ಟಿಪ್ಪು ಜಯಂತಿ ಗಲಭೆ: ಕೊಡಗು ಡಿಸಿ, ಎಸ್ ಪಿ ಮೇಲೆ ತೂಗುಗತ್ತಿ
ತೀವ್ರ ವಿವಾದ ಮೂಡಿಸಿದ್ದ ಮಡಿಕೇರಿ ಟಿಪ್ಪು ಜಯಂತಿ ಸಂದರ್ಭದ ಗಲಭೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖಾ ಶಿಫಾರಸು ಒಪ್ಪಿ, ಜಾರಿಗೆ ತರಲು ...

ಬೆಂಗಳೂರು: ತೀವ್ರ ವಿವಾದ ಮೂಡಿಸಿದ್ದ ಮಡಿಕೇರಿ ಟಿಪ್ಪು ಜಯಂತಿ ಸಂದರ್ಭದ ಗಲಭೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖಾ ಶಿಫಾರಸು ಒಪ್ಪಿ, ಜಾರಿಗೆ ತರಲು ಮಂತ್ರಿ ಪರಿಷತ್ ಒಪ್ಪಿಗೆ ನೀಡಿದೆ.
ಕಳೆದ ವರ್ಷ ನವೆಂಬರ್ ನಲ್ಲಿ ನಡೆದ ಟಿಪ್ಪು ಜಯಂತಿ ಸಂದರ್ಭದಲ್ಲಿ ಪೊಲೀಸ್ ಮಹಾನಿರ್ದೇಶಕರ ಸೂಚನೆ ಇದ್ದರೂ, ಅದನ್ನು ಪಾಲಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ. ಟಿಪ್ಪು ಜಯಂತಿ ಆಚರಣೆಗೂ ಮುನ್ನ ಮುಖಂಡರ ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರೆ ಘಟನೆ ತಪ್ಪಿಸಬಹುದಿತ್ತು ಎಂದು ವರದಿಯಲ್ಲಿದೆ. ಹೀಗಾಗಿ, ಆ ಇಬ್ಬರೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಕಾರ್ಯಕಾರಿ ಹುದ್ದೆಗಳನ್ನು ನೀಡಬಾರದು ಎಂದು ತೀರ್ಮಾನಿಸಲಾಗಿದೆ.
ಮ್ಯಾಜಿಸ್ಟ್ರೇಟ್ ತನಿಖಾ ಶಿಫಾರಸಿನಲ್ಲಿ ಅಂದಿನ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹಮದ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರು ರಜೆ ಮೆಲೆ ತೆರಳಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ತಿಳಿಸಲಾಗಿದೆ.
ಇಬ್ಬರ ವಿರುದ್ಧವೂ ಇಲಾಖಾ ವಿಚಾರಣೆ ನಡೆಸುವುದಲ್ಲದೆ, ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕರಿಗೂ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಗಲಭೆ ಸಂದರ್ಭದಲ್ಲಿ ಸಾವಿಗೀಡಾದ ಕುಟ್ಟಪ್ಪ ಅವರ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಮೇಲಿನಿಂದ ಬಿದ್ದ ಪರಿಣಾಮ ಉಂಟಾದ ಆಘಾತದಿಂದ ಕುಟ್ಟಪ್ಪ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ ಎಂದು ತಿಳಿಸಿದರು.
ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರದ ಪ್ರಮುಖ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲೆಯಲ್ಲಿನ ಇತರೆ ಇಲಾಖೆಗಳ ಎಲ್ಲ ಮುಖ್ಯಸ್ಥರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಇರಬೇಕು ಎಂದು ಸುತ್ತೋಲೆ ಹೊರಡಿಸಲು ಸಹ ಪರಿಷತ್ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


