ಚುನಾವಣಾ ಫಲಿತಾಂಶ: ಪ್ರಜಾತಂತ್ರದ ಸೌಂದರ್ಯ ಎಂದ ಸಿದ್ದರಾಮಯ್ಯ
ಕಾಂಗ್ರೆಸ್ ಪಕ್ಷಕ್ಕೆ ಸೋಲು ಆಘಾತಕಾರಿಯಾದುದು. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸೋಲಿನ ಸಣ್ಣ ಸೂಚನೆಯನ್ನೂ ನಾನು ಕಂಡಿರಲಿಲ್ಲ. ಆದರೆ ಇದೇ ಪ್ರಜಾತಂತ್ರದ ಸೌಂದರ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Published On :
ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಸೋಲು ಆಘಾತಕಾರಿಯಾದುದು. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸೋಲಿನ ಸಣ್ಣ ಸೂಚನೆಯನ್ನೂ ನಾನು ಕಂಡಿರಲಿಲ್ಲ. ಆದರೆ ಇದೇ ಪ್ರಜಾತಂತ್ರದ ಸೌಂದರ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, 'ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ದಿಗ್ಗಜರಾಗಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೆಚ್.ಡಿ.ದೇವೇಗೌಡ ಅವರದ್ದು ಯಾರೂ ಸಹ ಊಹಿಸಲಾಗದ ಸೋಲು. ಇಂತಹ ಸೋಲಿಗೆ ಈ ಇಬ್ಬರೂ ನಾಯಕರು ಖಂಡಿತವಾಗಿ ಅರ್ಹರಾಗಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಹಾಗೂ ದೇವೇಗೌಡ ಇಬ್ಬರು ಹಿರಿಯ ನಾಯಕರು ಲೋಕಸಭೆಯಲ್ಲಿ ಇದ್ದಿದ್ದರೆ ಅದರ ಲಾಭ ಕರ್ನಾಟಕಕ್ಕೆ ಆಗುತ್ತಿತ್ತು. ಕಲಬುರಗಿ ಹಾಗೂ ತುಮಕೂರು ಕ್ಷೇತ್ರಗಳ ಮತದಾರರು ಈ ಇಬ್ಬರನ್ನು ಸೋಲಿಸಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕನಿಷ್ಠ 15 ರಿಂದ 20 ಸ್ಥಾನಗಳನ್ನು ಗೆಲ್ಲುವ ಭರವಸೆ ಇತ್ತು. ರಾಹುಲ್ ಗಾಂಧಿಯವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಂತರ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಬೇಕೆಂಬ ಏಕೈಕ ಗುರಿಯನ್ನಿಟ್ಟುಕೊಂಡು ಹಗಲು ರಾತ್ರಿ ಶ್ರಮಿಸಿದ್ದಾರೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿಲ್ಲ ಎನ್ನುವುದು ನಿಜವಾದರೂ ಅವರ ಪ್ರಯತ್ನವನ್ನು ಅಭಿನಂದಿಸಲೇಬೇಕಾಗುತ್ತದೆ. ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಪಟ್ಟದಲ್ಲಿ ಕಾಣಬೇಕೆಂದು ದೇಶದ ಕೋಟ್ಯಂತರ ಜನ ಕಾದಿದ್ದರು. ಆದರೆ ಅಂತಹ ಕಾಲ ಕೂಡಿ ಬಂದಿಲ್ಲ. ವಿಳಂಬವಾದರೂ ಖಂಡಿತವಾಗಿಯೂ ರಾಹುಲ್ ಗಾಂಧಿ ಪ್ರಧಾನಿಯಾಗುವ ಕಾಲ ಬಂದೇ ಬರುತ್ತದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಹಗಲು-ರಾತ್ರಿ ಶ್ರಮಿಸಿದ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದ ಅವರು, ಸೋಲಿನಿಂದ ಕಾರ್ಯಕರ್ತರಿಗೆ ಖಂಡಿತ ನಿರಾಶೆಯಾಗಿರುತ್ತದೆ. ಆದರೆ ಮತ್ತೊಮ್ಮೆ ಗೆಲುವಿಗಾಗಿ ಹೋರಾಡುವವನು ನಿಜವಾದ ನಾಯಕನಾಗುತ್ತಾನೆ. ಇದನ್ನು ನಮ್ಮ ಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕು. ಕತ್ತಲೆಯ ಸುರಂಗದ ಕೊನೆಯಲ್ಲಿ ಬೆಳಕು ಇರುತ್ತದೆ ಎಂದು ನಂಬಿಕೊಂಡು ಮುಂದೆ ಸಾಗಬೇಕು ಎಂದು ಕಾರ್ಯಕರ್ತರನ್ನು ಸಂತೈಸಿದ್ದಾರೆ.
ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿಗೆ ಮತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ನರೇಂದ್ರ ಮೋದಿಯವರನ್ನು ಅಭಿನಂದಿಸಿದ ಸಿದ್ದರಾಮಯ್ಯ, ಮುಂದಿನ ಐದು ವರ್ಷಗಳ ಕಾಲ ಜನ ಮೆಚ್ಚುವಂತಹ, ಇಡೀ ದೇಶವನ್ನು ರಾಷ್ಟ್ರಕವಿ ಕುವೆಂಪು ಹೇಳಿರುವಂತೆ "ಸರ್ವಜನಾಂಗದ ಶಾಂತಿಯ ತೋಟ’’ವನ್ನಾಗಿಸುವ ರೀತಿಯಲ್ಲಿ ಆಡಳಿತ ನೀಡಲಿ ಎಂದು ಹಾರೈಸಿದ್ದಾರೆ. ಚುನಾವಣೆ ಮುಗಿದ ಮೇಲೆ ರಾಜ್ಯದಿಂದ ಆಯ್ಕೆಯಾದ ಎಲ್ಲ ಸಂಸದರೂ ರಾಜ್ಯದ
ಪ್ರತಿನಿಧಿಗಳಾಗಿರುವುದರಿಂದ ಅವರೆಲ್ಲಾ ನಮ್ಮವರೇ ಆಗಿರುತ್ತಾರೆ. ಲೋಕಸಭೆಯಲ್ಲಿ ರಾಜ್ಯದ ದನಿ ಕೇಳಿಸುವಂತೆ ಎಲ್ಲ ಸಂಸದರು ಕೆಲಸ ಮಾಡಲಿ ಎಂದು ಅವರು ಶುಭಕೋರಿದ್ದಾರೆ.
ಮೇಲ್ನೋಟಕ್ಕೆ ಇಡೀ ದೇಶದಲ್ಲಿ ನರೇಂದ್ರಮೋದಿಯವರ ಪರವಾದ ಅಲೆ ಎದ್ದಿರುವಂತೆ ಕಾಣುತ್ತಿದೆ. ಇದಕ್ಕೆ ಏನು ಕಾರಣ ಎಂಬುದನ್ನು ಮುಂದಿನ ದಿನಗಳಲ್ಲಿ ನಾವೆಲ್ಲ ಒಟ್ಟಾಗಿ ಕೂತು ಚರ್ಚೆ ಮಾಡುತ್ತೇವೆ. ನಾವು ಜನರ ನಿತ್ಯ ಜೀವನಕ್ಕೆ ಸಂಬಂಧಿಸಿದ ವಾಸ್ತವ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಿದ್ದೇವೆ. ಮುಖ್ಯವಾಗಿ ತಾವು 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ನೀಡಿದ ಆಡಳಿತಾವಧಿಯ ಸಾಧನೆಗಳು ಹಾಗೂ ಹಿಂದಿನ 10 ವರ್ಷಗಳ ಯುಪಿಎ ಸಾಧನೆಗಳನ್ನು ಜನರಿಗೆ ತಿಳಿಸಿ ಹೇಳಲು ಪ್ರಯತ್ನಿಸಲಾಗಿತ್ತು. ಆದರೆ ಬಿಜೆಪಿ ನಾಯಕರು ರಾಷ್ಟ್ರೀಯತೆ, ಸೇನೆ, ಯುದ್ದ, ಹಿಂದೂ-ಮುಸ್ಲಿಮ್ ನಂತಹ ಮೊದಲಾದ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡಿದರು.
