ದರೋಡೆಗೆ ಬಂದವನು ಮನೆಗೆಲಸದವನಾದ
ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡದ ಅಗ್ರಮಾನ್ಯ ಲೇಖಕರಲ್ಲಿ ಒಬ್ಬರಾಗಿದ್ದ ಎಂ.ಎಸ್.ಪುಟ್ಟಣ್ಣನವರು ಶಿಕ್ಷಕರಾಗಿ, ಸರ್ಕಾರಿ ಅಧಿಕಾರಿಗಳಾಗಿ, ವಕೀಲರಾಗಿ ಬಹುಮುಖ ಪ್ರತಿಭೆಯನ್ನು ಹೊಂದಿದವರಾಗಿದ್ದರು. ಮಾಡಿದ್ದುಣ್ಣೋ ಮಹಾರಾಯ, ಮುಸುಕು ತೆಗೆಯೇ ಮಾಯಾಂಗನೆ, ಹೇಮಚಂದ್ರವಿಲಾಸ, ಪಾಳೆಯಗಾರರು ಮುಂತಾದ ಮೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದವರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಶ್ರಮಿಸಿ, ಅದರ ಕಾರ್ಯದರ್ಶಿಯೂ ಆಗಿ ಅನುಪಮ ಸೇವೆಸಲ್ಲಿಸಿದ್ದಾರೆ. ಅವರು ಚಾಮರಾಜನಗರದಲ್ಲಿ ಅಮಲ್ದಾರರಾಗಿದ್ದಾಗ ನಡೆದ ಒಂದು ಘಟನೆ ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಒಮ್ಮೆ ಅವರು ಯಾವುದೋ ಒಂದು ಹಳ್ಳಿಯ ಜಮಾಬಂದಿಗೆಂದು ಹೋಗಿದ್ದರು. ಎಲ್ಲ ಕೆಲಸ ಮುಗಿದು ಹೊರಡುವಾಗ ಆಗಲೇ ಸರಿರಾತ್ರಿಯಾಗಿತ್ತು. ಊರ ಪಟೇಲರು ಮತ್ತು ಶಾನುಭೋಗರು ಪುಟ್ಟಣ್ಣನವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು. ಆದರೆ ಅನಾವಶ್ಯಕವಾಗಿ ಉಳಿಯಲು ಇಷ್ಟಪಡದೆ ಚಾಮರಾಜನಗರಕ್ಕೆ ಹಿಂದಿರುಗಲು ನಿರ್ಧರಿಸಿದರು. ಅವರು ಹೋಗುವ ದಾರಿಯಲ್ಲಿ ಕಳ್ಳಕಾಕರ ಕಾಟವಿರುವುದನ್ನು ಮನವರಿಕೆ ಮಾಡಿಕೊಟ್ಟರೂ, ತಮ್ಮ ಕೆಲಸ ಮುಗಿದಿದ್ದರಿಂದ ತಾನೇಕೆ ಅಲ್ಲಿರಬೇಕು ಎಂದು ಗಾಡಿ ಕಟ್ಟಿಸಿಕೊಂಡು ಹೊರಟೇಬಿಟ್ಟರು.
