ಅಧಿಕಾರಿಗಳ ಆತ್ಮಹತ್ಯೆ ತಡೆಗೆ ಮಹಾ ಅಕಾಡೆಮಿಯಿಂದ ಉಚಿತ ಧ್ಯಾನ ಚಿಕಿತ್ಸೆ, ಹಾಟ್ಲೈನ್ ನಂಬರ್ ಘೋಷಣೆ
ಕರ್ನಾಟಕದ ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೈಂಡ್ ಹೆಲ್ತ್ ಆಕ್ಟಿವಿಟಿ ( ಮಹಾ ಅಕಾಡೆಮಿ)ಅಕಾಡೆಮಿ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

ಬೆಂಗಳೂರು: ಕರ್ನಾಟಕದ ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೈಂಡ್ ಹೆಲ್ತ್ ಆಕ್ಟಿವಿಟಿ (ಮಹಾ) ಅಕಾಡೆಮಿ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳದಂತೆ ಅಧಿಕಾರಿಗಳ ಮನಸ್ಥಿತಿಯನ್ನು ಧ್ಯಾನ ಚಿಕಿತ್ಸೆ ಮೂಲಕ ಪರಿವರ್ತಿಸಲು ಮಹಾ ಅಕಾಡೆಮಿ ಮುಂದಾಗಿದ್ದು, ಆತ್ಮಹತ್ಯೆ ನಿರ್ಧಾರ ಕೈಗೊಳ್ಳುವಂತಹ ಒತ್ತಡದಲ್ಲಿರುವ ಅಧಿಕಾರಿಗಳಿಗಾಗಿಯೇ ವಿಶೇಷ ಹಾಟ್ಲೈನ್ (ದೂರವಾಣಿ ನಂಬರ್ 080-65318595 )ನ್ನು ಜು.25 ರಂದು ಘೋಷಿಸಿದೆ. ಮಹಾ ಅಕಾಡೆಮಿ ಅಭಿಯಾನದ ಬಗ್ಗೆ ಜು.25 ರಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಪತ್ರಕರ್ತ, ವಿಶ್ಲೇಷಕ, ಮಹಾ ಅಕಾಡೆಮಿಯ ಅಧ್ಯಕ್ಷ ಡಾ. ಮನೀಷ್ ಮೋಕ್ಷಗುಂಡಂ, ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳ ಆತ್ಮಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಧ್ಯಾನ ತಂತ್ರದ ಮೂಲಕ ವಿವಿಧ ರೀತಿಯಲ್ಲಿ ಒತ್ತಡಕ್ಕೊಳಗಾಗಿರುವ ಅಧಿಕಾರಿಗಳು ಆತ್ಮಹತ್ಯೆ ನಿರ್ಧಾರದಿಂದ ದೂರವಾಗುವಂತೆ ಮಾಡುವುದಕ್ಕೆ ಸಾಧ್ಯವಿದೆ ಎಂದು ತಿಳಿಸಿದ್ದಾರೆ.
ಪದೇ ಪದೇ ನೋವು ಉಂಟಾದಾಗ ಮನಸ್ಸಿನಲ್ಲಿ ಆತ್ಮಹತ್ಯೆ ಯೋಚನೆಗಳು ಮೂಡುತ್ತವೆ, ಎಂತಹ ಒತ್ತಡದ ಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳು ಆಂತರಿಕವಾಗಿ ಸದೃಢರಾಗಬೇಕಾಗುತ್ತದೆ. ಪ್ರಜ್ಞಾಪೂರ್ವ ಧ್ಯಾನದ ಮೂಲಕ ಇದು ಸಾಧ್ಯವಾಗಲಿದ್ದು, ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗಿರುವ ಅಧಿಕಾರಿಗಳು ತಮಗೆ ಸಲಹೆ ಅಗತ್ಯವಿದ್ದಲ್ಲಿ 24X7 ಕಾರ್ಯನಿರ್ವಹಿಸುವ ಮಹಾ ಅಕಾಡೆಮಿ ಘೋಷಿಸಿರುವ ಹಾಟ್ಲೈನ್ ನಂಬರ್ ಗೆ ಕರೆ ಮಾಡಬಹುದುದಾಗಿದ್ದು, ಧ್ಯಾನ ಚಿಕಿತ್ಸೆ ಉಚಿತವಾಗಿರಲಿದೆ ಎಂದು ಹೇಳಿದ್ದಾರೆ.
ಒತ್ತಡಗಳ ಪರಿಣಾಮವಾಗಿ ಉಂಟಾಗುವ ಆತ್ಮಹತ್ಯೆ ತಡೆಗೆ ನೆರವಾಗುವಂತೆ ವಿದೇಶಗಳಲ್ಲಿ ಸರ್ಕಾರಗಳೇ ಹಾಟ್ಲೈನ್ ನಂಬರ್ ಗಳನ್ನೂ ಘೋಷಿಸಿವೆ, ಇಲ್ಲಿಯೂ ಅಂತಹ ವ್ಯವಸ್ಥೆ ಅಗತ್ಯವಿದ್ದು ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ, ಆದರೆ ಮಹಾ ಅಕಾಡೆಮಿ ವಿಶೇಷವಾಗಿ ಅಧಿಕಾರಿಗಳಿಗಾಗಿಯೇ ಹಾಟ್ಲೈನ್ ನಂಬರ್ ನ್ನು ಘೋಷಿಸಿದ್ದು, ಕರೆ ಮಾಡುವ ಅಧಿಕಾರಿಗಳ ಮಾಹಿತಿಯನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು ಎಂದು ಮನೀಷ್ ಮೋಕ್ಷಗುಂಡಂ ತಿಳಿಸಿದ್ದಾರೆ.
"ವಿಶ್ವ ಆತ್ಮಹತ್ಯಾ ತಡೆ ದಿನದ ಅಂಗವಾಗಿ ಮಹಾ ಅಕಾಡೆಮಿ 2014-15 ರಲ್ಲಿ ಪೂರ್ತಿ ಒಂದು ವರ್ಷ ಆತ್ಮಹತ್ಯಾ ತಡೆ ಅಭಿಯಾನವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹಮ್ಮಿಕೊಂಡಿತ್ತು. ಈ ವರೆಗೂ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದ 110 ಕ್ಕೂ ಹೆಚ್ಚು ಜನರು ಮಹಾ ಅಕಾಡೆಮಿಯ ಧ್ಯಾನ ಚಿಕಿತ್ಸೆ, ಆಪ್ತ ಸಲಹೆ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ. ಇದರಲ್ಲಿ ಯಾರೂ ಈ ವರೆಗೂ ಆತ್ಮಹತ್ಯೆಗೆ ಮತ್ತೊಮ್ಮೆ ಯತ್ನಿಸಿಲ್ಲ. ಮಹಾ ಅಕಾಡೆಮಿಯ ಈಗ ಹಮ್ಮಿಕೊಂಡಿರುವ ವಿನೂತನ ಅಭಿಯಾನದಿಂದ ಅಧಿಕಾರಿಗಳಿಗೆ ಉಪಯುಕ್ತವಾಗಲಿದೆ ಎಂದು ಡಾ. ಮನೀಷ್ ಮೋಕ್ಷಗುಂಡಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


