ಅಪ್ಪನಿಗೊಂದು ಪತ್ರ
ಅಪ್ಪಾ, ಇಂದಿಗೆ ನಿಮಗೆ 36 ವರ್ಷ, 1 ತಿಂಗಳು, 15 ದಿನಗಳಾದವು. ನಾನು ಹುಟ್ಟಿದ ಮೇಲೆಯೇ ಅಲ್ಲವೇ ನೀವೂ ತಂದೆಯಾದದ್ದು? ಹಾಗಾಗಿ, ನಿಮಗೂ...

ಅಪ್ಪಾ, ಇಂದಿಗೆ ನಿಮಗೆ 36 ವರ್ಷ, 1 ತಿಂಗಳು, 15 ದಿನಗಳಾದವು. ನಾನು ಹುಟ್ಟಿದ ಮೇಲೆಯೇ ಅಲ್ಲವೇ ನೀವೂ ತಂದೆಯಾದದ್ದು? ಹಾಗಾಗಿ, ನಿಮಗೂ ಕೂಡ ನನ್ನಷ್ಟೇ ವಯಸ್ಸು. ಅಲ್ವಾ ಅಪ್ಪಾ?.. ಚಿಕ್ಕಂದಿನಿಂದಲೂ ನಾನು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ನನಗೆ ಪ್ರೋತ್ಸಾಹ ನೀಡಿ, ಸಲಹೆ ನೀಡಿ, ನನ್ನ ಸ್ವಂತ ಕಾಲಿನ ಮೇಲೆ ನಿಲ್ಲುವ ಹಾಗೆ ಮಾಡಿರುವ ನಿಮಗೆ ಇದೋ ನನ್ನ ವಂದನೆ.
ನಿಮ್ಮೆದುರು ನಿಂತು ಮಾತನಾಡಲು ಆಗದೇ, ಪತ್ರ ಬರೆಯುತ್ತಿದ್ದೇನೆ.
ಅಪ್ಪಾ, ನಾನು ಹುಟ್ಟಿದಾಗಿನಿಂದ, ನಡೆಯಲು ಆರಂಭಿಸುವವರೆಗೂ ನನ್ನನ್ನು ಎತ್ತಿ, ಮುದ್ದಾಡಿರುವಿರಿ. ನಿದ್ದೆ ಮರೆತುಕೊಂಡು ಅಳುತ್ತಿದ್ದಾಗ ಲಾಲಿ ಹಾಡುಗಳನ್ನು ಅದೆಷ್ಟು ಹೇಳಿರುವಿರೋ ಅವೆಲ್ಲ ನನಗೆ ನೆನಪಿದೆ. ನೀವು ನನಗೆ ಯಾವಾಗಲೂ 'ತೂಗುವೆ ರಂಗನ, ತೂಗುವೆ ಕೃಷ್ಣನ, ತೂಗಿ ಜೋ ಜೋ ಹಾಡುವೆ' ಎಂಬ ಲಾಲಿ ಹಾಡನ್ನು ಹೇಳಿ, ನನ್ನನ್ನು ಮಲಗಿಸುತ್ತಿದ್ದಿರಿ. ಈಗಲೂ, ಈ ಹಾಡನ್ನು ಕೇಳಿದಾಗ ನನಗೆ ನಿದ್ದೆ ಬರುತ್ತದೆ. ಅಷ್ಟು ಅಕ್ಕರೆ, ವಾತ್ಸಲ್ಯದಿಂದ ನೀವು ಹಾಡುತ್ತಿದ್ದಿರಿ. ನನ್ನನ್ನು ನಿಮ್ಮ ಕಿರಿಯ ಸ್ನೇಹಿತನಂತೆ ಕಂಡಿರುವಿರಿ. ನಿಮ್ಮನ್ನು, ನನ್ನ ಹಿರಿಯ ಮಿತ್ರನಂತೆ ಇಂದಿಗೂ ಆದರಿಸುತ್ತಿರುವೆ. ಏನಾದರೂ ಸಲಹೆ ಬೇಕಾದಲ್ಲಿ, ಮೊದಲು ಆ ವಿಷಯದ ಬಗ್ಗೆ ವಿಶ್ಲೇಷಿಸಿದ ನಂತರ ನಾನು ನಿಮ್ಮನ್ನೇ ಕೇಳುವುದು. ನೀವು ಅದನ್ನು ಕೂಲಂಕುಶವಾಗಿ ಪರಿಶೀಲಿಸಿದ ನಂತರ ಒಂದು ನಿರ್ಧಾರಕ್ಕೆ ಬಂದು, ಅದನ್ನು ನನಗೆ ಅರ್ಥವಾಗುವಂತ ಸಲಹೆ ನೀಡಿರುವಿರಿ. ನಿಮ್ಮ ಬಗ್ಗೆ ನನಗೆ ಬಹಳ ಅಭಿಮಾನವಿದೆ.