ದಾರಿಯಲ್ಲಿ ಅಂದಿನ ಕುಖ್ಯಾತ ಕಳ್ಳ 'ಅಮಾಸೆ' ಎಂಬುವವನು ಗಾಡಿಗೆ ಅಡ್ಡಹಾಕಿ, ತನ್ನಲ್ಲಿದ್ದ ಆಯುಧವನ್ನೊಮ್ಮೆ ಝಳಪಿಸಿ, ತಾನು ದರೋಡೆ ಮಾಡಲು ಬಂದಿರುವುದಾಗಿಯೂ, ತನ್ನ ಕೆಲಸಕ್ಕೆ ಅಡ್ಡಿಪಡಿಸಿದರೆ, ತಲೆ ತೆಗೆಯುವುದಾಗಿಯೂ ಬೆದರಿಸಿದ. ಅವನ ವಿಚಿತ್ರ ಆಕಾರ, ಉಡುಪು, ದಪ್ಪನಾದ ಮೀಸೆ, ಕೆಂಗಣ್ಣು ಇವೆಲ್ಲ ನೋಡಿದವರಿಗೆ ಭಯ ಹಟ್ಟುವಂತಿದ್ದರೂ, ಪುಟ್ಟಣ್ಣ್ಣನವರು ಮಾತ್ರ ಹೆದರಲಿಲ್ಲ. "ಏನು ಬೇಕಾದ್ರೂ ತಗೋ, ಆದರೆ ಇಂಥ ಕೆಲಸ ಯಾಕೆ ಮಾಡ್ತೀಯ? ದುಡಿದು ತಿನ್ನೋಕೆ ಆಗೋಲ್ಲವೆ?" ಎಂದು ಕೇಳಿದರು. ತಾನು ದುಡಿದು ತಿನ್ನಲು ತಯಾರಿದ್ದರೂ ತನ್ನಂಥ ಕಳ್ಳನಿಗೆ ಯಾರು ಕೆಲಸ ಕೊಡುತ್ತಾರೆ, ಅದಕ್ಕಾಗಿ ಈ ವೃತ್ತಿ ಅನಿವಾರ್ಯ ಎಂದು ಅಮಾಸೆ ಹೇಳಿದ. ಆಗ ಪುಟ್ಟಣ್ಣನವರು ಅವನಿಗೆ ಚಾಮರಾಜನಗರಕ್ಕೆ ಬಂದು ಇಂಥ ದಿನ ಕಾಣಬೇಕೆಂದೂ, ಅವನಿಗೆ ಶಿಕ್ಷೆಯ ಬದಲಿಗೆ ಕೆಲಸ ಕೊಡಿಸುವುದಾಗಿಯೂ ಆಶ್ವಾಸನೆ ನೀಡಿದರು.
ಅದರಂತೆ ಕುಪ್ರಸಿದ್ಧನಾಗಿದ್ದ ಒಬ್ಬ ಕಳ್ಳ ತಮ್ಮ ಮನೆಗೆ ಬಂದಾಗ ಅವನನ್ನು ಉಪಚರಿಸಿ ಮನೆಯವರಿಗೆಲ್ಲಾ ಪರಿಚಯ ಮಾಡಿಕೊಟ್ಟು, ಇಂದಿನಿಂದ ಅವನು ತಮ್ಮ ಮನೆಯಲ್ಲಿಯೇ, ಮನೆಯ ಮಗನಂತೆ ಕೆಲಸ ಮಾಡಿಕೊಂಡು ಇರುವುದಾಗಿ ತಿಳಿಸಿದರು. ಪ್ರತಿ ದಿನ ಅಮಾಸೆ ಮಕ್ಕಳನ್ನು ಎತ್ತಿಕೊಳ್ಳುವುದು, ಶಾಲೆಗೆ ಬಿಟ್ಟುಬರುವುದು, ಮನೆಯ ಸಣ್ಣಪುಟ್ಟ ಕೆಲಸಗಳನ್ನು ನಿಷ್ಠೆಯಿಂದ ಮಾಡಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ. ಚಾಮರಾಜನಗರದಲ್ಲಿರುವವರೆಗೂ ಜನ ಈ ವಿಸ್ಮಯವನ್ನು ಶ್ಲಾಘಿಸಿದರಾದರೂ, ಕಳ್ಳನನ್ನು ಮನೆಯಲ್ಲಿ ಇಟ್ಟುಕೊಂಡು ಧ್ಯೆರ್ಯವಾಗಿದ್ದಾರಲ್ಲಾ ಎಂದೂ ಅಚ್ಚರಿ ವ್ಯಕ್ತಪಡಿಸುತ್ತಿದ್ದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
ajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

