ರಾಜ್ಯ

ಹಲವಾರು ಆರೋಪ ಎದುರಿಸುತ್ತಿದ್ದ ಮೃತ ಡಿವೈಎಸ್ ಪಿ ಗಣಪತಿ

1985 ರಿಂದ 1995 ರವರೆಗೂ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಪ್ರತಿನಿಧಿಸಿ ವಾಲಿಬಾಲ್ ಆಡಿ ಚಾಂಪಿಯನ್ ಆಗಿದ್ದ ಗಣಪತಿಯವರು ಡಿವೈಎಸ್ಪಿಯಾಗಿ ಆಯ್ಕೆಯಾದ ನಂತರ ಆರೋಪಗಳ...

ಹಲವಾರು ಆರೋಪ ಎದುರಿಸುತ್ತಿದ್ದ ಮೃತ ಡಿವೈಎಸ್ ಪಿ ಗಣಪತಿ
ಯಶವಂತಪುರದಲ್ಲಿ ನಡೆದ ಎನ್ ಕೌಂಟರ್ ಪ್ರಕರಣದಲ್ಲಿ ಗಾಯಗೊಂಡು ದಾಖಲಾಗಿದ್ದ ಡಿವೈಎಸ್ಪಿ ಗಣಪತಿ (ಸಂಗ್ರಹ ಚಿತ್ರ)
Published On :

ಬೆಂಗಳೂರು: 1985 ರಿಂದ 1995 ರವರೆಗೂ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಪ್ರತಿನಿಧಿಸಿ ವಾಲಿಬಾಲ್ ಆಡಿ ಚಾಂಪಿಯನ್ ಆಗಿದ್ದ ಗಣಪತಿಯವರು ಡಿವೈಎಸ್ಪಿಯಾಗಿ ಆಯ್ಕೆಯಾದ ನಂತರ ಆರೋಪಗಳ ಸುರಿಮಳೆಯನ್ನೇ ಎದುರಿಸಿದ್ದರು.

ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ನೋಡಿದ್ದ ಡಿವೈಎಸ್ಪಿ ಗಣಪತಿಯವರು ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಕೈಹಾಕಿದ್ದು ಎಲ್ಲರಲ್ಲೂ ಆಘಾತವನ್ನುಂಟು ಮಾಡಿದೆ. ಗಣಪತಿಯವರ ವೃತ್ತಿಜೀವನ ಇದೀಗ ಅವರು ಎದುರಿಸಿದ್ದ ಆರೋಪಗಳ ಪಟ್ಟಿಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದೆ.

ವಾಲಿಬಾಲ್ ಕ್ರೀಡೆಯಲ್ಲಿ ಚಾಂಪಿಯನ್ ಆಗಿದ್ದ ಗಣಪತಿಯವರು ಕ್ರೀಡಾ ಮೀಸಲಾತಿಯಿಂದಲೇ ಪೊಲೀಸ್ ಇಲಾಖೆಗೆ ಪಾದಾರ್ಪಣೆ ಮಾಡಿದ್ದರು. 1991 ರಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದ ನೇಮಕಗೊಂಡಿದ್ದ ಇವರು, 2001ರಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಬಡ್ತಿ ಪಡೆದಿದ್ದರು.

2008ರಲ್ಲಿ ಮಂಗಳೂರಿನಲ್ಲಿ ನಡೆದ ಚರ್ಚ್ ದಾಳಿ ಪ್ರಕರಣ ಸಂಬಂಧ ಮೊದಲ ಬಾರಿಗೆ ಗಣಪತಿ ಅವರ ವಿರುದ್ಧ ಆರೋಪವೊಂದು ಕೇಳಿಬಂದಿತ್ತು.

ಮಂಗಳೂರು ಮಹಾನಗರ ಪಾಲಿಕೆಯ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾ ನಿರತರ ಮೇಲೆ ಲಾಠಿ ಚಾರ್ಚ್ ಮಾಡಿದ ಆರೋಪ ಕೂಡ ಗಣಪತಿಯವರ ವಿರುದ್ಧ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಗಣಪತಿಯವರು ಇಲಾಖೆಯ ಶಿಸ್ತು ಕ್ರಮವನ್ನು ಎದುರಿಸಿದ್ದರು.

ನಕಲಿ ಎನ್ ಕೌಂಟರ್ ನಲ್ಲಿ ಭಾಗಿ ಆರೋಪ
ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಗಣಪತಿಯವರು ಎನ್ ಕೌಂಟರ್ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದರು ಎಂಬ ಆರೋಪಗಳು ಕೇಳಿಬಂದಿತ್ತು. 2012ರಲ್ಲಿ 20 ವರ್ಷದ ರೌಡಿಶೀಟರ್ ಒಬ್ಬನಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಹತ್ಯೆಯಾದ ರೌಡಿಶೀಟರ್ ನ ಕುಟುಂಬಸ್ಥರು ಮಾನವ ಹಕ್ಕು ಆಯೋಗದ ಮೆಟ್ಟಿಲು ಹತ್ತಿದ್ದರು. ಇದೊಂದು ಪೂರ್ವನಿಯೋಜಿತ ಹತ್ಯೆಯಾಗಿದೆ ಎಂದು ಆರೋಪ ವ್ಯಕ್ತಪಡಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಆಯೋಗವು ಪ್ರಕರಣವನ್ನು ತನಿಖೆಗೆ ಆದೇಶಿಸಿತ್ತು. ಈ ಪ್ರಕರಣದ ಅಂತಿಮ ತೀರ್ಪು ಇನ್ನು ಕೆಲವೇ ದಿನಗಳಲ್ಲಿ ಹೊರಬೀಳಲಿದೆ.

