ಫಿಫಾ ವಿಶ್ವಕಪ್ 2014

ನೇಮಾರ್ ತಂತ್ರಕ್ಕೆ ಯಾಮಾರಿದ ಕೆಮರೂನ್

ಮಗದೊಮ್ಮೆ ತವರು ಅಭಿಮಾನಿಗಳು ತಮ್ಮ ಮೇಲಿಟ್ಟ ನಂಬಿಕೆಯನ್ನು ಹುಸಿಮಾಡದೇ ಅತ್ಯಂತ...

ನೇಮಾರ್ ತಂತ್ರಕ್ಕೆ ಯಾಮಾರಿದ ಕೆಮರೂನ್
Published On :

ಬ್ರೆಸಿಲಿಯಾ: ಮಗದೊಮ್ಮೆ ತವರು ಅಭಿಮಾನಿಗಳು ತಮ್ಮ ಮೇಲಿಟ್ಟ ನಂಬಿಕೆಯನ್ನು ಹುಸಿಮಾಡದೇ ಅತ್ಯಂತ ಪರಿಣಾಮಕಾರಿಯಾಗಿ ತಮ್ಮ ಕಾಲ್ಚಳಕ ತೋರಿದ ನೇಮಾರ್ ದಾಖಲಿಸಿದ ಎರಡು ಗೋಲುಗಳ ನೆರವಿನಿಂದ ಆತಿಥೇಯ ಬ್ರೆಜಿಲ್ ತಂಡ ಮತ್ತೊಂದು ಅದ್ಧೂರಿ ಗೆಲವಿನೊಂದಿಗೆ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಪ್ರಿಕ್ವಾರ್ಟರ್‌ಫೈನಲ್‌ಗೆ ಹೆಜ್ಜೆ ಹಾಕಿದೆ.
ಎಸ್ಟಾಡಿಯೊ ನ್ಯಾಸಿಯೋನಲ್ ಡಿ ಬ್ರೆಸಿಲಿಯಾದಲ್ಲಿ ಮಂಗಳವಾರ ನಡೆದ 'ಎ' ಗುಂಪಿನ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಬ್ರೆಜಿಲ್ ಆಟಗಾರರು 4-1 ಗೋಲುಗಳಿಂದ ಕೆಮರೂನ್ ತಂಡದ ಸವಾಲನ್ನು ಸುಲಭವಾಗಿ ಹತ್ತಿಕ್ಕಿದರು.
ಈ ಗೆಲವಿನೊಂದಿಗೆ ಬ್ರೆಜಿಲ್, ನಾಲ್ಕು ತಂಡಗಳ ತನ್ನ ಗುಂಪಿನಲ್ಲಿ ಅಗ್ರಸ್ಥಾನದ ಗೌರವದೊಂದಿಗೆ 16ರ ಘಟ್ಟಕ್ಕೆ ಪ್ರವೇಶ ಪಡೆಯಿತು. ಕೆಮರೂನ್ ಮಾತ್ರ ಸತತ ಮೂರನೇ ಸೋಲಿನೊಂದಿಗೆ ಗುಂಪಿನಲ್ಲಿ ಖಾತೆ ತೆರೆಯದೇ ಟೂರ್ನಿಯಿಂದ ಹೊರಬಿದ್ದಿತು.
ಪ್ರಥಮಾರ್ಧದ 17ನೇ ನಿಮಿಷದಲ್ಲಿಯೇ ಬ್ರೆಜಿಲ್ ಖಾತೆ ತೆರೆಯಿತು. ಲೂಯಿಜ್ ಗುಸ್ತಾವೊ ನೀಡಿದ ಪಾಸ್‌ನಲ್ಲಿ ಮುನ್ಪಡೆ ಆಟಗಾರ ನೇಮಾರ್, ತುಂಬ ಚಾಣಾಕ್ಷತನದಿಂದ ಕೆಮರೂನ್ ಗೋಲ್‌ಕೀಪರ್ ಲೂಯಿಸ್ ಫ್ಯುಜೊವು ಕಣ್ತಪ್ಪಿಸಿ ಚೆಂಡನ್ನು ಬಲೆ ಸೇರಿಸಿ ಬ್ರೆಜಿಲ್‌ಗೆ 1-0 ಮುನ್ನಡೆ ತಂದುಕೊಟ್ಟರು. ಆತಿಥೇಯ ತಂಡಕ್ಕೆ ಮುನ್ನಡೆ ದೊರೆಯುತ್ತಿದ್ದಂತೆಯೇ ಸುಮಾರು 69 ಸಾವಿರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಕರತಾಡನ ಮುಗಿಲುಮುಟ್ಟಿತು.
