗಳು ಕೇಳಿಬರುತ್ತಿವೆ.
ಫೋಟೋ ಶೂಟ್ ನಲ್ಲಿ ಹುಡುಗ ಮತ್ತು ಹುಡುಗಿ ಮೈಸೂರು ಅರಮನೆಯ ದರ್ಬಾರ್ ಹಾಲ್, ಖಾಸಗಿ ಹಾಲ್, ಕಲ್ಯಾಣ ಮಂಟಪ ಮೊದಲಾದ ಕಡೆಗಳಲ್ಲಿ ಓಡಾಡುತ್ತಿರುವ ದೃಶ್ಯವಿದೆ. ಎಲ್ಲೆಡೆ ಹೆಲಿಕ್ಯಾಂ, ದೊಡ್ಡ ಕ್ಯಾಮರಾ ಬಳಸಿ ಫೋಟೋ ಶೂಟ್ ಗೆ ಅವಕಾಶ ನೀಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಈ ಫೋಟೋ ಶೂಟನ್ನು ಏಪ್ರಿಲ್ ನಲ್ಲಿ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ.
ಕಳೆದ ಫೆಬ್ರುವರಿ 27, 28ರಂದು ಆದಿತ್ಯ-ನವ್ಯಾ ವಿವಾಹ ಕಾರ್ಯಕ್ರಮ ನಡೆದಿತ್ತು. ಆದಿತ್ಯ ಮೂಲತಃ ಬೆಂಗಳೂರಿನವರೆ. ಲಂಡನ್ ನ ನ್ಯಾಟಿಂಗ್ಯಾಮ್ ವಿವಿಯಲ್ಲಿ ಎಂಎಸ್ಸಿ ಪದವಿ ಪಡೆದಿರುವುದಾಗಿ ಕೆಲವು ಮಾಧ್ಯಮದ ವರದಿಗಳು ತಿಳಿಸಿವೆ.
ನನಗೆ ಈ ಬಗ್ಗೆ ಮಾಹಿತಿ ಇಲ್ಲ: ರಾಣಿ ಪ್ರಮೋದಾದೇವಿ
ಫೋಟೋ ಶೂಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಣಿ ಪ್ರಮೋದಾದೇವಿ, ನನಗೆ ವೈಯಕ್ತಿಕವಾಗಿ ಮಾಹಿತಿ ಇಲ್ಲ. ವಿಶೇಷ ಸಂದರ್ಭಗಳಲ್ಲಿ ಮಾತ್ರ ನಾವು ಅಲ್ಲಿಗೆ ಹೋಗುತ್ತೇವೆ. ಅಲ್ಲಿಗೆ ಹೋದಾಗ ನಾವೇ ಫೋಟೋ ತೆಗೆಸಿಕೊಳ್ಳೋದಿಲ್ಲ. ನಾನೇ ಎಂದಿಗೂ ಕೂಡಾ ಒಳಗೆ ಹೋಗಿ ಫೋಟೋ ತೆಗೆಸಿಕೊಂಡಿಲ್ಲ. ರಾಜಮನೆತನದವರೇ ಫೋಟೋ ಶೂಟ್ ನಡೆಸಿಲ್ಲ. ಭದ್ರತಾ ಸಿಬ್ಬಂದಿಯವರನ್ನು ವಿಚಾರಿಸಬೇಕು. ಫೋಟೋ ಶೂಟ್ ನಡೆಸಲು ಅವರಿಗೆ ಯಾರು ಅವಕಾಶ ಕೊಟ್ಟರೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


