ಫಿಫಾ ವಿಶ್ವಕಪ್ 2014

ನೇಮಾರ್‌ಗೆ ನಮಿಸಿದ ಕ್ರೊವೇಷಿಯಾ

ವಿಶ್ವಕಪ್ ಮೊದಲ ಪಂದ್ಯದಲ್ಲಿ ಬ್ರೆಜಿಲ್‌ಗೆ 3-1ರಿಂದ ಅದ್ಧೂರಿ ವಿಜಯ...

ನೇಮಾರ್‌ಗೆ ನಮಿಸಿದ ಕ್ರೊವೇಷಿಯಾ
Published On :

ಸಾವೊ ಪೌಲೊ: ನಿರೀಕ್ಷೆಯಂತೆ ಆತಿಥೇಯ ಬ್ರೆಜಿಲ್ ತಂಡದ ಆಟಗಾರರು 2014ರ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ತಮ್ಮ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಬಾರ್ಸಿಲೋನಾದ ಸೂಪರ್‌ಸ್ಟಾರ್ ನೇಮಾರ್ ನೆರವಿನಿಂದ ಬ್ರೆಜಿಲ್ ತಂಡ 'ಎ' ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಕ್ರೊವೇಷಿಯಾ ವಿರುದ್ಧ 3-1 ಗೋಲುಗಳಿಂದ ಜಯಭೇರಿ ಬಾರಿಸಿತು.
ಸಾವೊ ಪೌಲೊದ ಕೊರಿಂಥಿಯಾನ್ಸ್ ಏರೆನಾ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ಮುಕ್ತಾಯಗೊಂಡ ಪಂದ್ಯದಲ್ಲಿ ಬ್ರೆಜಿಲ್ ತಂಡ ತನ್ನ ಘನತೆಗೆ ತಕ್ಕ ಪ್ರದರ್ಶನ ನೀಡುವ ಮೂಲಕ ಯಶಸ್ಸಿನ ಶಿಖರವನ್ನೇರಿತು. ಸುಮಾರು 61,600 ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದ ಕ್ರೀಡಾಂಗಣದಲ್ಲಿ ತಮ್ಮ ಕಾಲ್ಚಳಕ ತೋರಿದ ನೇಮಾರ್ ಮೊದಲ ಮತ್ತು ಎರಡನೇ ಅವಧಿಗಳಲ್ಲಿ ತಲಾ ಒಂದೊಂದು ಗೋಲು ದಾಖಲಿಸಿದರು. ಕೊನೆಯಘಟ್ಟದಲ್ಲಿ ಗಾಯದ ಹೆಚ್ಚುವರಿ ಸಮಯದ ಆಟಗಲ್ಲಿ ಆಸ್ಕರ್ ಅವರು ಬ್ರೆಜಿಲ್ ತಂಡಕ್ಕೆ ಮೂರನೇ ಗೋಲು ಸಂಪಾದಿಸಿಕೊಟ್ಟು ತಂಡದ ಗೆಲವಿನ ಅಂತರವನ್ನು ಹೆಚ್ಚಿಸಿದರು.
