ಕರ್ನಾಟಕ

ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣರಿಂದ ಕಾಂಗ್ರೆಸ್ ನಾಯಕರ ಭೇಟಿ

ಹಾಸನ ಲೋಕಸಭೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಮಂಗಳವಾರ ಕಾಂಗ್ರೆಸ್ ಪ್ರಮುಖ ನಾಯಕರನ್ನು ಭೇಟಿಯಾಗಿ ಆಶೀರ್ವಾದ ಕೋರಿದ್ದಾರೆ.

ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣರಿಂದ ಕಾಂಗ್ರೆಸ್ ನಾಯಕರ ಭೇಟಿ
ಸಿದ್ದರಾಮಯ್ಯ ಭೇಟಿ ಮಾಡಿದ ಪ್ರಜ್ವಲ್
Published On :
ಬೆಂಗಳೂರು: ಹಾಸನ ಲೋಕಸಭೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಮಂಗಳವಾರ ಕಾಂಗ್ರೆಸ್ ಪ್ರಮುಖ ನಾಯಕರನ್ನು ಭೇಟಿಯಾಗಿ ಆಶೀರ್ವಾದ ಕೋರಿದ್ದಾರೆ. 
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಪ್ರಚಾರಕ್ಕೆ ಆಗಮಿಸುವಂತೆ ಮನವಿ ಮಾಡಿದ್ದಾರೆ.   
ಇಂದು ನಗರದ 'ಕಾವೇರಿ' ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಪ್ರಜ್ವಲ್ ರೇವಣ್ಣ ಹೂಗುಚ್ಚ ನೀಡಿ ಆಶೀರ್ವಾದ ಕೋರಿದರು. ಹಾಸನದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಕಡೂರು, ಅರಕಲಗೂಡು ಹಾಗೂ ಅರಸೀಕೆರೆ ಭಾಗದಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸುವುದಾಗಿ ಸಿದ್ದರಾಮಯ್ಯ ಪ್ರಜ್ವಲ್ ಗೆ ಭರವಸೆ ನೀಡಿದ್ದಾರೆ.
ಕೆಲವು ಕಾಂಗ್ರೆಸ್ ನಾಯಕರ ಅಸಮಾಧಾನ ತಣಿಸಲು ಸಿದ್ದರಾಮಯ್ಯ ಹಾಸನ ಜಿಲ್ಲಾ ನಾಯಕರ ಸಭೆ ನಡೆಸಿ ಪ್ರಜ್ವಲ್ ಬೆಂಬಲಿಸುವಂತೆ ಸೂಚನೆ ನೀಡಿದ್ದರು. ಇನ್ನೂ ಕೆಲ ನಾಯಕರಲ್ಲಿ ಅಸಮಾಧಾನವಿದ್ದು ಅವರಿಗೆ ಸೂಚನೆ ನೀಡುವಂತೆ ಪ್ರಜ್ವಲ್ ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು ಎನ್ನಲಾಗಿದೆ.
ಬಳಿಕ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಬೆಂಗಳೂರು ನಗರ ಯೋಜನೆ ಪ್ರಾಧಿಕಾರ ಕಚೇರಿಯಲ್ಲಿ ಭೇಟಿ ಮಾಡಿದ ಪ್ರಜ್ವಲ್, ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಚುನಾವಣೆ ಪ್ರಚಾರಕ್ಕೆ ಆಗಮಿಸುವಂತೆಯೂ ಕೋರಿದ್ದಾರೆ. ಸಕಲೇಶಪುರ, ಹಾಸನ ಇತರೆಡೆಗಳಲ್ಲಿ ಪ್ರಚಾರದಲ್ಲಿ ಭಾಗವಹಿಸುವ ಭರವಸೆಯನ್ನು ಪರಮೇಶ್ವರ್ ಇದೇ ವೇಳೆ ನೀಡಿದ್ದಾರೆ ಎನ್ನಲಾಗಿದೆ.
ಪ್ರದೇಶ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಪ್ರಜ್ವಲ್ ರೇವಣ್ಣ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ  ಮಾಡಿದರು. ಹಾಸನ ಸೇರಿದಂತೆ ಕೆಲವೆಡೆ ಪ್ರಚಾರಕ್ಕೆ ಆಗಮಿಸುವಂತೆ ಮನವಿ ಮಾಡಿದರು. ಸಿದ್ದರಾಮಯ್ಯ ಹಾಗೂ ಇತರ ನಾಯಕರ ಕಾರ್ಯಕ್ರಮಗಳನ್ನು ಹೊಂದಾಣಿಕೆ ಮಾಡಿಕೊಂಡು ಪ್ರಚಾರಕ್ಕೆ ಆಗಮಿಸುವುದಾಗಿ ದಿನೇಶ್ ಗುಂಡೂರಾವ್ ಪ್ರಜ್ವಲ್ ಗೆ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್ ರೇವಣ್ಣ, ಸಿದ್ದರಾಮಯ್ಯ ಅವರ ಆಶೀರ್ವಾದ ಪಡೆದುಕೊಂಡಿದ್ದೇನೆ. ನಾವು ಸಣ್ಣವರಿದ್ದಾಗಿಂದಲೂ ಸಿದ್ದರಾಮಯ್ಯ ಅವರನ್ನು ನೋಡಿಕೊಂಡು ಬೆಳೆದವರು. ನಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಅವರನ್ನು ಭೇಟಿಯಾಗಿದ್ದೇನೆ ಎಂದರು.
ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಒಟ್ಟಾಗಿ ತಮಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಪ್ರಮುಖ ನಾಯಕರ ಆಶೀರ್ವಾದ ತೆಗೆದುಕೊಂಡರೆ ಗೆಲ್ಲುವುದಕ್ಕೆ ಒಳ್ಳೆಯದು ಎಂದರು. 
ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಆಗಮಿಸಿದ ಬೆಂಬಲಿಗರ ಬಗ್ಗೆ ಪ್ರತಿಕ್ರಿಯಿಸಿದ ಪ್ರಜ್ವಲ್, ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ಎ.ಮಂಜು ಅವರ ಬಗ್ಗೆ ತಮಗಂತೂ ಭಯವಿಲ್ಲ ತಾವು ಎಂದಾದರೂ ಎದುರಾಳಿ ಅಭ್ಯರ್ಥಿ ವಿರುದ್ದ ಮಾತನಾಡಿದ್ದನ್ನು ಕೇಳಿದ್ದೀರಾ..? ತಾವು 
ಟೀಕೆಯ ರಾಜಕಾರಣ ಮಾಡುವುದಿಲ್ಲ ಎಂದರು.
ಎ.ಮಂಜು ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿ ನಾಯಕರು 400, 500 ರೂಪಾಯಿ ಕೊಟ್ಟರೆ ಜನ ಸೇರಿಸೋದು ದೊಡ್ಡದಲ್ಲ. ಹಾಗೇನಾದರೂ ದುಡ್ಡು ಕೊಟ್ಟರೆ ತಾವು ಹಾಸನ ಜಿಲ್ಲೆ ತುಂಬ ಜನ ಸೇರಿಸುತ್ತೇವೆ ಎನ್ನುವ ಮೂಲಕ ಬಿಜೆಪಿ ಅಭ್ಯರ್ಥಿಗೆ ಟಾಂಗ್ ಕೊಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.