ಸಂಪಾದಕೀಯ

ಹಿಂಸೆ ಅನುಭವಿಸುವಾಗಲೂ ಹರಿನಾಮ ಜಪ

Published On :

ಸ್ವಾಮಿ ಹರಿದಾಸ 15ನೇ ಶತಮಾನದಲ್ಲಿದ್ದ ಒಬ್ಬ ಸಂತರು. ಚಿಕ್ಕಂದಿನಲ್ಲಿಯೇ ಅನಾಥನಾದ ಅವರನ್ನು ಒಂದು ಮುಸ್ಲಿಂ ಕುಟುಂಬ ತಮ್ಮ ವಶಕ್ಕೆ ತೆಗೆದುಕೊಂಡು ಅವರಿಗೆ ಪರ್ಶಿಯನ್ ಕಲಿಸಲು ಪ್ರಯತ್ನಿಸಿತು. ಆದರೆ ಹರಿದಾಸರಿಗೆ ರಾಮಾಯಣ ಮತ್ತು ಮಹಾಭಾರತದ ಬಗ್ಗೆ ಅಪಾರ ಒಲವಿತ್ತು. ವರ್ಷಗಳುರುಳಿ ಸುಂದರ ಯುವಕನಾಗಿ ಬೆಳೆದ ಹರಿದಾಸರಿಗೆ ಮದುವೆ ಮಾಡಲು ಮನೆಯಲ್ಲಿ ತಯಾರಿ ನಡೆಯುತ್ತಿರುವಾಗಲೇ ಅವರು ಮನೆ ಬಿಟ್ಟು ನಾಡಿಯಾ ಎಂಬಲ್ಲಿಗೆ ಬಂದರು. ಅಲ್ಲಿ ವಿಷ್ಣು ಭಕ್ತ ಅದ್ವೈತಾಚಾರ್ಯರನ್ನು ಭೇಟಿ ಮಾಡಿ ಅವರಿಂದ ಶ್ರೀಕೃಷ್ಣ ಮಂತ್ರದ ದೀಕ್ಷೆ ಪಡೆದರು. ನಂತರ ಚೈತನ್ಯ ಪ್ರಭುಗಳ ದರ್ಶನ ಪಡೆದು ಅವರ ಆಶೀರ್ವಾದ ಪಡೆದರು. ತಾನ್‌ಸೇನನ ಗುರುಗಳಾಗಿ, ಶ್ರೀಕೃಷ್ಣನ ಅನನ್ಯ ಭಕ್ತರಾಗಿ ಅಪಾರ ಹೆಸರು ಗಳಿಸಿದರಾದರೂ ಮುಸ್ಲಿಂ ರಾಜನ ಅವಕೃಪೆಗೂ ಪಾತ್ರರಾದರು. ಅವರು ಈಗಿನ ಬಾಂಗ್ಲಾದೇಶಕ್ಕೆ ಸೇರಿರುವ ಶಾಂತಿಪುರಕ್ಕೆ ಬಂದು ನೆಲೆಸಿದಾಗ ಅಲ್ಲಿನ ಸಂಪ್ರದಾಯಸ್ಥ ಮುಸ್ಲಿಮರ ಕೆಂಗಣ್ಣಿಗೆ ಗುರಿಯಾದರು, ಅವರೆಲ್ಲ ಗೌಡದೇಶದ ದೊರೆ ಬಾದಷಹ ಹುಸೇನ್ ಷಾಗೆ ದೂರು ಒಯ್ದರು. ಹುಸೇನ್ ಷಾ ಆಜ್ಞೆಯ ಮೇರೆಗೆ ಹರಿದಾಸರನ್ನು ಬಂಧಿಸಿ ಸುಲ್ತಾನನ ಸಮ್ಮುಖದಲ್ಲಿ ಹಾಜರುಪಡಿಸಲಾಯಿತು. ಕಾಫಿರರನ್ನು ಅನುಸರಿಸಲು ನಿನಗೆ ನಾಚಿಕೆಯಾಗುವುದಿಲ್ಲವೆ? ಹಿಂದೂ ದೇವರುಗಳ ಹೆಸರನ್ನು ಉಚ್ಚರಿಸುವುದನ್ನು ಬಿಟ್ಟುಬಿಡು ಎಂದು ಆದೇಶಿಸಲಾಯಿತು. ಅದಕ್ಕೆ ಹರಿದಾಸರು ಮುಗುಳ್ನಗುತ್ತಾ 'ಯಾರು ರಾಮನೋ ಅವನೇ ರಹೀಮ. ಹಿಂದೂಗಳು ಮತ್ತು ಮುಸಲ್ಮಾನರು ಸಹೋದರರಂತೆ. ಹಿಂದೂಗಳ ಭಗವಾನ್ ಮತ್ತು ಮುಸ್ಲಿಮರ ಖುದಾ ಒಂದೇ. ದೇವರು