ಬಾವಿಯ ರಹಸ್ಯ ಬಿಡಿಸಿದ ಸ್ಟ್ರ್ಯಾಬೋ
ಕ್ರಿ.ಪೂ.64ರಲ್ಲಿ ಜನಿಸಿದ ಸ್ಟ್ರ್ಯಾಬೋ ಟರ್ಕಿಯ ಪಾಂಟೆಸ್ ಎಂಬ ಸ್ಥಳಕ್ಕೆ ಸೇರಿದವನು. ಗ್ರೀಕ್ ಮತ್ತು ರೋಮನ್‌ನಲ್ಲಿ ಅಧ್ಯಯನ ನಡೆಸಿ ಖ್ಯಾತಿ ಗಳಿಸಿದ್ದ. ಅಗಸ್ಟಸ್ ಚಕ್ರವರ್ತಿ, ಪಾಟೆಸ್ ರಾಣಿ ಮುಂತಾದ ಖ್ಯಾತನಾಮರೊಡನೆ ನಿಕಟ ಸಂಪರ್ಕವನ್ನಿಟ್ಟುಕೊಂಡಿದ್ದ. ಭೂಗೋಳ ಶಾಸ್ತ್ರದ ಬಗ್ಗೆ ಮೊದಲ ಬಾರಿಗೆ ಒಂದು ಗ್ರಂಥವನ್ನು ರಚಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ಹೀಗಾಗಿ ಸ್ಟ್ರ್ಯಾಬೋನನ್ನು ಭೂಗೋಳ ಶಾಸ್ತ್ರದ ಆದ್ಯ ಪ್ರವರ್ತಕ ಎಂದೂ ಕರೆಯುತ್ತಾರೆ. ಇತಿಹಾಸಕಾರನಾಗಿ ಮತ್ತು ತತ್ವಜ್ಞಾನಿಯಾಗಿಯೂ ಸಹ ಹೆಸರು ಮಾಡಿದ್ದ ಸ್ಟ್ರ್ಯಾಬೋ ಅನೇಕ ಕ್ಲಿಷ್ಟಕರ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಬಿಡಿಸುವುದರಲ್ಲಿ ಪರಿಣಿತನಾಗಿದ್ದ.
ರೋಮನ್ ಚಕ್ರಾಧಿಪತ್ಯದ ಈಜಿಪ್ಪ್ ಪ್ರಾಂತ್ಯದ ಸೈನ್ಯಾಧಿಕಾರಿ ಏಲಿಯಸ್ ಗ್ಯಾಲನ್ ಒಮ್ಮೆ ಚಕ್ರವರ್ತಿ ಅಗಸ್ಟಸ್‌ನ ಅಣತಿಯಂತೆ ಸೈನ್ಯದಳವೊಂದರ ಖಾಯಂ ಶಿಬಿರಕ್ಕೆ ಒಂದು ನಿವೇಶನವನ್ನು ಹುಡುಕುವಾಗ ನೈಲ್ ನದಿಯ ಸಮೀಪವೇ ಒಂದು ಪ್ರದೇಶವನ್ನು ಆಯ್ಕೆ ಮಾಡಿಕೊಂಡ. ಅದು ಎಲ್ಲ ರೀತಿಯಿಂದಲೂ ಅನುಕೂಲಕರವಾಗಿತ್ತು. ಆದರೂ ಸಹ ಅಲ್ಲಿಗೆ ಸ್ಟ್ರ್ಯಾಬೋನ್ನು ಕರೆಸಿ ಕೆಲವು ಮಹತ್ವದ ಚರ್ಚೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದ. ಅಲ್ಲಿಯೇ ಎಲಿಫೆಂಟೈನ್ ದ್ಪೀಪದಲ್ಲಿದ್ದ ಒಂದು ನಿಗೂಢ ಬಾವಿಯ ಬಗ್ಗೆ ಗ್ಯಾಲನ್ ತಲೆಕೆಡಿಕೊಂಡಿದ್ದ. ಅದೊಂದು ಪುರಾತನ ಕಾಲದ ಬಾವಿ. ಬಾವಿಯ ಒಳಗೆ ದಿಟ್ಟಿಸಿ ನೋಡಿದಾಗ ಅದರ ಒಳಮೈಯಲ್ಲಿ ಅಲ್ಲಲ್ಲಿ ಗೆರೆಯ ಗುರುತುಗಳಿದ್ದುದು ಅವನ ಕುತೂಹಲಕ್ಕೆ ಕಾರಣವಾಗಿತ್ತು. ಅದರ ಪ್ರಾಮುಖ್ಯ ತಿಳಿಯಲು ಅವನು ಸ್ಟ್ರ್ಯಾಬೋನನ್ನು ಆ ಬಾವಿಯ ಸಮೀಪ ಕರೆದೊಯ್ದ. ಆ ಗೆರೆಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ಸ್ಟ್ರ್ಯಾಬೋನಿಗೆ ಅವುಗಳ ಮಹತ್ವ ತಿಳಿಯಿತು. ಅವನ ಪ್ರಕಾರ ಆ ಗೆರೆಗಳು ಪ್ರಾಚೀನರಿಗೆ ನೈಲ್ ನದಿಯ ಗರಿಷ್ಠ ಮತ್ತು ಕನಿಷ್ಠ ಮಟ್ಟಗಳನ್ನು ಸೂಚಿಸುವ ಸಾಧನವಾಗಿ ಬಳಕೆಯಾಗುತ್ತಿದ್ದವು. ಆ ಬಾವಿಗೆ ನೆಲದಾಳದಲ್ಲಿ ನೈಲ್ ನದಿಯೊಡನೆ ಸಂಪರ್ಕವಿರುವುದನ್ನು ಪತ್ತೆ ಹಚ್ಚಿದ. ಆದ್ದರಿಂದ ಎರಡರಲ್ಲೂ ನೀರಿನ ಮಟ್ಟ ಏಕರೀತಿಯಲ್ಲಿ ಏರಿಳಿತವಾಗುವುದನ್ನೂ, ಅದನ್ನವಲಂಬಿಸಿ, ಆ ದ್ವೀಪದ ಜನ ಭೂಮಿಗೆ ನೀರುಣಿಸಿ ಬೆಳೆ ಬೆಳೆಯತ್ತಿದ್ದುದನ್ನೂ ಕಂಡುಹಿಡಿದ.
ಇದರಿಂದ ಅವನ ಕೀರ್ತಿ ಹೆಚ್ಚಿತು. ರೋಮನ್ ಸಾಮ್ರಾಜ್ಯದ ಒಳಿತಿಗೆ ಅವನ ಕೊಡುಗೆ ಅಪಾರವಾಗಿತ್ತು. ಅವನ ಭೂಗೋಳ ಶಾಸ್ತ್ರದಲ್ಲಿ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಬ್ಯಾಬಿಲೋನಿಯಾದ ತೂಗು ಉದ್ಯಾನದ ಬಗ್ಗೆಯೂ ಪ್ರಸ್ತಾಪವಿದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

