ನಾಕೌಟ್ ಹಂತಕ್ಕೆ ಹಾಲೆಂಡ್
ಹಿಂದಿನ ಮುಖಾಮುಖಿಯಲ್ಲಿ ಸೋಲೇ ಕಂಡಿಲ್ಲ. ಈ ಪಂದ್ಯದಲ್ಲಿ ಗೆಲವು ನಮ್ಮದೇ ಎಂಬ ಸ್ಫೂರ್ತಿಯ...

ಪೊರ್ಟೋ ಅಲೆಗ್ರೆ (ಬ್ರೆಜಿಲ್): ಹಿಂದಿನ ಮುಖಾಮುಖಿಯಲ್ಲಿ ಸೋಲೇ ಕಂಡಿಲ್ಲ. ಈ ಪಂದ್ಯದಲ್ಲಿ ಗೆಲವು ನಮ್ಮದೇ ಎಂಬ ಸ್ಫೂರ್ತಿಯ ಪ್ರದರ್ಶನ ನೀಡಿತು ಆಸ್ಟ್ರೇಲಿಯಾ. ಆದರೆ, ಅದನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಬಲಿಷ್ಠ ಹಾಲೆಂಡ್ 3-2 ಗೋಲುಗಳ ಅಂತರದಿಂದ ರೋಚಕ ಜಯ ಸಾಧಿಸಿತು.
ಇದರೊಂದಿಗೆ ಬುಧವಾರ ನಡೆದ ಫುಟ್ಬಾಲ್ ವಿಶ್ವಕಪ್ ಪಂದ್ಯದಲ್ಲಿ ಗೆದ್ದ ಹಾಲೆಂಡ್, ಪಂದ್ಯಾವಳಿಯಲ್ಲಿ ನಾಕೌಟ್ ಹಂತ ಪ್ರವೇಶಿಸಿತು. ಅಲ್ಲದೆ, ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ವಿರುದ್ಧ ಭಾರೀ ಅಂತರದಿಂದ ಗೆದ್ದು ಬೀಗಿದ್ದ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸುವ ಮೂಲಕ, ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ನಾನೂ ಇದ್ದೇನೆ ಎಂಬುದನ್ನು ಹಾಲೆಂಡ್ ಸಾರಿ ಸಾರಿ ಹೇಳಿತು.
ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸ್ಪೇನ್ ವಿರುದ್ಧ ಪಾರಮ್ಯ ಮೆರೆದಿದ್ದ ಹಾಲೆಂಡ್ ತಂಡದ ವಿರುದ್ಧ ಸಮರ್ಥ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ಮೊದಲಾರ್ಧ ಪಂದ್ಯದಲ್ಲಿ 1-1 ಗೋಲುಗಳಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ದ್ವಿತೀಯಾರ್ಧ ಪಂದ್ಯದಲ್ಲಿ ಹಾಲೆಂಡ್ ಪಾರಮ್ಯ ಮೆರೆಯಿತು.
ಆರಂಭದಿಂದಲೂ ಉಭಯ ತಂಡಗಳು ತೀವ್ರ ಪೈಪೋಟಿಯನ್ನು ಎದುರಿಸಿದವು. ಪಂದ್ಯದ 18ನೇ ನಿಮಿಷದವರೆಗೂ ಗೋಲು ದಾಖಲಾಗಿರಲಿಲ್ಲ. ಆದರೆ, 19ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಅರ್ಜೆನ್ ರಾಬೆನ್ ಅವರು ಹಾಲೆಂಡ್ ತಂಡ 1-0 ಅಂತರದಿಂದ ಮುನ್ನಡೆ ಸಾಧಿಸುವಂತೆ ನೋಡಿಕೊಂಡರು. ನಂತರ 20ನ ನಿಮಿಷದಲ್ಲೇ ಆಸೀಸ್ ತಿರುಗೇಟು ನೀಡಿತು. ಟಿಮ್ ಕಾಹಿಲ್ ಅವರು ಗೋಲು ದಾಖಲಿಸುವ ಮೂಲಕ ಆಸ್ಟ್ರೇಲಿಯಾ 1-1 ಗೋಲುಗಳಿಂದ ಸಮಬಲ ಸಾಧಿಸಿತು. ಉಭಯ ತಂಡಗಳು ಕೇವಲ 70 ಸೆಕೆಂಡ್ಗಳಲ್ಲಿ ತಲಾ ಒಂದು ಗೋಲು ದಾಖಲಿಸಿ ಅಭಿಮಾನಿಗಳಲ್ಲು ಪುಳಕ ಉಂಟುಮಾಡಿದವು.
ಪಂದ್ಯದ ದ್ವಿತೀಯಾರ್ಧ ದಲ್ಲಿ ಆಸ್ಟ್ರೇಲಿಯಾದ ಓಲಿವರ್ ಬೊಜಾನಿಕ್ ಅವರಿಗೆ ಸ್ಪೇನ್ನ ಡಾರಿಲ್ ಜನ್ಮಾತ್ ಅಡ್ಡಿಯುಂಟು ಮಾಡಿದರು. ಈ ಹಿನ್ನೆಲೆಯಲ್ಲಿ ಆಸೀಸ್ಗೆ 53ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ದೊರಕಿತು. ಈ ಅವಕಾಶದಲ್ಲಿ ಮಿಲೆ ಜಡಿನಾಕ್ ಅವರು ಹಾಲೆಂಡ್ ಗೋಲ್ಕೀಪರ್ ಕಣ್ತಪ್ಪಿಸುವ ಮೂಲಕ ಸುಲಭವಾಗಿ ಗೋಲು ದಾಖಲಿಸಿದರು. ನಂತರ ಆಸ್ಟ್ರೇಲಿಯಾ ಮತ್ತೊಂದು ಗೋಲು ದಾಖಲಿಸುವ ಅವಕಾಶ ಪಡೆದಿತ್ತು. ಆದರೆ, ಗೋಲಾಗಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಆದರೆ, ತಕ್ಷಣವೇ ಜಾಗೃತರಾದ ಹಾಲೆಂಡ್ ತಂಡದ ಆಟಗಾರು ಸೂಕ್ತ ಉತ್ತರವನ್ನೇ ನೀಡಿದರು. ಮೆಂಫೀಸ್ ಡಿಪೆ ಪಾಸ್ ಮಾಡಿದ ಚೆಂಡನ್ನು ಗೋಲಾಗಿಸಿದ ರಾಬಿನ್ ವ್ಯಾನ್ ಪರ್ಸಿ ಹಾಲೆಂಡ್ 2-2 ಗೋಲುಗಳ ಅಂತರದಿಂದ ಸಮಬಲ ಸಾಧಿಸುವಂತೆ ನೋಡಿಕೊಂಡರು.
ಆದರೆ, 69ನೇ ನಿಮಿಷದಲ್ಲಿ ಚೆಂಡನ್ನು ತಡೆಯುವಲ್ಲಿ ವೈಫಲ್ಯ ಕಂಡ ಆಸ್ಟ್ರೇಲಿಯಾದ ಗೋಲ್ ಕೀಪರ್ ಮೆಟಿ ರಿನ್, ಹಾಲೆಂಡ್ನ ಮೆಂಫೀಸ್ ಡಿಪೆಗೆ ಗೋಲು ದಾಖಲಿಸಲು ಅವಕಾಶ ಮಾಡಿಕೊಟ್ಟರು.ಹೀಗಾಗಿ ಹಾಲೆಂಡ್ 3-2 ಗೋಲುಗಳಿಂದ ಮೇಲುಗೈ ಪಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


