ಕುಮಾರಸ್ವಾಮಿ ಬೀದಿ ಬಸವ: ದರ್ಶನ್, ಯಶ್ ಕಳ್ಳೆತ್ತು ಎಂದ ಸಿಎಂಗೆ ಸಿ.ಟಿ.ರವಿ ಟಾಂಗ್
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಬೆಂಬಲಕ್ಕೆ ನಿಂತಿರುವ ನಟರಾದ ದರ್ಶನ್ ಹಾಗೂ ಯಶ್ ಅವರನ್ನು ಕಳ್ಳೆತ್ತುಗಳು ಎಂದು ಕರೆದಿರುವ ಮುಖ್ಯಮಂತ್ರಿ....

Published On :
ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಬೆಂಬಲಕ್ಕೆ ನಿಂತಿರುವ ನಟರಾದ ದರ್ಶನ್ ಹಾಗೂ ಯಶ್ ಅವರನ್ನು ಕಳ್ಳೆತ್ತುಗಳು ಎಂದು ಕರೆದಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು 'ಬೀದಿ ಬಸವ' ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ಇಂದು ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಸುಮಲತಾ ಎದುರು ತಮ್ಮ ಪುತ್ರನ ಸೋಲಿನ ಮುನ್ಸೂಚನೆ ಕುಮಾರಸ್ವಾಮಿ ಅವರಿಗೆ ಸಿಕ್ಕಿದೆ. ಹೀಗಾಗಿ ಹತಾಶರಾಗಿರುವ ಅವರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಂಡ್ಯದಲ್ಲಿ ನೀಜವಾದ ಜೀವನ ರೂಪಿಸಿಕೊಂಡಿದ್ದ ಅಂಬರೀಷ್ ಅವರಿಗೆ ಅನುಕಂಪ ವ್ಯಕ್ತವಾಗುತ್ತಿದ್ದು, ಜೆಡಿಎಸ್ ನಾಯಕರಿಗೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಮಂಡ್ಯದಲ್ಲಿ ನಿಖಿಲ್‍ಗೆ ಜನಬೆಂಬಲವಿಲ್ಲ. ಹೀಗಾಗಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅಕ್ಕಪಕ್ಕದ ಜಿಲ್ಲೆಗಳಿಂದ ಜನರನ್ನು ಕರತರಲಾಗಿದ್ದು, ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿಗಳ ಸಂಚಾರ ಬದಲಾವಣೆ ಮಾಡಲಾಗಿದೆ ಎಂದು ಸಿ.ಟಿ.ರವಿ ಆರೋಪಿಸಿದರು.
ಪುತ್ರನನ್ನು ಸೋಲಿನಿಂದ ಪಾರು ಮಾಡಬೇಕೆಂಬ ಬಗ್ಗೆ ಮಾತ್ರ ಕುಮಾರಸ್ವಾಮಿ ಯೋಚಿಸುತ್ತಿದ್ದಾರೆಯೇ ವಿನ: ರಾಜ್ಯದ ಅಭಿವೃದ್ಧಿಯಾಗಲೀ, ಮಹಾಘಟ್ ಬಂಧನ್ ಬಗ್ಗೆಯಾಗಲಿ ಅಲ್ಲ. ನಿಖಿಲ್‍ನನ್ನು ಕಾಪಾಡುವ ಕೆಲಸಕ್ಕೆ ಕುಮಾರಸ್ವಾಮಿ ಮುಂದಾಗಿರುವುದರಿಂದ ಮಂಡ್ಯದಲ್ಲಿ ಸ್ಥಳಿಯ ಚುನಾವಣಾಧಿಕಾರಿಗಳನ್ನು ವರ್ಗಾವಣೆಗೊಳಿಸಿ ಬೇರೆ ಕಡೆಯಿಂದ ನಿಷ್ಠಾವಂತ ಹಾಗೂ ಸಮರ್ಥ ಚುನಾವಣಾಧಿಕಾರಿಗಳನ್ನು ನೇಮಿಸಬೇಕು. ಕುಮಾರಸ್ವಾಮಿ ಅವರಿಂದ ಆಡಳಿತ ಯಂತ್ರದ ದುರುಪಯೋಗವಾಗುತ್ತಿದೆ. ಸುಮಲತಾ ಮತ್ತು ಅವರ ಬೆಂಬಲಿಗರಿಗೆ ಸೂಕ್ತ ರಕ್ಷಣೆ ಕೊಡಬೇಕು. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಅತಿ ಸೂಕ್ಷ್ಮ ಪ್ರದೇಶವೆಂದು ಚುನಾವಣಾ ಆಯೋಗ ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರಧಾನಿ ಮೋದಿ ಅವರನ್ನು ಚೌಕಿದಾರ್ ಚೋರ್ ಹೈ ಎಂದು ಕರೆಯುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ 'ಚೋರರ ಗುರು' ಆಗಿದ್ದು, ರಾಹುಲ್ ಗಾಂಧಿ ಅವರ ಶಿಷ್ಯ ಆಗಿರುವ ಡಿ.ಕೆ.ಶಿವಕುಮಾರ್ ಅವರಂತಹ ನಾಯಕರ ಆಸ್ತಿ ದುಪ್ಪಟ್ಟಾಗಿದೆ ಎಂದು ಸಿ.ಟಿ.ರವಿ ಲೇವಡಿ ಮಾಡಿದರು.
ಡಿ.ಕೆ.ಶಿವಕುಮಾರ್ ಅವರ ಅಕ್ರಮ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡರೂ ಸಹ ಅವರಿಂದ ರಾಜೀನಾಮೆ ಪಡೆದುಕೊಂಡಿಲ್ಲ. ಡಿ.ಕೆ.ಶಿವಕುಮಾರ್ ಅವರಂತಹ ಚೋರರ ರಕ್ಷಣೆಗೆ ರಾಹುಲ್ ಗಾಂಧಿ ಬೆನ್ನೆಲುಬಾಗಿದ್ದಾರೆ. ಹೀಗಾಗಿ ರಾಹುಲ್ ಚೋರರ ಗುರು ಎಂದು ತಿರುಗೇಟು ನೀಡಿದರು.
ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ದೂರವಾಣಿ ಕದ್ದಾಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಕುಮಾರಸ್ವಾಮಿ ಅವರು ದೂರವಾಣಿ ಕದ್ದಾಲಿಕೆ ಮಾಡುತ್ತಾರೆ ಎಂಬ ಆರೋಪವನ್ನು ನೂರಕ್ಕೆ ನೂರು ಒಪ್ಪಿಕೊಳ್ಳುತ್ತೇನೆ. ಹಿಂದಿನ ಚುನಾವಣೆಗಳಲ್ಲಿಯೂ ಅನುಕಂಪದ ಮುಂದೆ ಹಣ ಚಲಾವಣೆಯಾಗಿಲ್ಲ. ಅಂಬರೀಷ್ ಅವರ ಅನುಕಂಪದ ಮುಂದೆ ಹಣದ ಹೊಳೆ ಕೆಲಸ ಮಾಡುವುದಿಲ್ಲ ಎಂದು ಅವರು ತಿರುಗೇಟು ನೀಡಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸೇರಿದಂತೆ ಬಿಜೆಪಿ ಇತರ ಪ್ರಮುಖರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


