ಮೈತ್ರಿಯಿಂದ ಮಾತ್ರ ಎನ್ ಡಿಎಗೆ ಮುನ್ನೂರು ಸಾಧ್ಯ: ಐಎಎನ್ಎಸ್- ಸಿವೋಟರ್ ಸಮೀಕ್ಷೆ
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಲಭಿಸಲಿದೆ ಎಂಬ ಲೆಕ್ಕಾಚಾರ ಶುರುವಾಗಿದ್ದು,...

Published On :
ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಲಭಿಸಲಿದೆ ಎಂಬ ಲೆಕ್ಕಾಚಾರ ಶುರುವಾಗಿದ್ದು, ಅದರಂತೆ ಎನ್ ಡಿಎ ಮೈತ್ರಿಕೂಟ 300ರ ಗಡಿಯತ್ತ ದಾಪುಗಾಲಿರಿಸುವ ಸಾಧ್ಯತೆ ಇದೆ ಎಂದು ಐಎಎನ್ಎಸ್-ಸಿವೋಟರ್ ಸಮೀಕ್ಷೆ ಹೇಳಿದೆ.
ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಶೇ.42ರಷ್ಚು ಮತಗಳನ್ನು ಪಡೆದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಶೇ.30.4ರಷ್ಟು ಮತಗಳನ್ನು ಪಡೆಯಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಐಎಎನ್ಎಸ್ ಸುದ್ದಿಸಂಸ್ಥೆ ಸಹಭಾಗಿತ್ವದಲ್ಲಿ ಸಿವೋಟರ್ ಸಂಸ್ಥೆ ಈ ನೇಷನ್ ಮಾರ್ಚ್ 2019 ವೇವ್ ಟು ಒಪೀನಿಯನ್ ಪೋಲ್ ಎಂಬ ಶೀರ್ಷಿಕೆಯಡಿಯಲ್ಲಿ ಸಮೀಕ್ಷೆ ನಡೆಸಿದ್ದು, ಇದಕ್ಕಾಗಿ ಈ ವಾರದ 10,280 ಮಾದರಿಗಳೂ ಸೇರಿದಂತೆ ದೇಶಾದ್ಯಂತ ಒಟ್ಟು 70,000ಕ್ಕೂ ಅಧಿಕ ಮಂದಿಯಿಂದ ಪ್ರತಿಕ್ರಿಯೆ ಪಡೆದಿದೆ.ಕಳೆದ ಜನವರಿ 1 ರಿಂದ ಈ ವರೆಗೂ ಸುಮಾರು 543 ಕ್ಷೇತ್ರಗಳಲ್ಲಿ ಈ ಸರ್ವೆ ನಡೆಸಲಾಗಿದೆ.
ಈ ಸರ್ವೆಯಲ್ಲಿನ ಅಂಶಗಳಂತೆ ಮೈತ್ರಿಕೂಟವನ್ನು ಹೊರತು ಪಡಿಸಿದರೆ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯಲು ಸಾಧ್ಯವಿಲ್ಲ. ಆದರೆ ಮಿತ್ರಪಕ್ಷಗಳ ಬೆಂಬಲದ ಮೂಲಕ 300ಸ್ಥಾನಗಳನ್ನು ಗಳಿಸಬಹುದು ಎಂದು ಹೇಳಿದೆ. ಈ ಹಿಂದೆ ಮಹಾಘಟ್ ಬಂಧನ್ ರಚಿಸಿಕೊಂಡಿದ್ದ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳಲ್ಲಿನ ಆಂತರಿಕ ಭಿನ್ನಮತ ಎನ್ ಡಿಎ ಮಿತ್ರ ಕೂಟಕ್ಕೆ ವರದಾನವಾಗಿ ಪರಿಣಮಿಸಿದ್ದು, ಪ್ರಮುಖವಾಗಿ ದೇಶದಲ್ಲಿ ಅತೀ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿನ ಕಾಂಗ್ರೆಸ್ ಮತ್ತು ಬಿಎಸ್ ಪಿ, ಎಸ್ ಪಿ, ಆರ್ ಎಲ್ ಡಿ ಮೈತ್ರಿಕೂಟ ನಡುವಿನ ಸ್ಪರ್ಧೆ ಬಿಜೆಪಿ ಮೈತ್ರಿಕೂಟಕ್ಕೆ ಲಾಭವಾಗಲಿದೆ. ಕಾಂಗ್ರೆಸ್ ಮತ್ತು ಮಾಯಾವತಿ ಮೈತ್ರಿಕೂಟದ ಸ್ಪರ್ಧೆಯಿಂದಾಗಿ ಮಹಾಘಟ್ ಬಂಧನ್ ಮತಗಳು ಒಡೆದು ಬಿಜೆಪಿಗೆ ಲಾಭವಾಗಲಿದೆ. ಉತ್ತರ ಪ್ರದೇಶದಲ್ಲಿ ಎನ್ ಡಿಎ ಮೈತ್ರಿಕೂಟ ಶೇ. 35.4 ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ.
