ಭಿಕ್ಷೆ ಬೇಡಿ ವಿದ್ಯಾದಾನ
ಬಾಗಲಕೋಟೆ ಮತ್ತು ಬಾದಾಮಿ ನಡುವೆ ಇರುವ ಒಂದು ಹಳ್ಳಿ ಹಂಸನೂರು. ಇದೊಂದು ಹಿಂದುಳಿದ ಗ್ರಾಮವಾಗಿದ್ದು ಇಲ್ಲಿರುವ ಬಹುತೇಕ ಮನೆಗಳಲ್ಲಿ ರಂಗಕಲಾವಿದರೇ ಇದ್ದಾರೆ. ಅದರಲ್ಲೂ ನಾಟಕಗಳಲ್ಲಿ ಅಭಿನಯಿಸುವ ಸ್ತ್ರೀ ಕಲಾವಿದರು ಇಲ್ಲಿ ಜಾಸ್ತಿ. ಅವರು ಒಂದು ಸಂಘವನ್ನು ರಚಿಸಿಕೊಂಡು ಕಲೆಗೆ ಒಂದು ನೆಲೆ ಕಲ್ಪಿಸಿಕೊಡುವಲ್ಲಿ ಶ್ರಮಿಸುತ್ತಿದ್ದಾರೆ. ಹೀಗೆ ನಾಟಕಗಳಲ್ಲಿ ಪಾತ್ರವಹಿಸುವವರು ತಮ್ಮ ಮನೆ ಮತ್ತು ಮಕ್ಕಳನ್ನು ಬಿಟ್ಟು ಹೋದರೆ ಅವರನ್ನು ನೊಡಿಕೊಳ್ಳುವುದು, ಶಾಲೆಗೆ ಕಳುಹಿಸುವುದು ಗಂಡಸರ ಕರ್ತವ್ಯ. ಆದರೆ ಬಡತನದಲ್ಲಿಯೇ ಬೆಂದು ಹೋಗುವ ಮಕ್ಕಳಿಗೆ ಶಿಕ್ಷಣ ಒಂದು ಸವಾಲಿನ ವಿಷಯ. ಹೀಗಾಗಿ ಇಲ್ಲಿನ ಒಂದು ಬಡ ವೀರಶೈವ ಮಠ ಇಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಲು ಒಂದು ಕನ್ನಡ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿತು. ಮಠವೆಂದರೆ ಶ್ರೀಮಂತ ಮಠವಲ್ಲ, ಇಲ್ಲಿನ ಮಠಾಧೀಶರಾಗಿದ್ದ ಬಸವರಾಜೇಂದ್ರ ಸ್ವಾಮಿಗಳನ್ನು ನಾನು ಈಗ್ಗೆ 20 ವರ್ಷದ ಹಿಂದೆ ನೋಡಿದಾಗಲೇ ಅವರಿಗೆ ತುಂಬಾ ವಯಸ್ಸಾಗಿತ್ತು. ಹಂಸನೂರಿನ ಬಗ್ಗೆ ಲೇಖನವೊಂದನ್ನು ಸಿದ್ಧಪಡಿಸಲು ಹೋಗಿದ್ದಾಗ ಸ್ವಾಮೀಜಿಯ ಪರಿಚಯವಾಯಿತು. ತಾವು ಬರೆದ ಪುಟ್ಟ ಹೊತ್ತಿಗೆಗಳನ್ನು ಅವರು ನೀಡಿದರು. ಅವರ ವಚನಗಳು ನೀತಿಬೋಧಕವೂ, ರಂಜನೀಯವೂ ಆಗಿದ್ದವು. ಸ್ವಾಮೀಜಿಯೊಡನೆ ಮಾತಾಡಿ ಹೊರಡಲು ಸಿದ್ಧವಾದಾಗ ಸ್ವಾಮೀಜಿ ಅಲ್ಲಿಯೇ ಪ್ರಸಾದ ಸ್ವೀಕರಿಸಿ ಹೋಗಬೇಕೆಂದು ವಿನಂತಿಸಿದರು. ಅವರ ಪ್ರೀತಿಗೆ ಕಟ್ಟುಬಿದ್ದು ಊಟಕ್ಕೆ ಕುಳಿತಾಗ ನಮ್ಮ ತಟ್ಟೆಯಲ್ಲಿ ನಾಲ್ಕಾರು ರೊಟ್ಟಿಯ ತುಣುಕುಗಳು ಬಿದ್ದವು. ಅಚ್ಚರಿಯೆಂದರೆ ಆ ರೊಟ್ಟಿಯ ಚೂರುಗಳು ಒಂದೇ ರೀತಿಯ ಹಿಟ್ಟಿನಿಂದ ಮಾಡದವುಗಳಾಗಿರಲಿಲ್ಲಲ್ಲ. ಒಂದು ಸಜ್ಜೆಯದ್ದಾದರೆ ಮತ್ತೊಂದು ಜೋಳದ್ದು, ಮಗದೊಂದು ರಾಗಿಯದ್ದು. ಏಕೆ ಹೀಗೆ ಎಂದು ಕೇಳಿದಾಗ ರೊಟ್ಟಿ ಬಡಿಸಿದವ ಹೇಳಿದ, "ನಾವು ಮೂವರೂ ಪ್ರತಿದಿನ ಸಮೀಪದ ಹಳ್ಳಿಗಳಿಗೆ ಹೋಗಿ ಮನೆಮನೆಯಲ್ಲಿ ಭಿಕ್ಷೆ ಎತ್ತಿ, ರೊಟ್ಟಿ ಚೂರುಗಳನ್ನು ಸಂಗ್ರಹಿಸುತ್ತೇವೆ. ಅವನ್ನೇ ಶಾಲಾ ಮಕ್ಕಳಿಗೆ ಬಡಿಸಲಾಗುತ್ತದೆ. ಹೀಗಾಗಿ ಒಂದೊಂದೂ ಒಂದೊಂದು ರೀತಿಯವು" ಎಂದಾಗ ಊಟ ಮಾಡುತ್ತಿದ್ದ ನಮಗೆ ಕಣ್ಣಾಲಿಗಳು ತುಂಬಿಬಂದವು. ಊಟ ಮಾಡಿ ಸ್ವಾಮೀಜಿಯವರಿಗೆ ವಿದಾಯ ಹೇಳಲು ಬಂದಾಗ ಅವರು ತಮ್ಮ ಹರಿದ ಪಂಚೆಯನ್ನು ಹೊಲಿದುಕೊಳ್ಳುತ್ತಿದ್ದರು. ಅದನ್ನು ನೋಡಿ ಮನಸ್ಸಿಗೆ ಪಿಚ್ಚೆನಿಸಿತು. ಜೇಬಿನಿಂದ ನೂರರ ಎರಡು ನೋಟುಗಳನ್ನು ತೆಗೆದು ಸ್ವಾಮೀಜಿಯವರ ಬಳಿ ಇಡಲು ಹೋದರೆ, ಸ್ವಾಮೀಜಿ ಅದಕ್ಕೆ ಅವಕಾಶ ಕೊಡಲಿಲ್ಲ. ತಮ್ಮ ಬಡತನ ನೋಡಿ ಅನುಕಂಪದಿಂದ ನೀವು ನೀಡುವ ಹಣವನ್ನು ಸ್ವೀಕರಿಸಲಾರೆ. ದಯವಿಟ್ಟು ತೆಗೆದುಕೊಳ್ಳಿ. ಇಂದು ನೀವು ನಮ್ಮ ಮಠದ ಅತಿಥಿಗಳು ಎಂದರು. ಬಡತನದಲ್ಲೂ ಸ್ವಾಭಿಮಾನ ತೋರಿದ ಸ್ವಾಮೀಜಿಯವರ ಬಗ್ಗೆ ಹೆಮ್ಮೆಯೆನಿಸಿತು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

