ನರ್ಗಿಸ್ಳನ್ನು ಗದರಿಸಿದ ಮೊರಾರ್ಜಿ
ನಮ್ಮ ದೇಶದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವರು 1950 ರ ದಶಕದಲ್ಲಿ ಮುಂಬಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರು ಆಡಳಿತದಲ್ಲಿ ಬಲು ಬಿಗಿಯಾದ ಮನುಷ್ಯ. ಯಾವುದಕ್ಕೂ ಜಗ್ಗುವ ಪ್ರವೃತ್ತಿಯವರಲ್ಲ. ಆಡಳಿತದಲ್ಲಿ ಅನೇಕ ಸುಧಾರಣೆಗಳನ್ನು ತಂದು, ಜನಸಾಮಾನ್ಯರಿಗೆ ಹತ್ತಿರವಾದರು. ಭಾರತರತ್ನ ಪ್ರಶಸ್ತಿ ಬಂದಾಗಲೂ ಹಿಗ್ಗಲಿಲ್ಲ. ಪಾಕಿಸ್ತಾನ ನಿಶಾನ್-ಎ-ಪಾಕಿಸ್ತಾನ ಪ್ರಶಸ್ತಿ ನೀಡಿದಾಗಲೂ ಅಷ್ಟೆ. ಅವರ ನೂರನೆಯ ಜನ್ಮದಿನೋತ್ಸವದ ಸಂದರ್ಭದಲ್ಲಿ ಆಗಿನ ಪ್ರಧಾನಿ ನರಸಿಂಹರಾಯರು, ಮೊರಾರ್ಜಿಯವರ ಹೆಸರಿನಲ್ಲೊಂದು ಯೋಜನೆಯನ್ನು ಹಮ್ಮಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದಾಗ ಅದನ್ನು ವಿರೋಧಿಸಿ, ಯಾವುದೇ ಯೋಜನೆಗಳು ದೇಶಕ್ಕೂ, ದೇಶದ ಜನಕ್ಕೂ ಉಪಯುಕ್ತವಾಗಿರಬೇಕೆಂದೂ, ಅದಕ್ಕೆ ವ್ಯಕ್ತಿಯೊಬ್ಬರ ಹೆಸರನ್ನಿಡುವುದು ತಮಗೆ ಸರಿಕಾಣದೆಂದು ಅಭಿಪ್ರಾಯ ಪಟ್ಟರು. ತಾವು ಸಂತುಷ್ಟ. ನಿರಾಶೆಗಳೇ ಇಲ್ಲ, ಆಸೆಗಳೂ ಉಳಿದಿಲ್ಲ ಎಂದು ಆಗಾಗ್ಗೆ ವಿನೀತರಾಗಿ ಹೇಳುತ್ತಿದ್ದರು. ಅವರು 1950ರ ಸಮಯದಲ್ಲಿ ಮುಂಬಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಒಬ್ಬ ಸುಂದರ ತರುಣಿಯೊಬ್ಬಳು ತಾನು ಮುಸ್ಲಿಮಳೆಂದೂ, ಹಿಂದುವೊಬ್ಬನನ್ನು ಪ್ರೀತಿಸುತ್ತಿದ್ದು, ಅವನನ್ನು ವಿವಾಹವಾಗುವುದಾಗಿ ತಿಳಿಸಿದಳು. ಅದಕ್ಕೆ ಮೊರಾರ್ಜಿಯವರು, ನಿಮಗೆ ಒಳಿತಾಗಲಿ, ಅದಕ್ಕೇನು ಅಡ್ಡಿ? ಎಂದು ಪ್ರಶ್ನಿಸಿದರು. ಆಗ ಆ ತರುಣಿ ಹೇಳಿದಳು, "ಆತನಿಗಾಗಲೇ ವಿವಾಹವಾಗಿದ್ದು, ಆತನನ್ನು ವಿವಾಹವಾಗಲು ಕಾನೂನಿನ ತೊಡಕಿದೆ, ದಯಮಾಡಿ ಅನುಮತಿ ಕೊಡಿಸಬೇಕು".
ಅದನ್ನು ಕೇಳಿದ ಕೂಡಲೇ ಮೊರಾರ್ಜಿಯವರ ಮುಖದಲ್ಲಿ ಸಿಟ್ಟು ಕಾಣಿಸಿತು. ಅವರು ಹೇಳಿದರು, ಸಮಾಜಕ್ಕೆ ಒಳಿತಾಗಲೆಂದು ಮಾಡಿದ ಕಾನೂನನನ್ನು ನಾನೇ ಮುರಿಯಲೇ? ನಡೆಯಿರಿ! ಅವರ ಮಾತಿನ ಧಾಟಿಗೆ ಬೆದರಿದ ಆಕೆ ಅಲ್ಲಿಂದ ಜಾಗ ಖಾಲಿ ಮಾಡಿದಳು. ಆಕೆ ಬೇರೆ ಯಾರೂ ಅಲ್ಲ, ಹಿಂದಿ ಚಿತ್ರರಂಗದ ಪ್ರಸಿದ್ಧ ಅಭಿನೇತ್ರಿ ನರ್ಗಿಸ್. ಆಕೆ ವಿವಾಹವಾಗಲು ಬಯಸಿದ್ದ ವ್ಯಕ್ತಿ ಬೇರಾರೂ ಆಗಿರದೆ, ರಾಜ್ ಕಪೂರ್ ಆಗಿದ್ದ. ಆಗಲೇ ಅವನು ನಟ ಪ್ರೇಮನಾಥನ ತಂಗಿ ಕೃಷ್ಣಾಳನ್ನು ವರಿಸಿದ್ದ. ಅವರ ವಿವಾಹವಾಗಲು ಕಾನೂನು ಅವಕಾಶ ಕೊಟ್ಟಿರಲಿಲ್ಲ. ಹೀಗಾಗಿ ಆಕೆ ಮೊರಾರ್ಜಿಯವರ ಅನುಮತಿ ಬಯಸಿ ಬಂದಿದ್ದಳು. ಮೊರಾರ್ಜಿಯವರ ಕಠಿಣ ನಿಲುವಿನಿಂದಾಗಿ ರಾಜ್ಕಪೂರ್ ಮತ್ತು ನರ್ಗಿಸ್ ಅವರ ವಿವಾಹ ನಡೆಯಲಿಲ್ಲ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

