ಕರ್ನಾಟಕ

ಅಂಬಿ ಸಮಾಧಿ ಮೇಲೆ ಮಗನ ರಾಜಕೀಯಕ್ಕೆ ಸಿಎಂ ನಾಂದಿ ಹಾಡುತ್ತಿದ್ದಾರೆ: ಸುಮಲತಾ

ನನ್ನ ಪತಿ ಅಂಬರೀಶ್ ಅವರ ಸಮಾಧಿ ಮೇಲೆ ಮುಖ್ಯಮಂತ್ರಿಗಳು ತಮ್ಮ ಮಗನ ರಾಜಕೀಯಕ್ಕೆ ನಾಂದಿ ಹಾಡಲು ಹೊರಟಿದ್ದಾರೆ ಎಂದು ಪದೇ ಪದೆ....

ಅಂಬಿ ಸಮಾಧಿ ಮೇಲೆ ಮಗನ ರಾಜಕೀಯಕ್ಕೆ ಸಿಎಂ ನಾಂದಿ ಹಾಡುತ್ತಿದ್ದಾರೆ: ಸುಮಲತಾ
ಸುಮಲತಾ
Published On :
ಮಂಡ್ಯ: ನನ್ನ ಪತಿ ಅಂಬರೀಶ್ ಅವರ ಸಮಾಧಿ ಮೇಲೆ ಮುಖ್ಯಮಂತ್ರಿಗಳು ತಮ್ಮ ಮಗನ ರಾಜಕೀಯಕ್ಕೆ ನಾಂದಿ ಹಾಡಲು ಹೊರಟಿದ್ದಾರೆ ಎಂದು ಪದೇ ಪದೆ ಅಂಬಿ ಅಂತ್ಯಕ್ರಿಯೆ ವಿಷಯ ಪ್ರಸ್ತಾಪಿಸುತ್ತಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸುಮಲತಾ ಅಂಬರೀಶ್ ಅವರು ಮಂಗಳವಾರ ತಿರುಗೇಟು ನೀಡಿದ್ದಾರೆ.
ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರು ನಗರದ ಸಿಲ್ವರ್‌ ಜ್ಯುಬಲಿ ಪಾರ್ಕ್‌ನಲ್ಲಿ ನಡೆದ ಸ್ವಾಭಿಮಾನಿ ಸಮಾವೇಶದಲ್ಲಿ ಭಾವನಾತ್ಮಕವಾಗಿ ಭಾಷಣ ಮಾಡಿದರು. 
ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರವನ್ನು ತರಬೇಕೆಂದು ಹೇಳಿದ್ದು ನಾನೇ ಎಂದು ನಿಖಿಲ್‌ ಹೇಳಿಕೊಂಡಿದ್ದರು. ಆದರೆ ಅದು ಬರೀ ಸುಳ್ಳು. ಅದನ್ನು ಹೇಳಿದ್ದು ನನ್ನ ಪುತ್ರ ಅಭಿ ಮತ್ತು ಇತರೆ ನಾಯಕರು ಎಂದು ಸುಮಲತಾ ಬಹಿರಂಗಪಡಿಸಿದರು.
ಇದನ್ನು ನಾನು ಹೇಳಬಾರದಿತ್ತು. ಆದರೆ ಈ ರೀತಿ ಹೇಳುವಂತೆ ಒತ್ತಡ ಮಾಡಿದ್ದೇ ಮುಖ್ಯಮಂತ್ರಿಗಳು ಎಂದು ಸುಮಲತಾ ತಿಳಿಸಿದರು. 
ನನ್ನ ಪತಿ ನಿಧನರಾದ ಸಂದರ್ಭದಲ್ಲಿ ಅತ್ಯಂತ ದುಃಖವಾಗಿತ್ತು. ಇದನ್ನು ಯಾರಿಗೂ ಹೇಳಿಕೊಳ್ಳಲು ಆಗುವುದಿಲ್ಲ. ನಾನು ಆ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದು ಡ್ರಾಮಾ ಅಂತೆ. ಆದರೆ ಇವರು ಚುನಾವಣೆ ಸಂದರ್ಭದಲ್ಲಿ ಇಡೀ ಕುಟುಂಬವೇ ಮೈಕ್‌ ಮುಂದೆ ಬಂದು ಕಣ್ಣೀರು ಹಾಕುವುದು ನಾಟಕವಲ್ಲವಾ? ಎಂದು ಸುಮಲತಾ ಪ್ರಶ್ನಿಸಿದರು. 
ನಾಲ್ಕುವಾರದ ಹಿಂದೆ ಇದೇ ವೇದಿಕೆಯಲ್ಲಿ ನಿಂತು ನಿಮ್ಮನ್ನು ಮಾತನಾಡಿಸಿದ್ದೆ. ಈ ನಾಲ್ಕುವಾರಗಳಲ್ಲಿ ನಾನು ನೋಡಿದ್ದನ್ನು ಇವತ್ತು ನಿಮ್ಮ ಜೊತೆ ಹಂಚಿಕೊಳ್ತೇನೆ. ಈ ಸಮಯದಲ್ಲಿ ನಾನು ಮಂಡ್ಯದ ಜನರಲ್ಲಿ ದೇವರನ್ನು ನೋಡಿದೆ. ನನ್ನ ಅಂಬರೀಶ್ ಎಲ್ಲೂ ಹೋಗಿಲ್ಲ ನೀವೆ ಉಳಿಸಿಕೊಂಡಿದ್ದೀರಾ ಎಂದು ಅನ್ನಿಸುತ್ತಿದೆ ಎಂದರು.
