ಈಕ್ವೆಡಾರ್ ಆಸೆ ಜೀವಂತ

ಕ್ಯುರಿಟಿಬಾ: ಮಾಡು ಇಲ್ಲವೇ ಮಡಿ ಎನ್ನುವ ರೀತಿಯಲ್ಲಿ ರೋಚಕ ಪೈಪೋಟಿ ನಡೆಸಿದ ಈಕ್ವೆಡಾರ್ ಮತ್ತು ಹೋಂಡುರಾಸ್ ತಂಡಗಳ ನಡುವಿನ ಅಂತಿಮ ಫಲಿತಾಂಶ ಕೂಡ ರೋಚಕವಾಗಿಯೇ ಹೊರಹೊಮ್ಮಿದೆ. ಇದರಲ್ಲಿ ಈಕ್ವೆಡಾರ್ ಆಟಗಾರರು ತಮ್ಮ ಪ್ರಭುತ್ವ ಸ್ಥಾಪಿಸಿದರೆ, ಹೋಂಡುರಾಸ್ ಸತತ ಎರಡನೇ ಸೋಲಿನ ಕಹಿ ಉಣ್ಣಬೇಕಾಗಿದೆ.
ಎರೆನಾ ದ ಬೇಕ್ಸಾಡಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಈಕ್ವೆಡಾರ್ ತಂಡದ ಆಟಗಾರರು 2-1 ಗೋಲುಗಳಿಂದ ಹೋಂಡುರಾಸ್ ತಂಡವನ್ನು ಪರಾಭವಗೊಳಿಸಿದರು. ಮುನ್ಪಡೆ ಆಟಗಾರ ಎನ್ನರ್ ವೆಲೆನ್ಸಿಯಾ ಮೊದಲ ಮತ್ತು ಎರಡನೇ ಅವಧಿಯಲ್ಲಿ ತಲಾ ಒಂದೊಂದು ಗೋಲು ಬಾರಿಸಿ ಈಕ್ವೆಡಾರ್ ತಂಡಕ್ಕೆ ತೀರ ಅನಿವಾರ್ಯವಾಗಿದ್ದ ಗೆಲವನ್ನು ತಂದುಕೊಟ್ಟರು.
ಮತ್ತೊಂದೆಡೆ ಹೋಂಡುರಾಸ್ ಆಟಗಾರರು ಸಹ ವಿಜಯಲಕ್ಷ್ಮಿ ಒಲಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ಅದೃಷ್ಟ ಅವರಿಗೆ ಬೆಂಬಲವಾಗಿ ನಿಲ್ಲಲಿಲ್ಲ. ಈ ಗೆಲವಿನೊಂದಿಗೆ ಈಕ್ವೆಡಾರ್ ತಂಡ 'ಇ' ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಪ್ರಿಕ್ವಾರ್ಟರ್ಫೈನಲ್ ಸುತ್ತಿನ ಆಸೆ ಜೀವಂತವಾಗಿರಿಸಿಕೊಂಡಿತು. ಆರಂಭಿಕ ಪಂದ್ಯದಲ್ಲಿ ಸ್ವಿಜರ್ಲೆಂಡ್ ವಿರುದ್ಧ 2-1 ಗೋಲುಗಳಿಂದ ಸೋಲನುಭವಿಸಿದ್ದ ಈಕ್ವೆಡಾರ್ ತಂಡದ ಪಾಲಿಗೆ ಈ ಪಂದ್ಯ ಅಳಿವು-ಉಳಿವಿನ ಪ್ರಶ್ನೆಯಾಗಿತ್ತು.
ಅದೇ ರೀತಿ ಹೋಂಡುರಾಸ್ ತಂಡಕ್ಕೂ ಸಹ ಇದು ಮಾಡು ಇಲ್ಲವೇ ಮಡಿ ಕದನವಾಗಿತ್ತು. ಏಕೆಂದರೆ, ಹೋಂಡುರಾಸ್ ಗುಂಪಿನ ಮೊದಲ ಪಂದ್ಯದಲ್ಲಿ ಫ್ರಾನ್ಸ್ ಎದುರು 3-0 ಗೋಲುಗಳಿಂದ ಆಘಾತಕಾರಿ ಸೋಲು ಕಂಡಿತ್ತು. ಆದರೆ, ಈಕ್ವೆಡಾರ್ ವಿರುದ್ಧವೂ ಸೋಲು ಕಾಣುವುದರೊಂದಿಗೆ ಹೋಂಡುರಾಸ್ ಆಟಗಾರರು ಗುಂಪು ಸೆಣಸಿನಲ್ಲಿಯೇ ತಮ್ಮ ಹೋರಾಟಕ್ಕೆ ತೆರೆ ಎಳೆದುಕೊಳ್ಳಬೇಕಾಗಿದೆ.
