ಜಾಣ ಗುಲಾಮ ಪ್ರಸಿದ್ಧಿ ಪಡೆದದ್ದು ಹೇಗೆ?
ಎಲ್ಲರೂ ಈಸೋಪನ ನೀತಿ ಕಥೆಗಳನ್ನು ಕೇಳಿದ್ದೀರಿ. ಈಸೋಪ ಕ್ರಿ.ಪೂ.6ನೇ ಶತಮಾನದಲ್ಲಿ ಗ್ರೀಸ್ ದೇಶದಲ್ಲಿ ಜೀವಿಸಿದ್ದ ಒಬ್ಬ ಗುಲಾಮ ಎಂದು ನಂಬಲಾಗಿದೆ. ಅರಿಸ್ಟಾಟಲ್, ಹಿರೋಡೋಟಸ್ ಮತ್ತು ಪ್ಲುಟಾರ್ಕನ ಬರವಣಿಗೆಯಲ್ಲಿ ಈಸೋಪನ ಹೆಸರು ಕೇಳಿ ಬರುತ್ತದೆ. ಈಸೋಪನು 20 ವರ್ಷದವಕನಾಗಿದ್ದಾಗ ಅವನ ಯಜಮಾನನು ಯಾವುದೋ ವ್ಯವಹಾರದಲ್ಲಿ ತುಂಬ ನಷ್ಟವನ್ನುಂಟುಮಾಡಿಕೊಂಡು ತನ್ನಲ್ಲಿದ್ದ ಗುಲಾಮರನ್ನೆಲ್ಲಾ ಮಾರಲು ನಿರ್ಧರಿಸಿದ. ಅದಕ್ಕಾಗಿ ತನ್ನೆಲ್ಲ ಗುಲಾಮರನ್ನೂ ಕರೆದುಕೊಂಡು ದೂರದ ಒಂದು ನಗರಕ್ಕೆ ಹೊರಟ. ತನ್ನ ಸಾಮಾನು ಸರಂಜಾಮುಗಳನ್ನು ಕೊಡೊಯ್ಯಲು ತನ್ನ ಗುಲಾಮರಿಗೆ ಹೇಳಿದಾಗ ಈಸೋಪನು ಅದರಲ್ಲಿಯ ಆಹಾರ ಸಾಮಗ್ರಿಯಿದ್ದ ದೊಡ್ಡ ಹೊರೆಯನ್ನೇ ಆಯ್ದುಕೊಂಡ. ಅವನನ್ನು ನೋಡಿ ಉಳಿದವರೆಲ್ಲಾ ನಕ್ಕರು. ಹೋಗುತ್ತಾ ಹೋಗುತ್ತಾ ಪ್ರತಿದಿನ ಆಹಾರ ವಸ್ತುಗಳು ಖರ್ಚಾಗಿ ಅವನ ಹೊರೆಯ ಭಾರ ಕಡಿಮೆಯಾಗುತ್ತಾ ಬಂತು, ಆಗ ಇತರರಿಗೆ ಅವನ ಬುದ್ಧಿವಂತಿಕೆಯ ಪರಿಚಯವುಂಟಾಯಿತು. ನಗರದ ಗುಲಾಮರ ಮಾರುಕಟ್ಟೆಗೆ ಬಂದಾಗ ಮಾಲೀಕ ಎಲ್ಲ ಗುಲಾಮರಿಗಿಂತ ಹೆಚ್ಚು ಬೆಲೆಯನ್ನು ಈಸೋಪನಿಗೆ ನಿಗದಿಗೊಳಿಸಿ ಮಾರಲು ನಿರ್ಧರಿಸಿದ. ಗುಲಾಮರನ್ನು ಕೊಳ್ಳಲು ಬಂದ ಗಾಂಥಸ್ ಎಂಬ ಶ್ರೀಮಂತನೊಬ್ಬ ಎಲ್ಲಾ ಗುಲಾಮರ ಬಳಿ ಬಂದು ಅವರೇನು ಕೆಲಸಮಾಡುತ್ತಾರೆಂದು ವಿಚಾರಿಸಿದ. ಶ್ರೀಮಂತನನ್ನು ಪ್ರಸನ್ನಗೊಳಿಸಲು ಪ್ರತಿಯೊಬ್ಬ ಗುಲಾಮನೂ ತಾನು ಮಾಡುವ ಕಾರ್ಯವನ್ನು ಬಹುವಾಗಿ ಹಿಗ್ಗಿಸಿ ಹೇಳಿದ. ಈಸೋಪನ ಸರದಿ ಬಂದಾಗ ಅವನು ಹೇಳಿದ, ನಾನೇನೂ ಮಾಡುವುದಿಲ್ಲ! ಶ್ರೀಮಂತ ಅಚ್ಚರಿಯಿಂದ ಕೇಳಿದ ಅದು ಹೇಗೆಂದು. ಆಗ ಈಸೋಪ, "ಎಲ್ಲ ಗುಲಾಮರೂ ಒಂದಲ್ಲಾ ಒಂದು ಕೆಲಸವನ್ನು ಮಾಡುವುದಾಗಿ ಅಗಲೇ ಹೇಳಿಕೊಂಡಿದ್ದಾರೆ. ಆದ್ದರಿಂದ ತನಗೆ ಮಾಡಲು ಯಾವ ಕೆಲಸವೂ ಇಲ್ಲ" ಎಂದು. ಅವನ ಉತ್ತರದಿಂದ ಸಂತೃಪ್ತನಾದ ಶ್ರೀಮಂತ ಅವನಿಗೆ ಹೆಚ್ಚಿನ ಬೆಲೆ ತೆತ್ತು ಸಾಮೋಸ್ ದ್ವೀಪದಲ್ಲಿದ್ದ ತನ್ನ ಮನೆಗೆ ಕರೆದೊಯ್ದ. ಅಲ್ಲಿ ಈಸೋಪ ತನ್ನ ಒಡೆಯ ಮತ್ತವನ ಗೆಳೆಯರಿಗೆ ನೀತಿ ಕಥೆಗಳನ್ನು ಹೇಳುತ್ತಾ ರಂಜಿಸಿದ. ಅವನ ಬುದ್ಧಿವಂತಿಕೆಗೆ ಮನಸೋತ ಶ್ರೀಮಂತ ಈಸೋಪನನ್ನು ಗುಲಾಮಗಿರಿಯಿಂದ ಬಿಡುಗಡೆ ಮಾಡಿ ಸ್ವಾತಂತ್ರ್ಯ ನೀಡಿ ಗೌರವಿಸಿದ. ಅಂದಿನಿಂದ ಈಸೋಪ ಅನೇಕ ಶ್ರೀಮಂತರ ಮತ್ತು ಗಣ್ಯರ ಗೆಳೆಯನಾಗಿ ಮೆರೆದದ್ದಲ್ಲದೆ, ರಾಜನ ಆದರಕ್ಕೂ ಪಾತ್ರನಾದ. ಇಂದಿಗೂ ಈಸೋಪನ ನೀತಿ ಕಥೆಗಳು ವಿಶ್ವಾದ್ಯಂತ ಜನಮೆಚ್ಚುಗೆಯನ್ನು ಪಡೆದಿವೆ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