ಇನ್ನು ಬಿಹಾರದಲ್ಲಿ ಜೆಡಿಯು ಜೊತೆಗಿನ ಮೈತ್ರಿಕೂಡ ಬಿಜೆಪಿ ಸಕಾರಾತ್ಮಕವಾಗಿ ಪರಿಣಮಿಸಲಿದ್ದು, ಆಡಳಿತಾ ರೂಢ ಜೆಡಿಯು ಬಿಹಾರದಲ್ಲಿ ಬಿಜೆಪಿಗೆ ಬೆಂಬಲ ನೀಡಿದೆ. ಹೀಗಾಗಿ ಇಲ್ಲಿ ಎನ್ ಡಿಎ ಮೈತ್ರಿಕೂಟ ಶೇ.52.6ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಅಂತೆಯೇ ರಾಜಸ್ಥಾನದಲ್ಲಿ ಶೇ.50.7, ಬಿಜೆಪಿ ಪ್ರಾಬಲ್ಯವಿರುವ ಗುಜರಾತ್ ನಲ್ಲಿ ಶೇ.58.2 ರಷ್ಚು ಮತಗಳು ಲಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಂತೆಯೇ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡ ಕಾರಣ ಅಲ್ಲಿಯೂ ಬಿಜೆಪಿಗೆ ಸಕಾರಾತ್ಮಕ ಲಾಭಗಳಿದ್ದು, ಇಲ್ಲಿ ಎನ್ ಡಿಎ ಮೈತ್ರಿಕೂಟ ಶೇ.48.1ರಷ್ಟು ಮತಗಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಬಿಜೆಪಿ ಸರ್ಕಾರ ವಿರುವ ಹರ್ಯಾಣದಲ್ಲಿ ಎನ್ ಡಿಎ ಮಿತ್ರಕೂಟ ಶೇ.42.6 ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಆದರೆ ಮೈತ್ರಿ ಹೊರತಾಗಿಯೂ ಯುಪಿಎ ಮತ್ತು ಎನ್ ಡಿಎ ಮೈತ್ರಿಕೂಟಗಳಿಗೆ ಅಷ್ಟೇನೂ ಲಾಭವಾಗದ ಕೆಲ ರಾಜ್ಯಗಳೂ ಕೂಡ ಇವೆ. ತಮಿಳುನಾಡು, ಕೇರಳ ಈ ಪಟ್ಟಿಯಲ್ಲಿ ಇದ್ದು, ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಿತ್ರಕೂಟಗಳ ನಡುವೆ ತೀವ್ರ ಪೈಪೋಟಿ ಎದುರಾಗಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಆಂಧ್ರ ಪ್ರದೇಶದಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷ 10 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಸಾಧ್ಯತೆ ಇದ್ದು, ಮಿಜೋರಾಂ ನಲ್ಲಿ ಮಿಜೋ ನ್ಯಾಷನಲ್ ಫ್ರೆಂಟ್ 1, ಬಿಜು ಜನತಾ ದಳ 10, ತೆಲಂಗಾಣದಲ್ಲಿ ಟಿಆರ್ ಎಸ್ 16 ಸ್ಥಾನ ಗಳಿಸುವ ಸಾಧ್ಯತೆ ಇದೆ. ಅಂತೆಯೇ ಬಿಹಾರದಲ್ಲಿ ಜೆಡಿಯು ಎನ್ ಡಿಎ ಜೆಡಿಯು ಬೆಂಬಲದೊಂದಿಗೆ 36 ಕ್ಷೇತ್ರಗಳಲ್ಲಿ ಜಯಗಳಿಸುವ ಸಾಧ್ಯತೆ ಇದ್ದು, ತಮಿಳುನಾಡಿನಲ್ಲಿ ಎಐಎಡಿಎಂಕೆ 7, ಉತ್ತರ ಪ್ರದೇಶದಲ್ಲಿ ಅಪ್ನಾ ದಳ್ 1 ಸ್ಥಾನ ಪಡೆಯುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ ಶಿವಸೇನೆ 14, ಅಸ್ಸಾಂನಲ್ಲಿ ಬೋಡೋಲ್ಯಾಂಡ್ ಫ್ರಂಟ್ 1, ಪಂಜಾಬ್ ನಲ್ಲಿ ಶಿರೋಮಣಿ ಆಕಾಲಿದಳ 1 ಸ್ಥಾನ ಗಳಿಸುವ ಸಾಧ್ಯತೆ ಇದೆ.
ಈ ಹಿಂದೆ ಎನ್ ಡಿಎ ಮೈತ್ರಿಕೂಟ 241 ಸ್ಥಾನಗಳಿಸುವ ಸಾಧ್ಯತೆ ಕುರಿತು ಕೆಲ ಸಮೀಕ್ಷೆಗಳು ಹೇಳಿದ್ದವು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಇದೀಗ ಎನ್ ಡಿಎ ಮೈತ್ರಿಕೂಟ 272ಕ್ಕೂ ಅಧಿಕ ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhibjpಬಿಜೆಪಿNDAಎನ್ ಡಿಎಲೋಕಸಭಾ ಚುನಾವಣೆ 2019Loksabha Election 2019IANS-CVoter 2019 surveyಐಎಎನ್ಎಸ್-ಸಿವೋಟರ್ 2019 ಸಮೀಕ್ಷೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


