ಸಂಪಾದಕೀಯ

ಬಾಳಾಶಾಸ್ತ್ರಿಗಳ ಹೋರಾಟ

Published On :

ಬಾಳಾಶಾಸ್ತ್ರಿ ಜಾಂಭೇಕರ್ ಮರಾಠಿ ಪತ್ರಿಕೋದ್ಯಮದ ಜನಕನೆಂಬ ಹೆಸರನ್ನು ಪಡೆದಿದ್ದಾರೆ. 1832 ರಲ್ಲಿ 'ದರ್ಪಣ್‌' ಎಂಬ ಮೊದಲ ಮರಾಠಿ ಪತ್ರಿಕೆಯನ್ನು ಪ್ರಾರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರಿಗಾಗ ಕೇವಲ 20 ವರ್ಷಗಳು. ನಂತರ ಅವರು ಸಾರ್ವಜನಿಕ ಗ್ರಂಥಾಲಯದ ಮಹತ್ವವನ್ನು ಕಂಡು 'ದಿ ಬಾಂಬೆ ನೇಟಿವ್ ಜನರಲ್ ಲೈಬ್ರರಿ' ಸ್ಥಾಪಿಸಿದರು. ಇವರ ನೇಟಿವ್ ಇಂಪ್ರೂವ್ಮೆಂಟ್ ಸೊಸೈಟಿಯ ಮೂಲಕ ಪ್ರಭಾವಿತರಾದವರು ದಾದಾಭಾಯಿ ನವರೋಜಿಯಂತಹವರು. ಪ್ರಖ್ಯಾತ ಎಲ್ಫಿನ್ಸ್‌ಟನ್ ಕಾಲೇಜಿನ ಸಂಸ್ಥಾಪಕರಾಗಿ, ಮೊದಲ ಪ್ರಾಧ್ಯಾಪಕರಾಗಿ ಹೆಸರು ಗಳಿಸಿದರು. ನೇಟಿವ್ ಎಜುಕೇಷನ್ ಸೊಸೈಟಿ ಸ್ಥಾಪಕ ಕಾರ್ಯದರ್ಶಿಗಳಾಗಿ, ಅದನ್ನೇ ಮುಂಬೈ ಸರ್ಕಾರದ ಶಿಕ್ಷಣ ಇಲಾಖೆಯನ್ನಾಗಿ ಪರಿವರ್ತಿಸಲು ನೆರವಾದರು. ನ್ಯಾಯಾಧೀಶರಾಗಿಯೂ ಸಹ ಸೇವೆಸಲ್ಲಿಸಿ, ತಮ್ಮ ಪ್ರತಿಭೆಯನ್ನು ಬೆಳಗಿದರು. ಅವಿರಿಗಿದ್ದ ಪಾಂಡಿತ್ಯ ಮತ್ತು ಸಮಾಜಮುಖಿ ಚಿಂತನೆಗಳು ಎಲ್ಲರ ಆದರಕ್ಕೆ ಪಾತ್ರವಾಗಿದ್ದವು. ತಮ್ಮ ಜೀವಿತದ ಕೇವಲ 34 ವರ್ಷಗಳಲ್ಲಿ ಅದ್ಭುತ ಸಾಧನೆ ಮಾಡಿದ ಶಾಸ್ತ್ರಿಗಳು ಮಹಾರಾಷ್ಟ್ರದ ಸಮಾಜಸುಧಾರಕರಲ್ಲಿ ಒಬ್ಬರಾಗಿದ್ದಾರೆ. ಒಮ್ಮೆ ನಾರಾಯಣ ಶೇಷಾದ್ರಿ ಪರಳೀಕರ್ ಎಂಬುವನು ಒತ್ತಾಯಪೂರ್ವಕವಾಗಿ ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದ. ಅವನ ತಮ್ಮ ಶ್ರೀಪತಿ ಪರಳೀಕರ್ ಎಂಬುವವನು ತನ್ನ ಅಣ್ಣನ ಮನೆಯಲ್ಲಿದ್ದು ಓದುತ್ತಿದ್ದುರಿಂದ ಅವನನ್ನೂ ಸಹ ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ತಯಾರಿ ನಡೆದಿತ್ತು. ಆಗ ದಿಕ್ಕು ತೋಚದ ಆ ಬಾಲಕನ ತಂದೆ ಬಾಳಾಶಾಸ್ತ್ರಿಗಳ ಮೊರೆಹೋದ. ಆಗ ಶಾಸ್ತ್ರಿಗಳು ಬಲವಂತದ ಮತಾಂತರವನ್ನು ಖಂಡಿಸಿ, ಶ್ರೀಪತಿಯನ್ನು ಆತನ ತಂದೆಗೆ ಒಪ್ಪಿಸಬೇಕೆಂದು ಮುಂಬೈ ಶ್ರೇಷ್ಠ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ಅದರಂತೆ ವಿಚಾರಣೆ ನಡೆದು ಬಾಲಕ ಶ್ರೀಪತಿಯನ್ನು ತಂದೆಯವರ ವಶ ನೀಡಬೇಕೆಂದು ತೀರ್ಪು ನೀಡಲಾಯಿತು. ಆದರೆ ಕೆಲ ಪ್ರಗತಿ ವಿರೋಧಿ ಬ್ರಾಹ್ಮಣ ಮುಖಂಡರು ಬಾಲಕನು ಅನ್ಯಧರ್ಮೀಯರ ಮನೆಯಲ್ಲಿ ತುಂಬಾ ದಿನಗಳು ಇದ್ದುದರಿಂದ ಅವನನ್ನು ಪುನಃ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲವೆಂದು ವಿರೋಧಿಸಿದರು. ಆದರೆ ಬಾಳಾಶಾಸ್ತ್ರಿಗಳು ಸನಾತನಿ ಬ್ರಾಹ್ಮಣರ ಆಂದೋಲನ ಅಧಾರ್ಮಿಕ ಎಂಬುದನ್ನು ಸ್ಮೃತಿ ಪುರಾಣ ಸಹಿತ ನಿರೂಪಿಸಿ, ವಿಧಿವತ್ತಾಗಿ ಶುದ್ಧೀಕರಿಸಿ ಮರಳಿ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಬಹುದೆಂದು ವಾದಿಸಿದರು. ಅವರನ್ನು ಬೆಂಬಲಿಸಿದ ಪ್ರಮುಖರೆಂದರೆ ಮಹಾದೇವ ಗೋವಿಂದ ರಾನಡೆ ಮತ್ತು ಲೋಕಮಾನ್ಯ ಬಾಲಗಂಗಾಧರ ತಿಲಕರು. ಅವರು ಸನಾತನಿ ಬ್ರಾಹ್ಮಣರ ನಿಲುವನ್ನು ಖಂಡಿಸಿದರು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.