ಪಂದ್ಯದಲ್ಲಿ ಈಕ್ವೆಡಾರ್ ಆಟಗಾರರು ಪ್ರತಿಶತ 51ರಷ್ಟು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ್ದರು. ಒಂದು ರೀತಿಯಲ್ಲಿ ಉಭಯ ತಂಡಗಳ ನಡುವೆ ಅಂತಿಮಘಟ್ಟದವರೆಗೂ ಸಮಬಲದ ಹೋರಾಟವೇ ಕಂಡುಬಂದಿತು. ಹೋಂಡುರಾಸ್ ತಂಡ 9 ಬಾರಿ ಗುರಿಯೆಡೆಗೆ ಚೆಂಡು ಬಾರಿಸಿದರೆ, ಈಕ್ವೆಡಾರ್ ಆಟಗಾರರು 5 ಬಾರಿ ಗುರಿಯತ್ತ ತಮ್ಮ ಸಾಹಸ ಪ್ರದರ್ಶಿಸಿದ್ದರು. ವಿಶ್ವಕಪ್ನಲ್ಲಿ ಮೊದಲ ಜಯ ಸಾಧಿಸುವ ಆಸೆಯಲ್ಲಿದ್ದ ಹೋಂಡುರಾಸ್ ಆಟಗಾರರಿಗೆ ಪ್ರಾರಂಭದಲ್ಲಿ ಅದು ಈಡೇರುವ ದಾರಿ ಕಂಡಿತು. ಪಂದ್ಯದ 31ನೇ ನಿಮಿಷದಲ್ಲಿಯೇ ಕಾರ್ಲೊ ಕಾಸ್ಟ್ಲಿ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಡುವುದರೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾಗಿದ್ದರು. ಆದರೆ, ಈ ಹಿಡಿತ ಮೂರೇ ನಿಮಿಷಗಳಲ್ಲಿ ಕಳೆದುಹೋಗಿದ್ದು, ಹೋಂಡುರಾಸ್ಗೆ ಭಾರಿ ನಿರಾಸೆ ಮೂಡಿಸಿತು.
ಪಂದ್ಯದ 34ನೇ ನಿಮಿಷದಲ್ಲಿ ಎನ್ನರ್ ವೆಲೆನ್ಸಿಯಾ ಆಕರ್ಷಕ ಗೋಲು ದಾಖಲಿಸಿ ಈಕ್ವೆಡಾರ್ ತಂಡಕ್ಕೆ ಹಿನ್ನಡೆ ಅಂತರ ತಗ್ಗಿಸಿ ಎದುರಾಳಿ ಜೊತೆ 1-1 ಸಮಗೌರವ ತಂದುಕೊಟ್ಟರು. ಎರಡನೇ ಅವಧಿಯಲ್ಲಿ ಎನ್ನರ್ ಮತ್ತೊಂದು ಗೋಲು ಗಳಿಸಿದರು. ಪಂದ್ಯದ 65ನೇ ನಿಮಿಷದಲ್ಲಿ ವಾಲ್ಟರ್ ಅಯೋವಿ ಸುಮಾರು 25 ಗಜ ದೂರದಿಂದ ಫ್ರೀಕಿಕ್ನಲ್ಲಿ ಬಾರಿಸಿದ ಚೆಂಡನ್ನು ಹೆಡ್ ಮಾಡುವ ಮೂಲಕ ಎನ್ನರ್ ಗೋಲು ಗಳಿಸಿದರು. ಇದರೊಂದಿಗೆ ಅವರು ಒಟ್ಟಾರೆ 3 ಗೋಲು ಗಳಿಸಿ ಅತಿ ಹೆಚ್ಚು ಗೋಲುಗಳಿಸಿದ ಕರೀಮ್ ಬೆಂಜೆಮಾ, ರಾಬಿನ್ ವ್ಯಾನ್ ಪರ್ಸಿ, ಥಾಮಸ್ ಮುಲ್ಲರ್ ಮತ್ತು ಆರ್ಜೆರ್ ರಾಬೆನ್ ಅವರನ್ನು ಕೂಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