ಒಬ್ಬನೇ ಅಲ್ಲವೆ?' ಎಂದು ಮಾರುತ್ತರ ನೀಡಿದರು. ಇದರಿಂದ ಕೋಪಾವಿಷ್ಟನಾದ ಬಾದಷಹನು ಚಿತ್ರಹಿಂಸೆ ನೀಡಿ ಹರಿದಾಸರನ್ನು ಕೊಲ್ಲಲು ಆದೇಶಿಸಿದ. ಅದರಂತೆ ಸೈನಿಕರು ಹರಿದಾಸರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಧವಿಧ ಶಿಕ್ಷೆ ನೀಡಿ ಹಿಂಸಿಸತೊಡಗಿದರು. ಸೈನಿಕರು ಹಿಂಸಿಸಿದಷ್ಟೂ, ಜೋರಾಗಿ ಕೃಷ್ಣನಾಮ ಜಪಿಸಲು ತೊಡಗಿದರು. ಇದರಿಂದ ಹಿಂಸೆ ಹೆಚ್ಚಾಯಿತೇ ಹೊರತು ಬೇರೇನೂ ಲಾಭವಾಗಲಿಲ್ಲ. ನೋಡುತ್ತಿದ್ದ ಅನೇಕರು ಹರಿದಾಸರ ದಯನೀಯ ಸ್ಥಿತಿಯನ್ನು ನೋಡಿ ತಾಳಲಾರದೆ, ಸಂಕಟದಿಂದ ಹಿಂಸೆ ಅನುಭವಿಸುವುದಕ್ಕಿಂತ ಸತ್ತರೆ ಎಷ್ಟೋ ಉತ್ತಮ ಎಂದು ಭಾವಿಸಿದರು. ಹಿಂಸೆ ಅನುಭವಿಸಿದಷ್ಟೂ ನಗುತ್ತಲೇ ಇದ್ದ ಹರಿದಾಸರು ಕೊನೆಗೆ ಧ್ಯಾನಮಗ್ನರಾಗಿ ಕುಳಿತರು. ಭಾವಸಮಾಧಿಗೆ ಇಳಿದ ಅವರಿಗೆ ದೈಹಿಕಯಾತನೆ ಕಾಣದಾಯಿತು. ಎಷ್ಟು ಹೊತ್ತಾದರೂ ಎಚ್ಚರಗೊಳ್ಳದಿದ್ದಾಗ ಸೈನಿಕರು ಹರಿದಾಸರು ಸತ್ತಿರಬಹುದೆಂದು ಭಾವಿಸಿ, ಅವರನ್ನು ಎತ್ತೊಯ್ದು ಗಂಗಾನದಿಯಲ್ಲಿ ಬಿಸುಟರು. ಎಷ್ಟೋ ಸಮಯದ ನಂತರ ಎಚ್ಚರವಾದಾಗ ಹರಿದಾಸರು ನದಿಯ ದಂಡೆಯ ಮೇಲೆ ಬಿದ್ದಿದ್ದರು. ಅಲ್ಲಿಂದ ಹೊಸ ಜೀವನವನ್ನು ಪ್ರಾರಂಭಿಸಿದರು. ದಿನವಿಡೀ ಹರಿನಾಮ ಸಂಕೀರ್ತನೆಯಲ್ಲಿ ತೊಡಗಿಕೊಂಡರು. ಏಕಾಂತದಲ್ಲಿ ಕುಳಿತು ಆಧ್ಯಾತ್ಮಿಕ ಸಾಧನೆ ಮಾಡುತ್ತಿದ್ದರು. ಚೈತನ್ಯ ಪ್ರಭುಗಳ ದರ್ಶನಭಾಗ್ಯದಿಂದ ಅವರಲ್ಲಿ ನವಚೈತನ್ಯ ಕಂಡುಬಂತು. ಹರಿನಾಮ ಸ್ಮರಣೆ ಮಾಡುತ್ತಲೇ 1534ರಲ್ಲಿ ಕೊನೆಯುಸಿರೆಳೆದಾಗ ಅವರ ಗುಡಿಸಲು ಇದ್ದ ಪುರಿಯ ಒಂದು ಸ್ಥಳದಲ್ಲಿ ಸಮಾಧಿಯನ್ನು ನಿರ್ಮಿಸಲಾಯಿತು. ಇಂದಿಗೂ ಅದು ಆಸ್ತಿಕರ ಶ್ರದ್ಧಾ ಕೇಂದ್ರವಾಗಿದೆ.


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.