ಫಿಫಾ ವಿಶ್ವಕಪ್ 2014

ಸೋಲಿಗೆ ತಲೆದಂಡ

ಸೋಲಿಗೆ ತಲೆದಂಡ
Published On :

ಟೋಕಿಯೊ: ಫಿಫಾ ವಿಶ್ವಕಪ್‌ನಲ್ಲಿ ಹಿನಾಯ ಪ್ರದರ್ಶನ ನೀಡುವ ಮೂಲಕ ಟೂರ್ನಿಯ ಗುಂಪು ಹಂತದಲ್ಲೇ ಹೊರ ಬಿದ್ದ ಕೆಲವು ತಂಡಗಳ ಕೋಚ್‌ಗಳ ತಲೆ ದಂಡ ಆರಂಭವಾಗಿದೆ. ಇದರಲ್ಲಿ ಜಪಾನ್ ತಂಡದ ಕೋಚ್ ಆಲ್ಬರ್ಟೊ ಜಚ್ಚೆರೊನಿ, ಹೊಂಡುರಾಸ್ ತಂಡದ ಲೂಯಿಸ್ ಫರ್ನಾಂಡೊ ಸೊರೆಜ್ ತಲೆ ದಂಡ ಖಚಿತವಾಗಿದೆ.
61 ವರ್ಷದ ಜಪಾನ್‌ತಂಡದ ಕೋಚ್ ಆಲ್ಬರ್ಟೊ, ಮಂಗಳವಾರ ನಡೆದ ಕೊಲಂಬಿಯಾ ವಿರುದ್ಧದ ಪಂದ್ಯದಲ್ಲಿ 4-1 ಅಂತರದ ಹೀನಾಯ ಸೋಲಿನಿಂದ ಟೂರ್ನಿಯಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿತ್ತು. ಈ ಪ್ರದರ್ಶನದಿಂದ ನಾನು ನಿರಾಸೆಗೊಂಡಿದ್ದು, ಈ ಫಲಿತಾಂಶ ತೃಪ್ತಿ ತಂದಿಲ್ಲ. ನಾವು ನಾಕೌಟ್‌ಗೆ ಪ್ರವೇಶಿಸಲು ಸಾಕಷ್ಟು ಪ್ರಯತ್ನ ನಡೆಸಿದೆವು, ಆದರೆ ಸಾಧ್ಯವಾಗಲಿಲ್ಲ. ನಾನು ತಂಡವನ್ನು ಆಯ್ಕೆ ಮಾಡಿದ್ದು, ಪಂದ್ಯದ ವೇಳೆ ರಣತಂತ್ರ ರೂಪಿಸಿದ್ದರಿಂದ ಈ ಫಲಿತಾಂಶದ ಸಂಪೂರ್ಣ ಜವಾಬ್ದಾರಿ ಹೊರುತ್ತೇನೆ ಎಂದು ಆಲ್ಬರ್ಟೊ ತಿಳಿಸಿದ್ದಾರೆ.  ಈಗಾಗಲೇ ಇಟಲಿಯ ಸೆಸರೆ ಪ್ರಾಂಡೆಲ್ಲಿ ಹಾಗೂ ಐವರಿ ಕೋಸ್ಟಾದ ಸಾಬ್ರಿ ಲ್ಯಾಮೌಚಿ ತಮ್ಮ ಕೋಚ್ ಸ್ಥಾನ ತ್ಯಜಿಸಿದ್ದಾರೆ.
ಇನ್ನು ಹೊಂಡುರಾಸ್ ತಂಡವೂ ಸಹ ಟೂರ್ನಿಯಲ್ಲಿ ಗೆಲವನ್ನು ಕಾಣದೇ ಕಂಗೆಟ್ಟಿದ್ದು, ತಂಡದ ಕೋಚ್ ಲೂಯಿಸ್ ಫರ್ನಾಂಡೊ ಸೊರೆಜ್ ತಮ್ಮ ಸ್ಥಾನ ತ್ಯಜಿಸಲು ನಿರ್ಧರಿಸಿದ್ದಾರೆ. 2006ರ ವಿಶ್ವಕಪ್‌ನಲ್ಲಿ ಈಕ್ವೆಡಾರ್ ತಂಡವನ್ನು ಎರಡನೇ ಸುತ್ತಿಗೆ ಕೊಂಡೊಯ್ದಿದ್ದ ಫರ್ನಾಂಡೊ, ಈ ಬಾರಿ ವಿಫಲರಾಗಿದ್ದಾರೆ.  