ಫಿಫಾ ವಿಶ್ವಕಪ್ 2014

ಫಿಫಾ ನಿರ್ಧಾರಕ್ಕೆ ಆಸ್ಕರ್ ಅತೃಪ್ತಿ

ಫಿಫಾ ನಿರ್ಧಾರಕ್ಕೆ ಆಸ್ಕರ್ ಅತೃಪ್ತಿ
Published On :

ರಿಯೊ ಡಿ ಜನೈರೊ: ಉರುಗ್ವೆ ತಂಡದ ಸ್ಟಾರ್ ಸ್ಟ್ರೈಕರ್ ಲೂಯಿಸ್ ಸೂರೆಜ್ ಅವರನ್ನು ಎದುರಾಳಿ ಆಟಗಾರನಿಗೆ ಕಚ್ಚಿದ ಪ್ರಕರಣದಲ್ಲಿ ನಾಲ್ಕು ತಿಂಗಳ ನಿಷೇಧದ ಶಿಕ್ಷೆಯನ್ನು ತಂಡದ ಕೋಚ್ ಆಸ್ಕರ್ ಟಬರೇಜ್ ತೀವ್ರವಾಗಿ ವಿರೋಧಿಸಿದ್ದಾರೆ. ಅಲ್ಲದೆ ಫಿಫಾದ ತಾಂತ್ರಿಕ ಸಮಿತಿಯ ಸದಸ್ಯತ್ವವನ್ನು ತ್ಯಜಿಸಿದ್ದಾರೆ. ಉರುಗ್ವೆ ಹಾಗೂ ಕೊಲಂಬಿಯಾ ಪಂದ್ಯದ ಪೂರ್ವ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಆಸ್ಕರ್, ಪಂದ್ಯದ ಬಗ್ಗೆ ಮಾತನಾಡದೇ ಸಂಪೂರ್ಣವಾಗಿ ಸೂರೆಜ್ ವಿರುದ್ಧದ ಶಿಕ್ಷೆಯನ್ನು ಖಂಡಿಸಿದರು. ಫಿಫಾ ಶಿಸ್ತು ಸಮಿತಿಯು ಇಂಗ್ಲೆಂಡ್ ಮಾಧ್ಯಮಗಳ ಒತ್ತಡಕ್ಕೆ ಮಣಿಯುವ ಮೂಲಕ, ಸೂರೆಜ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಅಲ್ಲದೆ ಉರುಗ್ವೆ ತಂಡ ಒಂದು ಸಣ್ಣ ರಾಷ್ಟ್ರವಾಗಿದ್ದರಿಂದ ನಮ್ಮ ಮೇಲೆ ಕಠಿಣ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದರು.
ಕೇವಲ ಒತ್ತಡ ಹೇರಿದ ಕಾರಣಕ್ಕೆ ಈ ರೀತಿಯಾದ ಕ್ರಮ ಕೈಗೊಂಡಿರುವುದು ಸಂಸ್ಥೆಯ ಉತ್ತಮ ನಿರ್ಧಾರವಲ್ಲ ಎಂದು ಟಬರೇಜ್ ಅಭಿಪ್ರಾಯಪಟ್ಟಿದ್ದಾರೆ. ಸೂರೆಜ್ ವಿರುದ್ಧ ಕಚ್ಚಿದ ಪ್ರಕರಣದಲ್ಲಿ ಇದು ಮೂರನೇ ಬಾರಿಗೆ ಶಿಕ್ಷೆ ನೀಡಲಾಗುತ್ತಿದೆ. ಈ ಹಿಂದೆ ಎರಡು ಬಾರಿ ಡಚ್ ಹಾಗೂ ಇಂಗ್ಲೆಂಡ್ ಲೀಗ್ ಪಂದ್ಯದ ವೇಳೆ ಸೂರೆಜ್ ವಿರುದ್ಧ ಶಿಕ್ಷೆ ನೀಡಲಾಗಿತ್ತು. ಸೂರೆಜ್ ಅವರನ್ನು ಪ್ರಕರಣದಲ್ಲಿ ಬಲಿಪಶು ಮಾಡಲಾಗಿದೆ. ಯಾರು ಗೆದ್ದರು? ಯಾರು ಸೋತರು? ಯಾರಿಗೆ ನೋವಾಗಿದೆ? ಯಾರು ತಮಗೆ ಬೇಕಾದ ರೀತಿಯಲ್ಲಿ ಕಾರ್ಯ ಸಾಧಿಸಿದ್ದಾರೆ? ಎಂದು ಆಸ್ಕರ್ ಫಿಫಾಗೆ ಪ್ರಶ್ನಿಸಿದ್ದಾರೆ. ಸೂರೆಜ್ ವಿರುದ್ಧ ಕ್ರಮಕೈಗೊಳ್ಳುವುದರ ಬಗ್ಗೆ ಉರುಗ್ವೆ ತಂಡದ ಸಿಬ್ಬಂದಿ, ಆಟಗಾರರು ನಿರೀಕ್ಷಿಸಿದ್ದರು, ಆದರೆ ಶಿಕ್ಷೆಯ ಪ್ರಮಾಣ ಇಷ್ಟೊಂದು ದೊಡ್ಡದಾಗಿರುತ್ತದೆ ಎಂದು ಭಾವಿಸಿರಲಿಲ್ಲ. ಈ ನಿರ್ಧಾರ ಮಾಧ್ಯಮಗಳ ಅಭಿಪ್ರಾಯದ ಮೇರೆಗೆ ತೆಗೆದುಕೊಳ್ಳಲಾಗಿದೆ. ಪಂದ್ಯ ಮುಗಿಯುತ್ತಿದ್ದಂತೆ ಸೂರೆಜ್ ವಿರುದ್ಧ ಎಲ್ಲಾ ಮಾಧ್ಯಮಗಳು ಮಾತನಾಡಲು ಆರಂಭಿಸಿದವು. ಅವುಗಳು ಯಾವ ದೇಶದ್ದವು ಎಂಬುದು ಗೊತ್ತಿಲ್ಲ. ಆದರೆ, ಆ ಎಲ್ಲಾ ಮಾಧ್ಯಮಗಳು ಇಂಗ್ಲೀಷ್‌ಮಾಧ್ಯಮಗಳೇ ಎಂದು ಆಸ್ಕರ್ ಕಟುವಾಗಿ ಪ್ರತಿಕ್ರಿಯೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.