ಭಾರತದ ಮತದಾರರು ಭಾವುಕರಾಗಿರುವ ಕಾರಣದಿಂದಲೋ ಏನೋ ಬಿಜೆಪಿಯ ಭಾವನಾತ್ಮಕ ವಿಚಾರಗಳ ಅಲೆಯಲ್ಲಿ ತೇಲಿಹೋದಂತೆ ಕಾಣಿಸುತ್ತದೆ ಎಂದು ಸಿದ್ದರಾಮಯ್ಯ ಫಲಿತಾಂಶವನ್ನು ವಿಶ್ಲೇಷಿಸಿದ್ದಾರೆ. ಸತ್ಯ ಯಾವಾಗಲೂ ಕಹಿ, ಸುಳ್ಳು ಸಿಹಿ. ಸಿಹಿ ಆರೋಗ್ಯಕ್ಕೆ ಒಳ್ಳೆಯದಲ್ಲವಾದರೂ ಒಮ್ಮೊಮ್ಮೆ ಜನ ಆ ಸಿಹಿಯನ್ನೇ ಇಷ್ಟಪಡುತ್ತಾರೆ. ವೈಯಕ್ತಿಕವಾಗಿ ಸೈದ್ಧಾಂತಿಕ ರಾಜಕೀಯದಲ್ಲಿ ಆಸಕ್ತಿ ಹೊಂದಿರುವ ತಾವು, ಸಮಸಮಾಜ ನಿರ್ಮಾಣದ ಕನಸು ಹೊತ್ತು ರಾಜಕೀಯ ಪ್ರವೇಶಿಸಿದ್ದು, ಅಧಿಕಾರದಲ್ಲಿದ್ದಾಗೆಲ್ಲ ಸಾಮಾಜಿಕ ನ್ಯಾಯಕ್ಕಾಗಿ ಪ್ರಯತ್ನ ಪಟ್ಟಿದ್ದೇನೆ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಚುನಾವಣಾ ಸೋಲಿನ ಹೊರತಾಗಿಯೂ ತಮ್ಮ ಹೋರಾಟ ಮುಂದುವರಿಯಲಿದ್ದು, ಗೆಲುವು ಬಂದಾಗ ಹಿಗ್ಗದೇ ಸೋತಾಗ ಕುಗ್ಗದೇ ಮುನ್ನಡೆಯಬೇಕು. ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯವಾಗಿದ್ದು, ಎರಡನ್ನೂ ಸಮಚಿತ್ತರದಿಂದ ಸ್ವೀಕರಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
ಸೋಲಿನ ಬಗ್ಗೆ ಖಂಡಿತ ಆತ್ಮಾವಲೋಕನ ನಡೆಸಲೇಬೇಕಿದೆ. ಈ ಸೋಲಿಗೆ ಕಾರಣಗಳನ್ನು ಹುಡುಕಲು ಸಾಧ್ಯವಾದರೆ, ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಲು ಸಾಧ್ಯವಾಗುತ್ತದೆ. ಇದರ ಬದಲಿಗೆ ಪರಸ್ಪರ ದೋಷಾರೋಪ ಮಾಡುತ್ತಾ ಕಾಲ ಕಳೆಯುವುದು ಸರಿ ಅಲ್ಲ. ಸೋಲಿಗೆ ನಾವೆಲ್ಲ ಜವಾಬ್ದಾರರಾಗಿರುವ ಕಾರಣ ಇದನ್ನು ಜತೆಯಾಗಿಯೇ ಎದುರಿಸಬೇಕಾಗುತ್ತದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಬಿಜೆಪಿಯ ನೂರೆಂಟು ವಿಘ್ನಗಳ ಹೊರತಾಗಿಯೂ ಸರ್ಕಾರ ಸಾಂಗವಾಗಿ ತನ್ನ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ರಾಜ್ಯದ ಅನೇಕ ಬಿಜೆಪಿ ನಾಯಕರು ಮೈತ್ರಿ ಸರ್ಕಾರವನ್ನು ಉರುಳಿಸುತ್ತೇವೆ ಎಂದು ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಇದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