ನಾನು ಉತ್ತಮ ಫಲಿತಾಂಶ ಪಡೆಯುವಲ್ಲಿ ವಿಫಲರಾಗಿದ್ದೇನೆ, ಹಾಗಾಗಿ ನನ್ನನ್ನು ಕ್ಷಮಿಸಿ. ನಾನು ವಿಶ್ವಕಪ್ ಕನಸು ಕಂಡಿದ್ದೆ, ಹಾಗಾಗಿ ಈಗ ತೀವ್ರ ನಿರಾಸೆಯಾಗಿದೆ. ನಾನು ಉತ್ತಮ ಉದ್ದೇಶದೊಂದಿಗೆ ನನ್ನ ಸ್ಥಾನ ತ್ಯಜಿಸುತ್ತಿದ್ದು, ಇದನ್ನು ಸೋಲು ಎಂದು ಪರಿಗಣಿಸುವುದಿಲ್ಲ ಎಂದರು.
ಸ್ಥಾನ ತ್ಯಜಿಸುವುದಿಲ್ಲ: ಇನ್ನು ಇಂಗ್ಲೆಂಡ್ ತಂಡ ಈ ಬಾರಿ ಹೀನಾಯ ಪ್ರದರ್ಶನ ನೀಡಿದ ಪ್ರಬಲ ತಂಡಗಳಲ್ಲಿ ಒಂದಾಗಿದ್ದರೂ ತಂಡದ ಕೋಚ್ ರಾಯ್ ಹಡ್‌ಸನ್ ಮಾತ್ರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರಾಕರಿಸಿದ್ದಾರೆ. ಡಿ ಗುಂಪಿನಲ್ಲಿ ಇಟಲಿ ತಂಡ ಮೂರನೇ ಸ್ಥಾನ ಪಡೆದರೂ ಕೋಚ್ ರಾಜಿನಾಮೆ ನೀಡಿದ್ದಾರೆ, ಆದರೆ ಕಡೇಯ ಸ್ಥಾನ ಪಡೆದ ಇಂಗ್ಲೆಂಡ್ ತಂಡದ ಕೋಚ್ ರಾಜಿನಾಮೆ ನೀಡಲು ನಿರಾಕರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಯ್, ಇಟಲಿ ತಂಡದ ಕೋಚ್ ಸೆಸರ್ ಸಾಕಷ್ಟು ವರ್ಷಗಳಿಂದ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಇಂಗ್ಲೆಂಡ್ ಫುಟ್ಬಾಲ್‌ಸಂಸ್ಥೆ ನಾನು ತಂಡದಲ್ಲಿರುವುದನ್ನು ಸ್ವಾಗತಿಸಿದ್ದು, ನಾನು ಈ ಸ್ಥಾನದಲ್ಲಿ ಮುಂದುವರಿಯುತ್ತೇನೆ. ಇಂಗ್ಲೆಂಡ್ ಫುಟ್ಬಾಲ್‌ಸಂಸ್ಥೆಯ ನಿರ್ಧಾರದಿಂದ ಸಂತೋಷವಾಗಿದೆ. ನಾನು ಪರಿಸ್ಥಿತಿಗೆ ಅನುಗುಣವಾಗಿ ಹಿಂದೆ ಸರಿಯುವುದಿಲ್ಲ. ನಾನು ಟೀಕೆಗಳನ್ನು ಎದುರಿಸಿ ನಿಲ್ಲುತ್ತೇನೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.