ಸಂಪಾದಕೀಯ

ಜೀವಕ್ಕಿಂತಲೂ ಜಾತಿ ದೊಡ್ಡದೇ?

Published On :

ಇದೀಗ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಆಚರಿಸಲು ಸಿದ್ಧತೆ ನಡೆಸಿದೆ. 1915ರಲ್ಲಿ ಸ್ಥಾಪನೆಯಾದ ಪರಿಷತ್ತು ಇದೇ 2015ಕ್ಕೆ ನೂರು ವಸಂತಗಳನ್ನು ಪೂರ್ಣಗೊಳಿಸುತ್ತಿದೆ. ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣರಾದವರನ್ನೂ ಸ್ಮರಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ವಿಶ್ವೇಶ್ವರಯ್ಯನವರ ಆಶಯದಂತೆ  ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣರಾದ ನಾಲ್ವರೆಂದರೆ ಹೆಚ್.ವಿ.ನಂಜುಂಡಯ್ಯನವರು, ಕರ್ಪೂರ ಶ್ರೀನಿವಾಸರಾಯರು, ಪಿ.ಎಸ್.ಅಚ್ಚುತರಾಯರು ಮತ್ತು ಆರ್.ರಘುನಾಥರಾಯರು. ಇವರೆಲ್ಲಾ ಕಷ್ಟಪಟ್ಟು ಬೆಳೆಸಿದ ಸಾಹಿತ್ಯ ಪರಿಷತ್ತು ಇಂದು ಹೆಮ್ಮರವಾಗಿ ಬೆಳೆದು ಕನ್ನಡಿಗರ ದೇಗುಲವೆನಿಸಿದೆ.
ವಿಶ್ವೇಶ್ವರಯ್ಯನವರ ಸಮಕಾಲೀನರಾಗಿದ್ದ ನಂಜುಂಡಯ್ಯನವರು ಮೈಸೂರು ವಿಶ್ವವಿದ್ಯಾನಿಲಯದ ಮೊದಲ ಉಪ ಕುಲಪತಿಗಳಾಗಿ, ಮೈಸೂರು ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ. ಮದ್ರಾಸು ವಿಶ್ವ ವಿದ್ಯಾನಿಲಯದಿಂದ ಕಾನೂನು ವಿಷಯದಲ್ಲಿ ಮೊದಲ ಸ್ನಾತಕೋತ್ತರ ಪದವಿ ಪಡೆದವರು ಇವರಾಗಿದ್ದರು. ಲೇಖ್ಯ ಬೋಧಿನಿ, ವ್ಯಹಾರ ದೀಪಿಕೆ, ಅರ್ಥಶಾಸ್ತ್ರ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.   ಮೈಸೂರಿನ ದಿವಾನಹುದ್ದೆಯಿಂದ ವಂಚಿತರಾದ ನಂಜುಂಡಯ್ಯನವರು ಸರಳರೂ, ಸಜ್ಜನರೂ, ಪರೋಪಕಾರಿಗಳೂ ಆಗಿದ್ದರು. ಅವರು ವಾಸಿಸುತ್ತಿದ್ದ ಬೆಂಗಳೂರಿನ ಮಲ್ಲೇಶ್ವರದ ಬಂಗಲೆಯನ್ನು ಅವರ ಮರಣಾನಂತರ ಸರ್ಕಾರಿ ಬಾಲಿಕಾ ಪ್ರೌಢಶಾಲೆ ನಡೆಸಲು ನೀಡಲಾಯಿತು. ಒಮ್ಮೆ ರಾಜಮಂತ್ರ ಪ್ರವೀಣ ನಂಜುಂಡಯ್ಯನವರು ಸರ್ಕಾರಿ ಕಾರ್ಯ ನಿಮಿತ್ತ ಕುದುರೆಗಾಡಿಯಲ್ಲಿ ಹೋಗುತ್ತಿದ್ದಾಗ ಒಂದು ಘಟನೆ ನಡೆಯಿತು.
ಒಂದು ಹಳ್ಳಿಯ ಸಮೀಪ ಪುಟ್ಟ ಮಗುವೊಂದು ಆಡುತ್ತಾ ಆಡುತ್ತಾ, ಅಲ್ಲಿದ್ದ ಕೆರೆಯೊಂದಕ್ಕೆ ಬಿದ್ದುಬಿಟ್ಟಿತು. ತಕ್ಷಣವೇ ಹೋಗಿ ಆ ಮಗುವನ್ನುಳಿಸಲು ತಮ್ಮ ಗಾಡಿ ಹೊಡಿಯುವವನಿಗೆ ಹೇಳಿದರು. ಆಗ ಗಾಡಿಯವನು ಕೆರೆಯಲ್ಲಿ ಮುಳುಗುತ್ತಿರುವ ಮಗು ಹರಿಜನರ ಮಗುವೆಂದೂ, ಅದನ್ನು ಮುಟ್ಟಿ ತಾನು ಮೈಲಿಗೆಯಾಗುವುದಿಲ್ಲವೆಂದೂ ತಿಳಿಸಿದ. ಆಗ ನಂಜುಂಡಯ್ಯನವರು ಗಾಡಿಯಿಂದಿಳಿದವರೇ, ಕೆರೆಗೆ ಧುಮುಕಿ, ಆ ಮಗುವನ್ನು ಎತ್ತಿಕೊಂಡು ದಡಕ್ಕೆ ತಂದು ರಕ್ಷಿಸಿದರು. ಸೂಕ್ತ ಪ್ರಥಮ ಚಿಕಿತ್ಸೆ ನೀಡಿ ಆ ಮಗುವಿನ ಪ್ರಾಣ ಉಳಿಸಿದರು.  ಮಗುವಿನ ತಾಯಿಯನ್ನು ಕರೆಸಿ, ಮಗುವನ್ನು ನೋಡಿಕೊಳ್ಳುವುದು ಹೀಗೆಯೋ ಎಂದು ಗದರಿಸಿ, ಮಗುವನ್ನು ಜೋಪಾನ ಮಾಡಲು ಕೆಲವು ಸಲಹೆಗಳನ್ನು ನೀಡಿದರು. ನಂತರ ತಮ್ಮ ಗಾಡಿಯವನ ಕಡೆ ತಿರುಗಿ, ನಿನಗೆ ಮನುಷ್ಯ ಜೀವಕ್ಕಿಂತಲೂ ಜಾತಿ ದೊಡ್ಡದಾಯಿತೆ? ಸಹಾಯ ಮಾಡಲು ಜಾತಿ ಅಡ್ಡಿಬರಬಾರದು ಎಂದು ತಿಳಿ ಹೇಳಿದರು.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.