ನೇಮಾರ್ ದಾಖಲಿಸಿದ ಈ ಗೋಲು ಪಂದ್ಯಾವಳಿಯಲ್ಲಿನ ಒಟ್ಟಾರೆ ನೂರನೇ ಗೋಲು ಎಂಬುದು ಒಂದು ವಿಶೇಷವಾದರೆ, ಬ್ರೆಜಿಲ್ ಪಾಲಿಗೆ ಇದು ಒಟ್ಟಾರೆ 100ನೇ ವಿಶ್ವಕಪ್ ಫೈನಲ್ಸ್ ಪಂದ್ಯದ ವಿಶೇಷ ಎಂಬುದು ಮತ್ತೊಂದು ಹೆಮ್ಮೆಯ ಸಂಗತಿಯಾಯಿತು. ಆದರೆ, ಬ್ರೆಜಿಲ್ ಈ ಮುನ್ನಡೆಯನ್ನು ಹೆಚ್ಚು ಸಮಯ ಉಳಿಸಿಕೊಳ್ಳಲಿಲ್ಲ. ಕೇವಲ 9 ನಿಮಿಷಗಳ ಅಂತರದಲ್ಲಿಯೇ ಕೆಮರೂನ್ ತಂಡ ಜೋಲ್ ಮ್ಯಾಟಿಪ್ ಮೂಲಕ ಗೋಲಿನ ಖಾತೆ ತೆರೆಯುವ ಮೂಲಕ ಆತಿಥೇಯರ ಜೊತೆ 1-1ರಿಂದ ಸಮಗೌರವಕ್ಕೆ ನಿಂತಿತು. ಆದರೆ, ತಂಡದ ಪಾಲಿಗೆ ಮತ್ತೊಮ್ಮೆ ಆಪದ್ಭಾಂದವರಾಗಿ ಬಂದ ನೇಮಾರ್ 35ನೇ ನಿಮಿಷದಲ್ಲಿ ಎರಡನೇ ಗೋಲು ಬಾರಿಸಿ ಮತ್ತೆ ಬ್ರೆಜಿಲ್‌ಗೆ 2-1 ಗೋಲುಗಳಿಂದ ಮುನ್ನಡೆ ಸಂಪಾದಿಸಿಕೊಟ್ಟರು.
ವಿರಾಮದ ವೇಳೆಗೆ ಬ್ರೆಜಿಲ್ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಇನ್ನು ಉತ್ತರಾರ್ಧದ ಆಟ ಸಂಪೂರ್ಣ ಬ್ರೆಜಿಲ್ ಮಯವಾಯಿತು. ಬ್ರೆಜಿಲ್ ದಾಳಿಯನ್ನು ತಡೆಯುವಲ್ಲಿಯೇ ಕೆಮರೂನ್ ತಂಡದ ಆಟಗಾರರು ಬಹುತೇಕ ತಮ್ಮ ಶಕ್ತಿಯನ್ನು ವಿನಿಯೋಗಿಸಬೇಕಾಯಿತು. ಆದರೂ, ಆತಿಥೇಯರ ದಾಳಿ ತಡೆಯಲು ಅವರಿಗೆ ಸಾಧ್ಯವಾಗಲಿಲ್ಲ.
ಎರಡನೇ ಅವಧಿಯ ಆಟ ಪ್ರಾರಂಭವಾಗಿ ನಾಲ್ಕು ನಿಮಿಷ ಕಳೆಯುವಷ್ಟರಲ್ಲಿ ಎದುರಾಳಿ ಕೋಟೆಯೊಳಗೆ ನುಗ್ಗಿದ ಫ್ರೆಡ್ ಆಕರ್ಷಕ ಗೋಲು ಬಾರಿಸಿ ಬ್ರೆಜಿಲ್ ಮುನ್ನಡೆಯನ್ನು 3-1ಕ್ಕೆ ಹಿಗ್ಗಿಸಿದರು. ಇನ್ನು ಆಟ ಮುಗಿಯಲು ಕೆಲವೇ ನಿಮಿಷಗಳಿದ್ದಾಗ ಬ್ರೆಜಿಲ್ ಕೋಚ್ ಲೂಯಿಜ್ ಫೆಲಿಪ್ ಸ್ಕೊಲಾರಿ ಅವರು ನೇಮಾರ್ ಅವರನ್ನು ವಾಪಸ್ ಕರೆಯಿಸಿ ಫರ್ನಾಂಡೊ ಲೂಯಿಜ್ ರೋಜಾರನ್ನು ಬದಲಿ ಆಟಗಾರರನ್ನಾಗಿ ಕಣಕ್ಕಿಳಿಸಿದರು. ಸ್ಕೊಲಾರಿಯವರ ಈ ಬದಲಾವಣೆಗೆ ಬ್ರೆಜಿಲ್ ತಂಡಕ್ಕೆ ಮತ್ತೊಂದು ಉತ್ತಮ ಫಲವೇ ಲಭಿಸಿತು. ಆಟ ಮುಗಿಯಲು ಕೇವಲ 6 ನಿಮಿಷಗಳಿದ್ದಾಗ ಫರ್ನಾಂಡೊ ಸಹ ಗೋಲು ಬಾರಿಸಿ ಬ್ರೆಜಿಲ್‌ನ ಭರ್ಜರಿ ಗೆಲವಿಗೆ ನೆರವಾದರು.
ಪಂದ್ಯದ ಮೇಲೆ ಬ್ರೆಜಿಲ್ ಪ್ರತಿಶತ 54ರಷ್ಟು ಹಿಡಿತ ಸಾಧಿಸಿತ್ತು. ಇನ್ನೂ ಒಂದೆರೆಡು ಗೋಲುಗಳು ಬ್ರೆಜಿಲ್ ಖಾತೆ ಸೇರಲಿದ್ದವು. ಆದರೆ, ಕೆಮರೂನ್ ತಂಡದ ರಕ್ಷಣಾ ಪಡೆ ಹಾಗೂ ಗೋಲ್‌ಕೀಪರ್ ಇದಕ್ಕೆ ಅವಕಾಶ ನೀಡಲಿಲ್ಲ.

ಗೋಲು ವಿವರ

ಬ್ರೆಜಿಲ್-4
ನೇಮಾರ್- 17ನೇ, 35ನೇ ನಿಮಿಷ
ಫರ್ನಾಂಡೊ ಲೂಯಿಜ್ ರೋಜಾ-84ನೇ ನಿಮಿಷ
ಫ್ರೆಡ್- 49ನೇ ನಿಮಿಷ

ಕೆಮರೂನ್-1
ಜೋಲ್ ಮ್ಯಾಟಿಪ್-26ನೇ ನಿಮಿಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.