ಹಾಗೆ ನೋಡಿದರೆ, ಬ್ರೆಜಿಲ್ ತಂಡ ಪಂದ್ಯ ಆರಂಭವಾಗುತ್ತಿದ್ದಂತೆಯೇ ಎದುರಾಳಿ ತಂಡಕ್ಕೆ ತಾನೇ ಗೋಲುಗಳಿಸಿಕೊಟ್ಟು ಒತ್ತಡ ಮೈಮೇಲೆ ಎಳೆದುಕೊಂಡಿತು.
ಬ್ರೆಜಿಲ್‌ನ ಸಾಂಪ್ರದಾಯಿಕ ಸೊಗಡಿನ ಅನಾವರಣಗೊಳ್ಳುವ ಮೂಲಕ ರಂಗುರಂಗಿನ ಉದ್ಘಾಟನೆಯ ನಂತರ ವಿಶ್ವಕಪ್ ಫುಟ್ಬಾಲ್‌ನ ಮೊದಲ ಸಮರಕ್ಕಿಳಿದ ಬ್ರೆಜಿಲ್ ಮತ್ತು ಕ್ರೊವೇಷಿಯಾ ತಂಡಗಳ ಆಟಗಾರರ ನಡುವೆ ಉತ್ತಮ ಪೈಪೋಟಿ ಶುರುವಾಯಿತು. ಪ್ರಾರಂಭದಲ್ಲಿಯೇ ಅದೃಷ್ಟ ಸಂಪಾದಿಸಿದ ಕ್ರೊವೇಷಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಪಂದ್ಯದ 11ನೇ ನಿಮಿಷದಲ್ಲಿ ಕ್ರೊವೇಷಿಯಾ ಆಟಗಾರರು ಬ್ರೆಜಿಲ್‌ನ ಕೋಟೆಯೊಳಗೆ ನುಸುಳಿಬಂದು ಗುರಿಯೆಡೆಗೆ ಸಾಗುವ ಪ್ರಯತ್ನಕ್ಕೆ ಮುಂದಾದರು. ಈ ಹಂತದಲ್ಲಿ ಗೋಲು ಬಲೆಯ ಸಮೀಪವಿದ್ದ ಚೆಲ್ಸಿಯ ಸಂಪರ್ಕ ಆಟಗಾರ ಮಾರ್ಸೆಲೊ ಕ್ರೊವೇಷಿಯಾ ಆಟಗಾರರು ಗುರಿಯತ್ತ ಒದ್ದ ಚೆಂಡನ್ನು ತಡೆಯುವ ಪ್ರಯತ್ನ ಮಾಡಿದರು. ಆದರೆ, ಚೆಂಡು ಮಾತ್ರ ಅವರ ಪಾದದಂಚಿಗೆ ಬಡಿದು ಗೋಲಿನ ಬಲೆ ಸೇರಿಯೇಬಿಟ್ಟಿತು. ಮಾರ್ಸೆಲೊರ ಸ್ವಯಂಕೃತ ಅಪರಾಧದ ಪರಿಣಾಮವಾಗಿ ಕ್ರೊವೇಷಿಯಾಕ್ಕೆ ಗೋಲು ಲಭಿಸಿ 1-0 ಮುನ್ನಡೆಯೊಂದಿಗೆ ಹಿಡಿತ ಸಾಧಿಸಿತು.
ಆದರೆ, ಕ್ರೊವೇಷಿಯನ್ನರ ಈ ಸಂಭ್ರಮ ಬಹಳ ಸಮಯ ಉಳಿಯಲಿಲ್ಲ. ಕೇವಲ 18 ನಿಮಿಷಗಳ ಅಂತರದಲ್ಲಿ ಆಪದ್ಬಾಂಧವರಂತೆ ಬಂದ ನೇಮಾರ್ ಬ್ರೆಜಿಲ್ ಪರ ಗೋಲು ದಾಖಲಿಸಿ ಆಟ ಸಮಸ್ಥಿತಿಗೆ ಮರಳುವಂತೆ ಮಾಡಿದರು.
