ಸಂಪಾದಕೀಯ

ಮೌಲ್ಯಗಳನ್ನು ಬಿಟ್ಟುಕೊಡದ ಅರಿಸ್ಟೈಡೀಸ್

Published On :

ಕ್ರಿ.ಪೂ.530 ರಿಂದ 468ರವರೆಗೆ ಜೀವಿಸಿದ್ದ ಅರಿಸ್ಟೈಡೀಸ್ ಎಂಬ ಮಹಾಪುರುಷ, ಆಗ ನಡೆದ ಪರ್ಷಿಯನ್ ಯುದ್ಧದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಅಥೆನ್ಸ್‌ನ ಸೈನ್ಯಾಧಿಕಾರಿಯಾಗಿ, ಉತ್ತಮ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ. ಬದುಕಿನ ಎಲ್ಲ ಮೌಲ್ಯಗಳನ್ನೂ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದ. ಎಂದಿಗೂ ಹಾದಿತಪ್ಪಿದವನಲ್ಲ. ಯಾರಿಗೂ ತಪ್ಪು ಹೆಜ್ಜೆ ಇಡಲು ಪ್ರೋತ್ಸಾಹಿಸಲೂ ಇಲ್ಲ. ಇಂತಹ ಪರಿಶುದ್ಧ ವ್ಯಕ್ತಿಯನ್ನು ದೇಶ ಬಿಟ್ಟು ಓಡಿಸಲು ಕೆಲವರು ಪಿತೂರಿ ಮಾಡಿದ್ದೂ ಉಂಟು. ಅರಿಸ್ಟೈಡೀಸ್‌ನನ್ನು ದೇಶಭ್ರಷ್ಟನನ್ನಾಗಿ ಮಾಡಬೇಕೆಂದು ಒಮ್ಮೆ ಕೆಲವರು ಫಿರ್ಯಾದು ನೀಡಿದರು. ಅದು ಪ್ರಜಾಪ್ರಭುತ್ವ ದೇಶವಾದುದರಿಂದ ಜನಮತವನ್ನು ಸಂಗ್ರಹಿಸಲು ತೀರ್ಮಾನಿಸಿ, ಅವನನ್ನು ದೇಶದಿಂದ ಓಡಿಸಲು ಇಚ್ಛಿಸುವವರು ಒಂದು ಹೆಂಚಿನ ಚೂರಿನ ಮೇಲೆ ಅವನ ಹೆಸರನ್ನು ಬರೆದು ಮತ ಪೆಟ್ಟಿಗೆಗೆ ಹಾಕಲು ತಿಳಿಸಲಾಯಿತು. ಅರಿಸ್ಟೈಡೀಸ್ ಒಂದು ಕಡೆ ನಿಂತು ಮತದಾನದ ಆಗುಹೋಗುಗಳನ್ನು ಗಮನಿಸುತ್ತಿದ್ದ. ಅಷ್ಟರಲ್ಲಿ ಒಬ್ಬ ವ್ಯಕ್ತಿ ಅವನ ಬಳಿ ಬಂದು ತನ್ನ ಬಳಿಯಿರುವ ಹೆಂಚಿನ ಚೂರಿನ ಮೇಲೆ ಅರಿಸ್ಟೈಡೀಸ್‌ನ ಹೆಸರನ್ನು ಬರೆದುಕೊಡಬೇಕೆಂದು ವಿನಂತಿಸಿದ. ಆಗ ಅವನಿಗೆ "ನಿನಗೆ ಅರಿಸ್ಟೈಡೀಸ್‌ನ ಬಗ್ಗೆ ಏನಾದರೂ ಗೊತ್ತಿದೆಯೇ?" ಎಂದು ಕೇಳಿದ. ಆ ವ್ಯಕ್ತಿ 'ಗೊತ್ತಿಲ್ಲ' ಎಂದ. "ಹಾಗಾದರೆ ಅವನನ್ನು ದೇಶದಿಂದ ಹೊರಹಾಕಲು ನೀನು ಮತದಾನದಲ್ಲಿ ಪಾಲ್ಗೊಂಡಿದ್ದೇಕೆ" ಎಂದು ಮರುಪ್ರಶ್ನಿಸಿದ. ಅದಕ್ಕೆ ಆ ಮತದಾರ ನೀಡಿದ ಉತ್ತರ ನಿಜಕ್ಕೂ ಅಚ್ಚರಿ ತರುವಂತಿತ್ತು. ಅವನು ಹೇಳಿದ, "ಅರಿಸ್ಟೈಡೀಸ್‌ನನ್ನು ಜನ ತುಂಬ ಒಳ್ಳೆಯವನೆಂದು ಹೇಳುವುದನ್ನು ಕೇಳಿ, ಕೇಳಿ ಬೇಸರ ಬಂದಿದೆ" ಅದಕ್ಕೇ! ಅವನ ಆ ಮಾತಿಗೆ ಮುಗುಳ್ನಕ್ಕು ಹೆಂಚಿನ ಚೂರಿನ ಮೇಲೆ ತನ್ನ ಹೆಸರನ್ನು ಅರಿಸ್ಟೈಡೀಸ್ ಬರೆದುಕೊಟ್ಟ. ನಂತರದ ದಿನಗಳಲ್ಲಿಯೂ ಅರಿಸ್ಟೈಡೀಸ್ ತಾನು ನಂಬಿದ ಮೌಲ್ಯಗಳನ್ನು ಎಷ್ಟೇ ಕಷ್ಟಬಂದರೂ ಬಿಡಲಿಲ್ಲ. ತನ್ನ ಮಕ್ಕಳನ್ನು ಕಡುಬಡತನದಲ್ಲಿಯೇ ಬಿಟ್ಟು ಮರಣಿಸಿದ. ಅವನ ವಂಶಸ್ಥರೂ ಕೂಡ ಬಡತನದಲ್ಲಿ ಬಾಳನ್ನು ಸವೆಸಿದರೂ ಸಹ, ಧರ್ಮದ ಹಾದಿಯನ್ನು ಬಿಡಲಿಲ್ಲ. ಅಥೆನ್ಸಿನಲ್ಲಿದ್ದ ಪ್ಲುಟಾರ್ಕ್ ಎಂಬ ಇತಿಹಾಸಕಾರ ಗ್ರೀಸ್ ಹಾಗೂ ರೋಮನ್ ದೇಶಗಳ ಮಹಾಪುರುಷರ ಜೀವನ ಚರಿತ್ರೆಯನ್ನು ಬರೆಯುತ್ತಿದ್ದ. ಅವನೊಮ್ಮೆ  ಅರಿಸ್ಟೈಡೀಸ್‌ನ ಮರಿಮಗನನ್ನು ಭೇಟಿ ಮಾಡಲು ಹೋದಾಗ, ಆ ಮನೆಯವರು ಮುತ್ತಜ್ಜನ ಆದರ್ಶಗಳನ್ನೇ ಪಾಲಿಸುತ್ತಿರುವುದನ್ನು ಕಂಡು ಆನಂದ ಭರಿತನಾದ. ಆ ಬಗ್ಗೆ ಕುಟುಂಬದ ಒಬ್ಬ ಬಾಲಕಿಯನ್ನು ಕೇಳಿದಾಗ ಅವಳು ಹೇಳಿದ್ದು ಹೀಗೆ, "ನಾವು ಬಡವರಾಗಿದ್ದೇವೆಂದು ನಮಗೇನೂ ನಾಚಿಕೆಯಿಲ್ಲ. ಮುತ್ತಜ್ಜ ಅಧಿಕಾರದಲ್ಲಿದ್ದಾಗಲೇ ಬಡತನ ನಾಚಿಕೆ ಎನಿಸಲಿಲ್ಲ. ಈಗೇನು? ಅಜ್ಜ ನಮಗೆ ಬಿಟ್ಟು ಹೋದ ಆಸ್ತಿ ಒಳ್ಳೆಯ ಹೆಸರು ಮತ್ತು ಬಡತನ. ಇಂತಹ ಒಳ್ಳೆಯ ಮನುಷ್ಯನನ್ನು ಸಮಾಜ ನಡೆಸಿಕೊಂಡ ರೀತಿ ಮುಂದಿನ ದಿನಗಳಲ್ಲಿ ಒಳ್ಳೆಯ ಮೌಲ್ಯಗಳಿಗೆ ಜನ ಬೆಲೆ ಕೊಡಲು ತಪ್ಪಿದಾಗ, ಭ್ರಷ್ಟಾಚಾರ, ಸ್ವಾರ್ಥ, ದ್ವೇಷ, ಮಾತ್ಸರ್ಯಗಳಿಗೆ ಆಡಳಿತ ಬಲಿಯಾದಾಗ ಪ್ರಜಾಪ್ರಭುತ್ವವೇ ಕುಸಿಯಿತು. ಇದೊಂದು ನಮಗೆ ಪಾಠವಾಗಬೇಕು ಎಂಬ ಅಂಶವನ್ನು ಹಾಮಾನಾರವರು ತಮ್ಮ ಲೇಖನವೊಂದರಲ್ಲಿ ನಿರೂಪಿಸಿದ್ದಾರೆ.

- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.