2014ರಲ್ಲಿ ರಾಜಗೋಪಾಲನಗರ ಠಾಣೆಯಲ್ಲಿ ದರೋಡೆ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣದಲ್ಲಿಯೇ ಗಣಪತಿಯವರು ಅಮಾನತು ಶಿಕ್ಷೆಯನ್ನು ಎದುರಿಸಬೇಕಾಗಿ ಬಂದಿತ್ತು. ಹಣ ದುರುಪಯೋಗ ಮಾಡಿಕೊಂಡಿದ್ದಾರೆಂದು ಹೇಳಿ ಗಣಪತಿಯವನ್ನು ಅಮಾನತು ಮಾಡಲಾಗಿತ್ತು.

ರು. 1 ಕೋಟಿ ದರೋಡೆಯಾಗಿರುವುದಾಗಿ ಪ್ರಕರಣವೊಂದು ದಾಖಲಾಗಿತ್ತು. ಈ ದರೋಡೆ ಪ್ರಕರಣ ಭೇದಿಸಿದ್ದ ಗಣಪತಿಯವರು ರು.44 ಹಣವನ್ನು ವಶಕ್ಕೆ ಪಡೆದಿರುವುದಾಗಿ ಹೇಳಿದ್ದರು. ಇದಕ್ಕೆ ಅನುಮಾನ ವ್ಯಕ್ತಪಡಿಸಿದ್ದ ಇಲಾಖೆ ಪ್ರಕರಣವನ್ನು ತನಿಖೆ ನಡೆಸಿತ್ತು. ನಂತರ ಹಣ ದುರುಪಯೋಗ ಮಾಡಿಕೊಂಡಿದ್ದಾರೆಂದು ಹೇಳಿ ಗಣಪತಿಯವರಿಗೆ ಅಮಾನತು ಶಿಕ್ಷೆ ನೀಡಿತ್ತು.

ಈಗಾಲೂ ಈ ಬಗ್ಗೆ ಕೆಲ ವದಂತಿಗಳು ಓಡಾಡುತ್ತಿದ್ದು, ದುರುಪಯೋಗ ಮಾಡಿಕೊಂಡಿದ್ದ ರು.56 ಲಕ್ಷ ಹಣವನ್ನು  ಗಣಪತಿಯವರು ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಸುಟ್ಟು ಹಾಕಿದ್ದರು ಎಂದು ಹೇಳಲಾಗುತ್ತಿದೆ. ಇದಲ್ಲದೆ, ಮಡಿವಾಳ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ವಶ ಪಡಿಸಿಕೊಳ್ಳಲಾಗಿದ್ದ ವಾಹನಗಳನ್ನು ದುರುಪಯೋಗ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಡಿವೈಎಸ್ಪಿಯಾಗಿ ಬಡ್ತಿ ಪಡೆದ ನಂತರ ಗಣಪತಿಯವರನ್ನು ಎರಡು ತಿಂಗಳ ಹಿಂದಷ್ಟೇ ಮಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ನಗರದಲ್ಲಿಯೂ ಸಿಐಡಿ ವಿಭಾಗದಲ್ಲಿ ಕೆಲ ವರ್ಷಗಳ ಕಾಲ ಗಣಪತಿಯವರು ಕಾರ್ಯನಿರ್ವಹಿಸಿದ್ದಾರೆ.

ಆತ್ಮಹತ್ಯೆಗೆ ಆಘಾತ ವ್ಯಕ್ತಪಡಿಸಿದ ಕ್ರೀಡಾ ಸ್ನೇಹಿತರು
ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಕುರಿತಂತೆ ಗಣಪತಿಯವರ ವಾಲಿಬಾಲ್ ಕ್ರೀಡಾ ಸ್ನೇಹಿತರು ಆಘಾತ ವ್ಯಕ್ತಪಡಿಸಿದ್ದಾರೆ.

ಗಣಪತಿ ಉತ್ತಮ ಕ್ರೀಡಾಗಾರನಾಗಿದ್ದ. ತಂಡವನ್ನು ಉತ್ತಮವಾಗಿ ನಡೆಸುತ್ತಿದ್ದ. ನೇರ ನುಡಿಯ ವ್ಯಕ್ತಿಯಾಗಿದ್ದ. ಈ ಗುಣವೇ ಆತನಿಗೆ ಮುಳುವಾಗಿರಬಹುದು ಎಂದು ಧಾರವಾಡ ಯುವ ಸಬಲೀಕರಣ ಮತ್ತು ಕ್ರೀಡಾ ವಿಭಾಗದ ವಾಲಿಬಾಲ್ ತರಬೇತುದಾರ ರಾಘವೇಂದ್ರ ಪೈ ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.