ವಿರಾಮದ ವೇಳೆಗೆ ಉಭಯ ತಂಡಗಳು 1-1 ಗೋಲುಗಳಿಸಿ ಸಮಗೌರವ ಸಾಧಿಸಿದ್ದವು. ಆದರೆ, ಉತ್ತರಾರ್ಧದ ಆಟದಲ್ಲಿ ಬ್ರೆಜಿಲ್ ಪಾರುಪತ್ಯ ಮುಂದುವರಿಯಿತು. ಗೋಲುಬಲೆಯ ಸಮೀಪ ಕ್ರೊವೇಷಿಯಾ ಆಟ ಗಾರ ಡೆಜಾನ್ ಲೊರೆನ್ ಅವರು ಬ್ರೆಜಿಲ್‌ನ ಫ್ರೆಡ್ ಅವರನ್ನು ಎಳೆದು ನೆಲಕ್ಕೆ ಬೀಳಿಸಿದರು. ಆಗ ಬ್ರೆಜಿಲ್‌ಗೆ ಪೆನಾಲ್ಟಿ ಅವಕಾಶ ಲಭಿಸಿತು. ಈ ಅವಕಾಶವನ್ನು ಕೈಗೆತ್ತಿಕೊಂಡ ನೇಮಾರ್, ಗೋಲು ಗಳಿಸುವಲ್ಲಿ ಅಳುಕಲಿಲ್ಲ.
ಇನ್ನು ಕೊನೆಯ ಘಟ್ಟದ ಹೆಚ್ಚುವರಿ ಸಮಯದ ಅವಧಿಯಲ್ಲಿ ಆಸ್ಕರ್ ಆಕರ್ಷಕ ಗೋಲು ದಾಖಲಿಸುವ ಮೂಲಕ ತಂಡದ ಗೆಲುವನ್ನು 3-1ಕ್ಕೆ ಹೆಚ್ಚಿಸಿದರು.
ಇಡೀ ಪಂದ್ಯದಲ್ಲಿ ಬ್ರೆಜಿಲ್ ಆಟಗಾರರೇ ಹಿಡಿತ ಸಾಧಿಸಿದ್ದರು. ಚೆಂಡಿನ ಮೇಲೆ ಪ್ರತಿಶತ 59ರಷ್ಟು ನಿಯಂತ್ರಣ ಹೊಂದಿದ್ದ ಅವರು ತವರು ನೆಲದ ಪೂರ್ಣ ಲಾಭ ಪಡೆದುಕೊಂಡು ಅಧಿಕಾರಯುತ ಗೆಲವು ದಾಖಲಿಸಿದರು. ತವರಿನ ಅಭಿಮಾನಿಗಳು ತಮ್ಮ ತಂಡದ ವಿಜಯೋತ್ಸವದಿಂದ ಕುಣಿದು ಕುಪ್ಪಳಿಸಿದರು.
ಉದ್ಘಾಟನೆ ಸಮಾರಂಭ ಹಾಗೂ ಪಂದ್ಯಾವಳಿ ಆರಂಭಕ್ಕೆ ಮುನ್ನ ಇದ್ದ ಪ್ರತಿಭಟನೆಯ ಕಾವು ನಂತರ ತಣ್ಣಗಾಯಿತು. ಬಿಗಿ ಭದ್ರತಾ ವ್ಯವಸ್ಥೆ ಕೈಕೊಂಡಿದ್ದಲ್ಲದೇ, ಮುಂಜಾಗೃತೆಯಿಂದ ಮೊದಲೇ ಎಲ್ಲಾ ರೀತಿಯ ಸುರಕ್ಷತೆಯನ್ನು ಮಾಡಿಕೊಂಡಿದ್ದರಿಂದ ಪ್ರತಿಭಟನೆಯ ಬಿಸಿ ತಟ್ಟಲಿಲ್ಲ.

ಗೋಲು ವಿವರ
ಬ್ರೆಜಿಲ್ 3
ನೇಮಾರ್ 29ನೇ ನಿಮಿಷ, 71ನೇ ನಿಮಿಷ (ಪೆನಾಲ್ಟಿ)
ಆಸ್ಕರ್ 90೤1ನೇ ನಿಮಿಷ
ಕ್ರೊವೇಷಿಯಾ 1
ಮಾರ್ಸೆಲೊ 11ನೇ ನಿಮಿಷ
(ಬ್ರೆಜಿಲ್ ಆಟಗಾರನ ಸ್ವಯಂಕೃತ ಅಪರಾಧದಿಂದ ಕ್ರೊವೇಷಿಯಾಗೆ ಗೋಲು)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.