ಶಿಕ್ಷಣಕ್ಕಾಗಿ ಪಾಣಿನಿ ಮಾಡಿದ್ದೇನು?
ಪಾಣಿನಿ ನಾಲ್ಕನೇ ಶತಮಾನದಲ್ಲಿದ್ದ ಒಬ್ಬ ಸಂಸೃತ ವಿದ್ವಾಂಸ. ಗಾಂಧಾರ ದೇಶದ ಪುಷ್ಕಳಾವತಿ (ಈಗಿನ ಪಾಕಿಸ್ತಾನ) ...
ಪಾಣಿನಿ ನಾಲ್ಕನೇ ಶತಮಾನದಲ್ಲಿದ್ದ ಒಬ್ಬ ಸಂಸೃತ ವಿದ್ವಾಂಸ. ಗಾಂಧಾರ ದೇಶದ ಪುಷ್ಕಳಾವತಿ (ಈಗಿನ ಪಾಕಿಸ್ತಾನ) ಎಂಬ ಸ್ಥಳದಲ್ಲಿ ಜನಿಸಿದ ಪಾಣಿನಿ 'ಅಷ್ಟಾಧ್ಯಾಯಿ' ಎಂಬ ವ್ಯಾಕರಣ ಶಾಸ್ತ್ರವನ್ನು ಬರೆದಿದ್ದಾನೆ. ಅವನು ಬರೆದಿದ್ದನೆನ್ನಲಾದ 'ಜಾಂಬವತಿ ವಿಜಯ' ಮತ್ತು 'ಪಾತಾಳ ವಿಜಯ' ಗ್ರಂಥಗಳು ಸಿಕ್ಕಿಲ್ಲ. ಬಾಲ್ಯದಲ್ಲಿ ನಡೆದ ಒಂದು ಘಟನೆ ಪಾಣಿನಿಯ ಸ್ಥೈರ್ಯ ಮತ್ತು ಜ್ಞಾನದಾಹ ಹೇಗಿತ್ತು ಎಂಬುದನ್ನು ಸೂಚಿಸುತ್ತದೆ. ಪಾಣಿನಿ ಒಂದು ಗುರುಕುಲಕ್ಕೆ ಸೇರಿ ವಿದ್ಯಾಭ್ಯಾಸ ಮಾಡಲು ನಿರ್ಧರಿಸಿದ. ಆಗಿನ ಕಾಲದಲ್ಲಿ ಗುರುವಾದವನು ಶಿಷ್ಯನನ್ನು ಸ್ವೀಕರಿಸಬೇಕಾದರೆ ಆಯ್ಕೆ ಮಾಡಲು ಕೆಲವು ಮಾನದಂಡಗಳನ್ನಿಟ್ಟುಕೊಂಡು ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಅಂತಹ ಪರೀಕ್ಷೆಗಳಲ್ಲಿ ಒಂದು ವಿದ್ಯಾರ್ಥಿಯ ಹಸ್ತ ಸಾಮುದ್ರಿಕೆಯನ್ನು ನೋಡುವುದು. ಪಾಣಿನಿಯ ಹಸ್ತ ಸಾಮುದ್ರಿಕೆ ನೋಡಿದ ಗುರು ಬಾಲಕನಿಗೆ ವಿದ್ಯಾಗೆರೆಯೇ ಇಲ್ಲದಿರುವುದರಿಂದ ಅವನಿಗೆ ವಿದ್ಯೆ ಹತ್ತಲಾರದೆಂದು ಭಾವಿಸಿ, ಅವನನ್ನು ತನ್ನ ಗುರುಕುಲಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ. ಇದರಿಂದ ಪಾಣಿನಿ ಮತ್ತು ಅವನ ತಂದೆ ತಾಯಂದಿರಿಗೆ ತುಂಬಾ ಬೇಸರವಾಯಿತು. ಆದರೆ ಪಾಣಿನಿಯು ಅದೇ ಗುರುವಿನಿಂದ ವಿದ್ಯೆ ಕಲಿತು ಪಾರಂಗನಾತನಾಗಲೇಬೇಕೆಂದು ನಿರ್ಧರಿಸಿದ. ಏನು ಮಾಡಬೇಕೆಂದು ತೋಚದೆ ಕೊನೆಗೆ ತನ್ನ ವಿದ್ಯೆಗೆ ಅವಕಾಶ ನೀಡುವ ವಿದ್ಯಾಗೆರೆಯನ್ನು ಒಂದು ಹರಿತವಾದ ಚಾಕುವನ್ನು ತೆಗೆದುಕೊಂಡು ಗೀರಿಕೊಂಡ. ಒಸರುತ್ತಿದ್ದ ರಕ್ತವನ್ನು ಒರೆಸಿಕೊಂಡು ಹಾಗೆಯೇ ನಾಲ್ಕಾರು ದಿನಗಳನ್ನು ತಳ್ಳಿದ. ಗಾಯ ವಾಸಿಯಾದರೂ ಆ ಗೆರೆ ಇನ್ನೂ ಸ್ಪಷ್ಟವಾಗಿ ಕಾಣುತ್ತಿತ್ತು. ನಂತರ ಅದೇ ಗುರುವಿನ ಬಳಿ ಹೋಗಿ ತನ್ನ ಕೈಯನ್ನು ಅವರ ಮುಂದೆ ಚಾಚಿ ಈಗ ನೋಡಿ ಗುರುಗಳೇ, ವಿದ್ಯಾರೇಖೆ ಮೂಡಿದೆಯೇ? ಎಂದು ಕೇಳಿದ. ಅವನಿಗಿದ್ದ ವಿದ್ಯಾಕಾಂಕ್ಷೆಯನ್ನು ಮನಗಂಡ ಗುರುಗಳು ವಿದ್ಯೆಯನ್ನು ಧಾರೆಯೆರಲು ಆಶ್ರಮಕ್ಕೆ ಸೇರಿಸಿಕೊಂಡರು. ಅಲ್ಲಿ ಅನೇಕ ವರ್ಷಗಳ ಕಾಲ ಶ್ರದ್ಧೆಯಿಂದ ಅಭ್ಯಾಸ ಮಾಡಿ ಸಂಸ್ಕೃತ ವ್ಯಾಕರಣದ ಸೂತ್ರಗಳನ್ನು ರಚಿಸಿ ಪ್ರಖ್ಯಾತನಾದ. ಓದಿಗಾಗಿ ತನ್ನ ಕೈ ರೇಖೆಯನ್ನೇ ಬದಲಾಯಿಸಿಕೊಂಡು ಹಸ್ತ ಸಾಮುದ್ರಿಕಾ ಶಾಸ್ತ್ರಕ್ಕೇ ಸವಾಲೆಸೆದು ಯಶಸ್ವಿಯಾದ ಪಾಣಿನಿ ಎಲ್ಲರಿಗೂ ಮೇಲ್ಪಂಕ್ತಿಯಾಗಿದ್ದಾನೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

