ರಾಜ್ಯ

ಮುಂದುವರೆದ ಸಾರಿಗೆ ನೌಕರರ ಮುಷ್ಕರ: ಹಲವೆಡೆ ಅಹಿತಕರ ಘಟನೆ

ಶೇಕಡಾ 35ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕೆಎಎಸ್‍ಆರ್‍ಟಿಸಿ, ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆಯ ಸುಮಾರು 1.23 ಲಕ್ಷ ನೌಕರರು...

ಮುಂದುವರೆದ ಸಾರಿಗೆ ನೌಕರರ ಮುಷ್ಕರ: ಹಲವೆಡೆ ಅಹಿತಕರ ಘಟನೆ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಶೇಕಡಾ 35ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕೆಎಎಸ್‍ಆರ್‍ಟಿಸಿ, ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆಯ ಸುಮಾರು 1.23 ಲಕ್ಷ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಜೋರಾಗಿಯೇ ನಡೆಯುತ್ತಿದೆ. ಹೋರಾಟದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರು ಕೂಡಾ ಭಾಗವಹಿಸಿದ್ದಾರೆ. ಸುಮಾರು 23 ಸಾವಿರ ಸರ್ಕಾರಿ ಬಸ್ಸುಗಳು ರಸ್ತೆಯಲ್ಲಿ ಹಾಗೇ ನಿಂತುಕೊಂಡಿದೆ. 
ಸರ್ಕಾರಿ ಬಸ್‍ಗಳ ಓಡಾಟ ಸ್ಥಗಿತದಿಂದ ಜನಜೀವನ ಸಂಪೂರ್ಣ ಸ್ತಬ್ದವಾಗಿದೆ. ಕೊಪ್ಪಳದಲ್ಲಿ ಬಸ್ ಸಿಗದೇ ಪ್ರಯಾಣಿಕರು ರಾತ್ರಿ ಬಸ್‍ಸ್ಟ್ಯಾಂಡ್‍ನಲ್ಲೇ ಮಲಗಿದ್ರು. ಹಾಸನದಲ್ಲೂ ಬಸ್‍ಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿದೆ. ಮಂಡ್ಯದಲ್ಲಿ ಪ್ರಯಾಣಿಕರಿಲ್ಲದೇ ಖಾಸಗಿ ಬಸ್‍ಗಳೂ ಖಾಲಿ ಖಾಲಿಯಾಗಿವೆ.ಚಿಕ್ಕಬಳ್ಳಾಪುರದಲ್ಲಿ ಕೂಡ ಬಸ್ ಸಂಚಾರ ಸ್ತಬ್ಭವಾಗಿದೆ. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ನಿಲ್ದಾಣಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಬೆಳಗಾವಿಯಲ್ಲೂ ಬಸ್‍ಗಳಿಲ್ಲದೇ ಬಸ್‍ಸ್ಟ್ಯಾಂಡ್ ಖಾಲಿ-ಖಾಲಿಯಾಗಿದೆ. ಚಾಮರಾಜನಗರದಲ್ಲೂ ಬಸ್‍ಗಳು ನಿಲ್ದಾಣದಲ್ಲೇ ಬೀಡುಬಿಟ್ಟಿವೆ.   ಗದಗ ಜಿಲ್ಲೆಯ ಮುಂಡರಗಿಯಲ್ಲಿ ನಿಲ್ದಾಣದಲ್ಲೇ ವಾಯುವ್ಯ ಕರ್ನಾಟಕ ಸಾರಿಗೆ ಬಸ್‍ಗಳು ನಿಂತಿವೆ. ಗದಗ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಸಿಗದೇ ಜನರು ಖಾಸಗಿ ವಾಹನಗಳ ಮೊರೆ ಹೋಗಿದ್ದಾರೆ. ಹಾವೇರಿಯಲ್ಲೂ ಸರ್ಕಾರಿ ಬಸ್‍ಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿದೆ. 