ನಾನು ಬೆಳೆದಂತೆಲ್ಲಾ, ನಾನು ನನ್ನ ಸ್ವಂತ ಬುದ್ಧಿಯಿಂದ, ಆತ್ಮವಿಶ್ವಾಸದಿಂದ ತೆಗೆದುಕೊಂಡಂತಹ ನಿರ್ಧಾರಗಳನ್ನು ಪ್ರೋತ್ಸಾಹಿಸಿದಂತೆಯೇ, ಕೆಲವೊಮ್ಮೆ ಅತಿ ಬುದ್ಧಿವಂತಿಕೆ, ಆತುರದಲ್ಲಿ ತೆಗೆದುಕೊಂಡಂತಹ ನಿರ್ಧಾರಗಳನ್ನೂ ಖಂಡಿಸಿ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಾಗೆ ಮಾಡಿರುವಿರಿ. ನೀವು ನನ್ನ ಕೆಲಸ ಕಾರ್ಯಗಳನ್ನು ಚೆನ್ನಾಗಿ ವಿಮರ್ಶಿಸಿರುವಿರಿ. ಮಾಡಿದ ಕಾರ್ಯಗಳಲ್ಲಿ ಗೆದ್ದಾಗ, ಅಹಂಕಾರದಿಂದ ಬೀಗದೇ, ಹಾಗೆಯೇ ಕೆಲವು ಬಾರಿ ಸೋತಾಗ, ಬೇಸರದಿಂದ ಕುಗ್ಗದೇ, ಎಲ್ಲವನ್ನು ಸಮಾನ ರೀತಿಯಲ್ಲಿ ನೋಡುವ ಹಾಗೆ ನನಗೆ ಪಾಠವನ್ನು ಹೇಳಿರುವಿರಿ.
ನನ್ನನ್ನು ತೀಡಿ, ತಿದ್ದಿ, ಒಬ್ಬ ಸಜ್ಜನನಾಗಿ ಮಾಡಿರುವ ನಿಮಗೆ, ನಾನು ಏನು ಮಾಡಿದರೂ ಸಾಲದು. ನನ್ನ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳುವಂತೆ ಮಾಡಿರುವ ನೀವು, ನಾನು ಸ್ಡತಂತ್ರನಾಗಿ, ಅಳುಕಿಲ್ಲದೇ, ಸೋಮಾರಿಯಾಗದೇ, ಬದುಕುವಂತೆ ಮಾಡಿರುವ ನೀವು, ನನ್ನ ತಂದೆಯೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಇಂದಿಗೂ ನನ್ನನ್ನು ಅತಿ ಹತ್ತಿರದಿಂದ ನೋಡಿ, ನನ್ನ ತಪ್ಪುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅದಕ್ಕೆ ಸರಿಯಾದ ದಾರಿಯನ್ನು ತೋರಿಸಿ, ನನ್ನ ಬೆನ್ನೆಲುಬಾಗಿ ನಿಂತಿರುವ ನಿಮಗೆ ನಾನು ಚಿರಋಣಿಯಾಗಿರುವೆ.
ನಿಮ್ಮ ಬಗ್ಗೆ ಬರೆಯಲು ಪದಗಳೇ ಇಲ್ಲ, ಕಣ್ಣಲ್ಲಿ ಆನಂದಬಾಷ್ಪ ನಿಲ್ಲುತ್ತಿಲ್ಲ.
-ಅನಿಲ್ ರಮೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


