ಛತ್ರಿ ಬಿಟ್ಟು ಬಿಸಿಲಿಗೆ ಬಂದಿದ್ದಾರೆ, ರೈತರ ಕಷ್ಟ ಸ್ವಲ್ಪ ಅರ್ಥವಾಗಲಿ-ದರ್ಶನ್, ಯಶ್ ಗೆ ಸಿಎಂ ಟಾಂಗ್
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಸ್ಪರ್ಧಿಯಾಗಿರುವ ಸ್ವತಂತ್ರ ...

Published On :
ಹಾಸನ: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಸ್ಪರ್ಧಿಯಾಗಿರುವ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಪ್ರಚಾರ ನಡೆಸುತ್ತಿರುವ ನಟರಾದ ದರ್ಶನ್ ಮತ್ತು ಯಶ್ ವಿರುದ್ಧ ಸಿಎಂ ಕುಮಾರಸ್ವಾಮಿ ಮತ್ತೆ ಹರಿಹಾಯ್ದಿದ್ದಾರೆ.
ಇಂದು ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇಷ್ಟು ದಿನ ಛತ್ರಿ ಅಡಿಯಲ್ಲಿ ನೆರಳಲ್ಲಿ ನಿಂತು ಸಿನಿಮಾ ಶೂಟಿಂಗ್ ನಲ್ಲಿ ಇರುತ್ತಿದ್ದರು. ಈಗ ಛತ್ರಿ ಬಿಟ್ಟು ಬಿಸಿಲಿಗೆ ಬಂದಿದ್ದಾರೆ, ಬಿಸಿಲಲ್ಲಿ ಸ್ವಲ್ಪ ಓಡಾಡಿ ಹಳ್ಳಿ ಕಡೆ ರೈತರ ಕಷ್ಟ ಏನೆಂದು ತಿಳಿದುಕೊಳ್ಳಲಿ, ಅರ್ಥವಾಗುತ್ತದೆ ಎಂದು ಯಶ್ ಮತ್ತು ದರ್ಶನ್ ಬಗ್ಗೆ ವ್ಯಂಗ್ಯವಾಡಿದರು.
ಇದೇ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಮೀಡಿಯಾಗಳ ವಿರುದ್ಧವೂ ಸಿಎಂ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಮಂಡ್ಯ ಬಿಟ್ಟರೆ ಬೇರೆ ಯಾವುದೇ ಕ್ಷೇತ್ರವಿಲ್ಲದ ರೀತಿಯಲ್ಲಿ ದಿನಪೂರ್ತಿ ಅಲ್ಲಿಯ ಸುದ್ದಿಯನ್ನೇ ತೋರಿಸ್ತಾರೆ. ಇಲ್ಲಿ ವರದಿಗಾರರ ಬಗ್ಗೆ ಅಥವಾ ಪತ್ರಿಕೆಗಳ ಬಗ್ಗೆ ನಾನು ದೂರುತ್ತಿಲ್ಲ. ವಾಹಿನಿಗಳ ಮಾಲೀಕರ ಒತ್ತಡದಿಂದ ಹೀಗೆ ಆಗುತ್ತಿದೆ ಎಂದರು.
ಎಲೆಕ್ಟ್ರಾನಿಕ್ ಮೀಡಿಯಾಗಳ ಮಾಲೀಕರು ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಏನೇ ಅಪಪ್ರಚಾರ ಮಾಡಿದರೂ, ಏನೇ ವರದಿ ಮಾಡಿದರೂ ಕೂಡ ಮಂಡ್ಯ ಜಿಲ್ಲೆಯ ಜನತೆಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ, ನಾನು ಮಂಡ್ಯ ಜಿಲ್ಲೆಯ ಜನತೆ ಜೊತೆಗೆ ಹೊಂದಿರುವ ಸಂಬಂಧವನ್ನು ಬೇರ್ಪಡಿಸಲು ಸಾಧ್ಯವಿಲ್ಲ, ನನಗೆ ಯಾವುದೇ ಆತಂಕ, ಭಯವಿಲ್ಲ ಎಂದರು.
ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ -ಜೆಡಿಎಸ್ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯಗಳು ಇವೆ. ಅದನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. 22ಕ್ಕಿಂತ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


