ರಾಜ್ಯಸಭಾ ಚುನಾವಣೆ ಕುದುರೆ ವ್ಯಾಪಾರ ಪ್ರಕರಣ: ಸಂಕಷ್ಟದಲ್ಲಿ ಸಿಎಂ ಸಿದ್ದರಾಮಯ್ಯ
ರಾಜ್ಯಸಭಾ ಚುನಾವಣೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಕುದುರೆ ವ್ಯಾಪಾರ ಪ್ರಕರಣ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ...

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಕುದುರೆ ವ್ಯಾಪಾರ ಪ್ರಕರಣ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ ಹಾಕಲು ಶಾಸಕರು ಕುದುರೆ ವ್ಯಾಪಾರ ನಡೆಸುತ್ತಿರುವ ಬಗ್ಗೆ ಖಾಸಗಿ ಮಾಧ್ಯಮವೊಂದು ಸ್ಟಿಂಗ್ ಆಪರೇಶನ್ ನಡೆಸಿತ್ತು. ಕಾರ್ಯಾಚರಣೆಯಲ್ಲಿ ಶಾಸಕರೊಬ್ಬರು ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ ರಾಮಮೂರ್ತಿಗೆ ಮತ ಹಾಕಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ರು.100 ಕೋಟಿ ಹಣವನ್ನು ನೀಡುವುದಾಗಿ ಹೇಳಿದ್ದಾರೆಂದು ಹೇಳಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ರಾಜ್ಯಸಭಾ ಚುನಾವಣಾಧಿಕಾರಿ ಎಸ್.ಮೂರ್ತಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಶಾಸಕರ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡುವಂತೆ ತಿಳಿಸಿದ್ದಾರೆ.
ಪ್ರಕರಣ ಕುರಿತು ಸ್ಪಷ್ಟನೆ ಹಾಗೂ ದಾಖಲಾತಿ ಕೋರಿ ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಈ ವರೆಗೂ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಪ್ರತಿಕ್ರಿಯೆ ಬರದಿದ್ದ ಪಕ್ಷದಲ್ಲಿ ಮತ್ತೊಮ್ಮೆ ಪತ್ರವನ್ನು ಬರೆಯಲಾಗುತ್ತದೆ ಎಂದು ಎಸ್. ಮೂರ್ತಿಯವರು ಹೇಳಿದ್ದಾರೆ.
ಇನ್ನು ಪ್ರಕರಣ ಸಂಬಂಧ ರಾಜ್ಯ ಚುನಾವಣಾ ಆಯೋಗ ಈಗಾಗಲೇ ಈ ಬಗ್ಗೆ ಕೇಂದ್ರದ ಗಮನಕ್ಕೆ ತಂದಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಪತ್ರ ಬರೆದು ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.
ನಿಗದಿತ ಸಮಯಕ್ಕೆ ಚುನಾವಣೆ ನಡೆಸಿ: ದಿಗ್ವಿಜಯ್ ಸಿಂಗ್
ಇನ್ನು ಕುದುರೆ ವ್ಯಾಪಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗವು ಚುನಾವಣೆಯನ್ನು ಮುಂದೂಡಲು ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ನೇತೃತ್ವದ ಕಾಂಗ್ರೆಸ್ ನಿಯೋಗ ಸೋಮವಾರ ಕೇಂದ್ರ ಚುನಾವಣಾಧಿಕಾಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಮನವಿಯಲ್ಲಿ ಕಾಂಗ್ರೆಸ್ ಪಕ್ಷ ಯಾರಿಗೂ ಆಮಿಷ ಒಡ್ಡಿಲ್ಲ. ರಾಜ್ಯಸಭಾ ಚುನಾವಣೆ ಹೆಸರಿನಲ್ಲಿ ಕುದುರೆ ವ್ಯಾಪಾರ ನಡೆದಿಲ್ಲ ಎಂದು ಹೇಳಿದ್ದು, ಚುನಾವಣೆಯನ್ನು ಮುಂದೂಡದಂತೆ ನಿಗದಿತ ಸಮಯದಲ್ಲಿ ನಡೆಸುವಂತೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