ವೇತನ ಹೆಚ್ಚಳ ಸಂಬಂಧ ರಾಜ್ಯ ಸರ್ಕಾರ ಮತ್ತು ಸಾರಿಗೆ ನೌಕರರ ಸಂಘಟನೆಗಳ ಜೊತೆಗೆ ಹಲವು ಸುತ್ತಿನ ಮಾತುಕತೆ ನಡೆದಿದೆ. ಆದ್ರೆ ಅದ್ಯಾವುದೂ ಫಲಪ್ರದವಾಗಿಲ್ಲ. ರಾಜ್ಯ ಸರ್ಕಾರ ಶೇ. 8ರಷ್ಟು ವೇತನ ಹೆಚ್ಚಳಕ್ಕೆ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿತ್ತು. ಆದ್ರೆ ಆಂಧ್ರಪ್ರದೇಶದಲ್ಲಿರುವಂತೆ ಶೇ. 35ರಷ್ಟು ಸಂಬಳ ಜಾಸ್ತಿಯಾಗಬೇಕೆಂಬುದು ನೌಕರರ ಆಗ್ರಹ.  ಈ ಆಗ್ರಹವನ್ನು ಒಪ್ಪಿಕೊಳ್ಳದ ಸರ್ಕಾರ ಕಡೆಯದಾಗಿ ಶೇ. 10ರಷ್ಟು ವೇತನ ಹೆಚ್ಚಳಕ್ಕೆ ಓಕೆ ಅಂದಿದೆ. ಆದ್ರೆ ಸರ್ಕಾರದ ಈ ನಿರ್ಧಾರವನ್ನು ನೌಕರರು ತಿರಸ್ಕರಿಸಿದ್ದಾರೆ.
ಘರ್ಷಣೆ, ಕಲ್ಲು ತೂರಾಟ: ತುಮಕೂರು , ಯಶವಂತಪುರ , ಮೈಸೂರು ಬ್ಯಾಂಕ್ ರಸ್ತೆ ಸೇರಿ 6  ಕಡೆ ದುಷ್ಕರ್ಮಿಗಳು ಸರ್ಕಾರಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
 ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದ ಬಹುತೇಕ ಕಡೆ ಪೊಲೀಸ್ ಬಂದೋಬಸ್ತ್‌‌ ಏರ್ಪಡಿಸಲಾಗಿದೆ. ಇನ್ನು ನಗರದಲ್ಲಿ ಖಾಸಗಿ ಬಸ್‌‌‌‌‌‌‌‌‌‌‌‌ಗಳ ಕಾರುಬಾರು ಹೆಚ್ಚಾಗಿದ್ದು, ಸಾರ್ವಜನಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ರಜೆ ಇಲ್ಲ.
ಈ ಮಧ್ಯೆ ಜನರಿಗೆ ನೀಡುವ ಸೇವೆಯನ್ನು ಹೆಚ್ಚಿಸಲು ಇಂದು, ನಾಳೆ ಪ್ರತಿ ಐದು ನಿಮಿಷಗಳಿಗೊಮ್ಮೆ ಮೆಟ್ರೋ ಸಂಚರಿಸಲಿದ್ದು, ಪರಿಸ್ಥಿತಿಯನ್ನು ನೋಡಿಕೊಂಡು ಅಗತ್ಯಬಿದ್ದರೆ ರಾತ್ರಿ ನಿಗದಿಗಿಂತ ಒಂದು ಗಂಟೆ ಹೆಚ್ಚು ಕಾಲ ಮೆಟ್ರೋ ಸಂಚರಿಸಲಿದೆ ಎಂದು ಮೆಟ್ರೋದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ ರಾವ್ ತಿಳಿಸಿದ್ದಾರೆ.
ಕೆಎಸ್ಸಾರ್ಟಿಸಿ ಬಸ್ ಮುಷ್ಕರ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರೂ ದಕ್ಷಿಣ ಕನ್ನಡ  ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ. ಈ ಮುಷ್ಕರದಿಂದ ಹೆಚ್ಚು ತೊಂದರೆಯಾಗದ ಹಿನ್ನೆಲೆಯಲ್ಲಿ  ಶಾಲಾ ಕಾಲೇಜುಗಳಿಗೆ ರಜೆಯಿಂದ ವಿನಾಯಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಹಾಗೂ ಮಂಗಳವಾರ ಎಂದಿನಂತೆ ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸಲಿವೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.