ಈ ನಾಲ್ಕು ವಾರಗಳಲ್ಲಿ ರಾಜಕಾರಣಿಗಳಲ್ಲಿ ರಾಕ್ಷಸತ್ವವನ್ನು ನೋಡಿದೆ. ನಿಜವಾಗಲೂ ಬೇಜಾರಾಗುತ್ತೆ. ಒಂದೇ ದಿನದಲ್ಲಿ ತೆಗೆದುಕೊಂಡಿರುವ ತೀರ್ಮಾನ ಇದಲ್ಲ. ಬಹಳಷ್ಟು ಯೋಚನೆ ಮಾಡಿ ಈ ನಿರ್ಧಾರಕ್ಕೆ ಬಂದೆ. ಒಂದಷ್ಟು ಸ್ನೇಹ ಸಂಬಂಧಗಳು ಹಾಳಾಗಬಹುದು ಎಂದು ಗೊತ್ತಿತ್ತು. ನಾನು ಮೊದಲನೇ ಹೆಜ್ಜೆ ಹಾಕಿದಾಗ ಅದು ಒಂಟಿ ಹೋರಾಟ, ಆದರೆ ಇವತ್ತು ನಾನು ಒಂಟಿಯಲ್ಲ. ಇವತ್ತು ನನ್ನ ಜೊತೆ ನಿಂತಿರುವ ಕಾಂಗ್ರೆಸ್‌ ಕಾರ್ಯಕರ್ತರಿಗೆ, ರೈತರ ಸಂಘಟಕ್ಕೆ, ಬಿಜೆಪಿ ಕಾರ್ಯಕರ್ತರಿಗೆ ನಾನು ಆಭಾರಿಯಾಗಿದ್ದೇನೆ. ಪಕ್ಷದಿಂದ ಉಚ್ಛಾಟನೆಗೊಂಡರೂ ಸ್ವಾಭಿಮಾನಕ್ಕಾಗಿ ನನ್ನ ಜೊತೆ ಅವರೆಲ್ಲಾ ನಿಂತಿದ್ದಾರೆ. ಅವರ ಜೊತೆ ನಾನು ಯಾವತ್ತೂ ಇರ್ತೇನೆ ಎಂದರು.
ಪ್ರಚಾರ ಸಂದರ್ಭದಲ್ಲಿ ರೈತರ ಸಂಕಷ್ಟವನ್ನು ನೋಡಿದೆ. ಸುಳ್ಳು ಭರವಸೆ ಕೊಟ್ಟು ಓಟು ಪಡೆದುಕೊಂಡು ಹೋದವರು ಜನರ ಕಷ್ಟಗಳಿಗೆ ಸ್ಪಂದಿಸಿಲ್ಲ. ಅಧ್ವಾನಗೊಂಡಿರುವ ರಸ್ತೆಗಳನ್ನು ನೋಡಿದೆ. ಬತ್ತಿ ಹೋಗಿರುವ ಕೆರೆಗಳನ್ನು ನೋಡಿದೆ. ದ್ವೇಷದ ರಾಜಕಾರಣ ಇಲ್ಲಿ ನಡೆಯುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ಲೀಡ್‌ ಬಂದಿದೆ ಎಂಬ ಕಾರಣಕ್ಕೆ ಆ ಹಳ್ಳಿಗಳಲ್ಲಿ ಸರ್ಕಾರಿ ಕೆಲಸಗಳೇ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಈ ದೇಶದಲ್ಲಿ ಚುನಾವಣೆಗೆ ಸ್ಪರ್ಧಿಸುವುದೇ ತಪ್ಪಾ? ಕಾನೂನುಬದ್ಧವಾಗಿ ನನಗಿರುವ ಹಕ್ಕು ಇದು ನಾನು ಮಂಡ್ಯದ ಸೊಸೆ, ಹಾಗಾಗಿ ನಾನು ಮಂಡ್ಯದಿಂದಲೇ ಸ್ಪರ್ಧಿಸುತ್ತಿದ್ದೇನೆ. ನಾನು ಈ ಮಣ್ಣಿನ ಸೊಸೆ ಅದಕ್ಕೆ ನಿಮ್ಮ ಪ್ರಮಾಣಪತ್ರ ಅಗತ್ಯವಿಲ್ಲ, ಜನ ನಮ್ಮನ್ನು ಸ್ವೀಕರಿಸಿದ್ದಾರೆ ಅಷ್ಟು ಸಾಕು ಎಂದರು.
ನಿಮಗೆ ಮಹಿಳೆಯರ ಬಗ್ಗೆ ಗೌರವವಿಲ್ಲ, ನಿಮಗೆ ದೇಶದ ಗಡಿ ಕಾಯುವ ಯೋಧರ ಬಗ್ಗೆ ಗೌರವವಿಲ್ಲ. ಎದುರಾಳಿಗೆ ಗೌರವವನ್ನು ಕೊಡುವುದನ್ನು ನೀವು ಕಲಿಯಬೇಕು. ದರ್ಶನ್‌ ಆಗ್ಲಿ ಯಶ್‌ ಆಗ್ಲಿ ಇಲ್ಲಿ ನಟರಾಗಿ ಪ್ರಚಾರಕ್ಕೆ ಬಂದಿಲ್ಲ ನನ್ನ ಮಕ್ಕಳಾಗಿ ನನ್ನ ಜೊತೆ ಇದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.