ಸಾಧನೆಗೆ ಅಂಧತ್ವ ಅಡ್ಡಿಯಾಗದು
ಎಷ್ಟೇ ಅಡಚಣೆಗಳಿದ್ದರೂ ಒಬ್ಬ ವ್ಯಕ್ತಿ ಸಾಧನೆ ಮಾಡಬಲ್ಲ ಎಂಬುದಕ್ಕೆ ಅನೇಕ ಉದಾಹರಣೆಗಳು ನಮ್ಮ ಮುಂದಿವೆ...
ಎಷ್ಟೇ ಅಡಚಣೆಗಳಿದ್ದರೂ ಒಬ್ಬ ವ್ಯಕ್ತಿ ಸಾಧನೆ ಮಾಡಬಲ್ಲ ಎಂಬುದಕ್ಕೆ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಅಂತಹ ಸಾಧಕರಲ್ಲಿ ಒಬ್ಬ ಸಿರಿಲ್ ಚಾರ್ಲ್ಸ್. ಅವನೊಬ್ಬ ಮ್ಯಾರಥಾನ್ ಓಟಗಾರನಾಗಿದ್ದ. ಚಿಕ್ಕಂದಿನಲ್ಲಿ ಕ್ರಿಕೆಟ್ ಆಡುವಾಗ ಚೆಂಡು ಬಡಿದು ಕಣ್ಣನ್ನು ಕಳೆದುಕೊಂಡ ದುರ್ದೈವಿ. ಬಡತನದಿಂದಾಗಿ ಚಿಕಿತ್ಸೆ ಕೊಡಿಸಲಾಗದೆ ದೃಷ್ಟಿ ವಿಹೀನನಾದ ಸಿರಿಲ್ಗೆ ತನ್ನ ಓದನ್ನು ಸಹ ಪೂರ್ತಿ ಮುಗಿಸಲಾಗಲಿಲ್ಲ. ಕೊನೆಗೆ ಪೋರ್ಟ್ ಆಫ್ ಸ್ಪೇನಿನ ಸಾಂತಾಕ್ರೂಜ್ ಅಂಧರ ಶಾಲೆಯ ವಿದ್ಯಾರ್ಥಿಯಾಗಿ ಸೇರಿಕೊಂಡು ಕೊಳಾಯಿಗಾರನಾಗಿ ಪರಿಣತಿ ಪಡೆದ. ಆದರೆ ಜೀವನವೆಂಬುದು ಕೇವಲ ಹೊಟ್ಟೆ ಹೊರೆಯಲು ಮಾತ್ರ ಎಂಬುದನ್ನು ಒಪ್ಪದ ಸಿರಿಲ್ ಚಾರ್ಲ್ಸ್ ಏನಾದರೂ ಸಾಧನೆ ಮಾಡಬೇಕೆಂದು ಯೋಚಿಸಿದ. ಶಿಕ್ಷಕರೊಬ್ಬರ ಸಲಹೆಯ ಮೇಲೆ ಪ್ರತಿನಿತ್ಯ ಓಡುವ ಅಭ್ಯಾಸವನ್ನು ಮಾಡಿಕೊಂಡ. ಅದನ್ನು ತುಂಬ ಶ್ರದ್ಧೆಯಿಂದಲೂ, ಆಸಕ್ತಿಯಿಂದಲೂ ಮತ್ತು ಬದ್ಧತೆಯಿಂದಲೂ ಮಾಡಿ ಕ್ರೀಡಾಲೋಕದಲ್ಲಿ ಒಂದು ಹೊಸ ಭರವಸೆಯನ್ನು ಮೂಡಿಸಿದ. 1972 ರಿಂದ 1987 ರವರೆಗೆ ಈತನ ನಿರಂತರ ಅಭ್ಯಾಸ ಕೊನೆಗೂ ಫಲ ನೀಡಿತು. 1997 ರಲ್ಲಿ ಟ್ರಿನಿಡಾಡ್ನಲ್ಲಿ ನಡೆದ ಅಂಗವಿಕಲರ 3600 ಮೀ.ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಕೇವಲ 13 ನಿಮಿಷಗಳಲ್ಲಿ ಗುರಿ ಮುಟ್ಟಿ ದಾಖಲೆ ಸ್ಥಾಪಿಸಿದ. ಪ್ರತಿ ದಿನ ಎಂಟು ಕಿಲೋಮೀಟರ್ ಓಡಿ ಅಭ್ಯಾಸ ಮಾಡುತ್ತಿದ್ದ. ಅದೇ ವರ್ಷ ನ್ಯೂಯಾರ್ಕ್ ಮ್ಯಾರಥಾನ್ನಲ್ಲಿ ಭಾಗವಹಿಸಲು ಸಿರಿಲ್ಗೆ ಅವಕಾಶ ದೊರೆಯಿತು. ಇವನೊಂದಿಗೆ ಸ್ಪರ್ಧೆಯಲ್ಲಿ ನುರಿತ ಇತರ ಆರು ಮಂದಿ ಆಂಧರೂ ಸಹ ಭಾಗವಹಿಸಿದ್ದರು . ಅದರಲ್ಲಿ ಚುರುಕಾಗಿ ಓಡಿದ ಸಿರಿಲ್ಗೆ ಜಯಲಕ್ಷ್ಮಿ ಒಲಿದಳು. 13 ಮೈಲು ದೂರವನ್ನು ಕೇವಲ ಮೂರು ಗಂಟೆ, 47 ನಿಮಿಷದಲ್ಲಿ ಓಡಿ ಎಲ್ಲರ ಪ್ರಶಂಸೆಗೆ ಪಾತ್ರನಾದ. ನಂತರ 1988ರಲ್ಲಿ ನಡೆದ ಇನ್ನೊಂದು ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ, 24 ಕಿ.ಮೀ ದೂರವನ್ನು ಹೇಗಾದರೂ ಮಾಡಿ ಮೂರು ಗಂಟೆ ಅವಧಿಯಲ್ಲಿ ಮುಗಿಸಬೇಕೆಂದು ನಿರ್ಧರಿಸಿದ. ಆದರೆ ಕಾಲಿಗಾದ ಗಾಯದಿಂದಾಗಿ ಗುರಿಯನ್ನು 3 ಗಂಟೆ, 37 ನಿಮಿಷದಲ್ಲಿ ಮುಟ್ಟಿದ. ಅವನ ಸಾಧನೆಯ ಬಗ್ಗೆ ಪ್ರಶ್ನೆಯೊಂದನ್ನು ಕೇಳಿದ ಪತ್ರಕರ್ತರಿಗೆ "ಅಂಧತ್ವ ಸಾಧನೆಗೆಂದೂ ಅಡ್ಡಿಯಾಗದು" ಎಂದು ಹೇಳಿದ. ಇವನ ಸಾಧನೆ ಇತರ ವಿಕಲಾಂಗರಿಗೆ ಸ್ಫೂರ್ತಿ ನೀಡಿತು. ಸಿರಿಲ್ ಸಾಧನೆಯನ್ನು ಮೆಚ್ಚಿ ಎಷ್ಟೋ ಜನ ಧನಸಹಾಯ ಮಾಡಿದರು. ಕ್ರೀಡೆಯಿಂದ ಬಂದ ಹಣವನ್ನೂ ಕೂಡಿಟ್ಟುಕೊಂಡು ಆ ಹಣದಿಂದ ತನ್ನ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಕಳೆದು ಹೋದ ದೃಷ್ಟಿಯನ್ನು ಮತ್ತೆ ಪಡೆದ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

