ರಾಜಕೀಯಕ್ಕೆ ಹೋಗಲು ತುಂಬಾ ಬುದ್ಧಿ ಬೇಕು, ನಾನು ಅಷ್ಟು ಬುದ್ಧಿವಂತನಲ್ಲ: ಶಿವರಾಜ್ ಕುಮಾರ್
ಕನ್ನಡ ಚಿತ್ರರಂಗದ ದಂತಕಥೆ ಡಾ. ರಾಜ್ಕುಮಾರ್ ಕುಟುಂಬ ಆರಂಭದಿಂದಲೂ ರಾಜಕಾರಣದಿಂದ ...

Published On :
ಮೈಸೂರು: ಕನ್ನಡ ಚಿತ್ರರಂಗದ ದಂತಕಥೆ ಡಾ. ರಾಜ್ಕುಮಾರ್ ಕುಟುಂಬ ಆರಂಭದಿಂದಲೂ ರಾಜಕಾರಣದಿಂದ ಅಂತರ ಕಾಯ್ದುಕೊಂಡೇ ಬಂದಿದೆ. ಈ ಬಾರಿಯ ಲೋಕಸಭೆ ಚುನಾವಣೆ ಪ್ರಚಾರಕ್ಕೆ ನಟರಾದ ಯಶ್, ದರ್ಶನ್ ಸುಮಲತಾ ಪರ ಪ್ರಚಾರಕ್ಕೆ ಇಳಿದಾಗ ನೀವು ಕೂಡ ಅವರ ಪರವಾಗಿ ಪ್ರಚಾರಕ್ಕೆ ಹೋಗುತ್ತೀರಾ ಎಂದು ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಗೆ ಪ್ರಶ್ನೆ ಎದುರಾಯಿತು.
ಈ ಬಗ್ಗೆ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದ ನಟ ಪುನೀತ್ ರಾಜ್ಕುಮಾರ್ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದರು. ಈಗ ಶಿವರಾಜ್ಕುಮಾರ್ ಕೂಡ ಇದೇ ನಿಲುವು ತಾಳಿದ್ದು, ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮಂಡ್ಯಕ್ಕೆ ಸುಮಲತಾ ಪರ ಪ್ರಚಾರಕ್ಕೆ ಹೋಗುತ್ತಿಲ್ಲ. ಸುಮಲತಾರವರು ನನ್ನ ಬೆಂಬಲ ಕೋರಿಲ್ಲ. ಸದ್ಯ ಅವರು ಕರೆದರೂ ಹೋಗುವುದಿಲ್ಲ. ರಾಜಕಾರಣ ನಮಗೆ ಗೊತ್ತಿಲ್ಲ, ಗೊತ್ತಿಲ್ಲದ ವಿಷಯಕ್ಕೆ ನಾನು ಏಕೆ ಹೋಗಲಿ, ಬಡವ ನೀನು ದೇವರು ಮಡಗಿದ ಹಾಗೆ ಇರು ಅನ್ನೋ ಮಾತಿದೆ. ನಾನು ಹಾಗೆಯೇ ಇರುತ್ತೇನೆ ಎಂದರು.
ರಾಜಕೀಯಕ್ಕೆ ಕಾಲಿಡಬೇಕೆಂದರೆ ಸಾಕಷ್ಟು ಬುದ್ಧಿ ಬೇಕು ಎಂದು ಅಭಿಪ್ರಾಯಪಟ್ಟಿರುವ ಶಿವರಾಜ್ ಕುಮಾರ್, ರಾಜಕೀಯಕ್ಕೆ ಹೋಗಲು ತುಂಬಾ ಬುದ್ಧಿಬೇಕು. ಆದರೆ, ನಾನು ಅಷ್ಟು ಬುದ್ಧಿವಂತನಲ್ಲ. ಸ್ವಲ್ಪ ಬುದ್ಧಿ ಬಂದಿದೆ. ಅದನ್ನು ಕಾಪಾಡಿಕೊಳ್ಳುತ್ತೇನೆ. ರಾಜಕೀಯ ದಯವಿಟ್ಟು ಬೇಡ ಸಾರ್ ಎಂದು ಹೇಳಿದರು.
ಸಾಮಾನ್ಯವಾಗಿ ಶಿವಮೊಗ್ಗಕ್ಕೆ ಸಹ ನಾನು ಪ್ರಚಾರಕ್ಕೆ ಹೋಗುವುದಿಲ್ಲ, ಕೆಲ ವರ್ಷದ ಹಿಂದೆ ಶಿವಮೊಗ್ಗದಲ್ಲಿ ಪತ್ನಿ ಗೀತಾ ನಿಂತಿದ್ದಾಗ ಪ್ರಚಾರಕ್ಕೆ ಹೋಗಿದ್ದೆ. ಅಂದು ನನ್ನ ಪತ್ನಿಗಾಗಿ ಪ್ರಚಾರಕ್ಕೆ ಹೋಗಿದ್ದೆ. ಈಗ ಗೀತಾ ಮಧು ಅವರ ಪರವಾಗಿ ಅಲ್ಲಿಗೆ ಹೋಗಬಹುದು. ನಾನು ಬರಬೇಕು ಎಂದು ಅವರು ಕೂಡ ಬಯಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


