ಔದಾರ್ಯವೇ ಉರುಳಾದಾಗ
ತಮಿಳಿನ ಶ್ರೇಷ್ಠ ಕವಿಗಳಲ್ಲಿ ಒಬ್ಬರು ಸುಬ್ರಹ್ಮಣ್ಯ ಭಾರತಿಯವರು. ಅವರನ್ನು ಮಹಾಕವಿ ಭಾರತೀಯರ್ ಎಂದೂ ಕರೆಯುತ್ತಾರೆ. ಅವರ ಕವನಗಳು ರಾಷ್ಟ್ರಭಕ್ತಿಯಿಂದ ಕೂಡಿದ್ದು, ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ಸ್ಫೂರ್ತಿಯ ಸೆಲೆಯಾಗಿದ್ದವು. ಪಂಜಲಿ ಸಪ್ತಂ, ಪಪ್ಪ ಪಟ್ಟು, ಕಣ್ಣನ್ ಪಟ್ಟು, ಕುಯಿಲ್ ಪಟ್ಟು ಮುಂತಾದ ಮೌಲಿಕ ಕೃತಿಗಳನ್ನು ನೀಡಿ ತಮಿಳು ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರು ಲೇಖಕರಾಗಿ, ಕವಿಯಾಗಿ, ಪತ್ರಕರ್ತರಾಗಿ, ಸ್ವಾತಂತ್ರ್ಯ ಸೇನಾನಿಯಾಗಿ ಮತ್ತು ಸಮಾಜ ಸುಧಾರಕರಾಗಿ ಎಲ್ಲ ಭಾರತೀಯರ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. 1907ರ ಸೂರತ್ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಂಡ ನಂತರ ಉಂಟಾದ ಘಟನೆಯಿಂದ ನೊಂದು ಭಾರತಿಯವರು ತಿಲಕರನ್ನು ಮತ್ತು ಅರವಿದರನ್ನು ಬೆಂಬಲಿಸಿದರು. ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಸುಬ್ರಹ್ಮಣ್ಯ ಭಾರತಿಯವರು ಬ್ರಿಟಿಷರಿಂದ ತಪ್ಪಿಸಿಕೊಂಡು ಪಾಂಡಿಚೆರಿಯಲ್ಲಿ ನೆಲೆಸಿದರು. ಅಲ್ಲಿ ತಮ್ಮ ಅನಾರೋಗ್ಯ ಮತ್ತು ಆರ್ಥಿಕ ದುರವಸ್ಥೆಗಳಿಂದ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿದ್ದರು. ಅವರ ಬರವಣಿಗೆಯಿಂದ ಅಲ್ಪಸ್ವಲ್ಪ ಸಂಪಾದಿಸಿದರೂ ಕೂಡ ಅದು ಸಂಸಾರಕ್ಕೆ ಸಾಲುತ್ತಿರಲಿಲ್ಲ. ಅವರ ಪತ್ನಿ ಚೆಲ್ಲಮ್ಮ ಮನೆದೂಗಿಸಿಕೊಂಡು ಹೋಗಲು ಪಡಿಪಾಟಲು ಪಡುತ್ತಿದ್ದರು. ಆದರೆ ಭಾರತಿಯವರು ಉದಾರಿಗಳು. ಯಾರು ಏನೇ ಕೇಳಿದರೂ ಹಿಂದೆ ಮುಂದೆ ನೋಡದೆ ಕೈಲಿದ್ದುದನ್ನು ಕೊಟ್ಟುಬಿಡುತ್ತಿದ್ದರು. ಗಂಡನ ಧಾರಾಳತನ ಆಕೆಯ ಪಾಲಿಗೆ ಉರುಳಾಗಿತ್ತು. ಎಷ್ಟೋ ವೇಳೆ ಮನೆಯಲ್ಲಿದ್ದ ಅತ್ಯವಶ್ಯಕವಾದ ವಸ್ತುಗಳನ್ನೂ ಭಾರತಿಯವರು ದಾನ ಮಾಡಿದ್ದುಂಟು. ಆ ಬಗ್ಗೆ ಪ್ರಶ್ನಿಸಿದರೆ, ಹೋಗಲಿ ಬಿಡು, ನಮಗಿಂತಾ ಅವರಿಗೆ ಹೆಚ್ಚು ಅದರ ಅವಶ್ಯಕತೆಯಿದೆ ಎಂದು ನಿರಾಳವಾಗಿ ಹೇಳಿಬಿಡುತ್ತಿದ್ದರು. ಆ ಮಹಾತಾಯಿ ಸಹ ಚಕಾರವೆತ್ತದೆ, ಎಷ್ಟೋ ವೇಳೆ ಉಪವಾಸ ಅನುಭವಿಸಿದ್ದೂ ಇದೆ. ಒಮ್ಮೆ ಕಷ್ಟಪಟ್ಟು ನೆರೆಮನೆಯಿಂದ ಕಡತಂದ ಅಕ್ಕಿಯನ್ನು ಚೆಲ್ಲಮ್ಮ ಆರಿಸುತ್ತಿದ್ದಾರೆ, ಸುಬ್ರಹ್ಮಣ್ಯ ಭಾರತಿಯವರು ತಮ್ಮ ಯಾವುದೋ ಒಂದು ಕವಿತೆಯನ್ನು ಬರೆಯುತ್ತಿದ್ದಾರೆ. ನಡುವೆ ಚೆಲ್ಲಮ್ಮ ಏಕೋ ಏನೋ ಅಡಿಗೆ ಮನೆಗೆ ಎದ್ದು ಹೋದರು. ಸ್ವಲ್ಪ ಸಮಯದ ನಂತರ ಬಂದು ನೋಡಿದರೆ, ಅಕ್ಕಿಯೆಲ್ಲಾ ಚೆಲ್ಲಾಪಿಲ್ಲಿಯಾಗಿ ಚೆಲ್ಲಿದೆ. ಗುಬ್ಬಿಗಳ ಒಂದು ದೊಡ್ಡ ಗುಂಪು ಬಂದು ಅಕ್ಕಿಯನ್ನು ಕೆದರಿ ಕೆದರಿ ತಿನ್ನುತ್ತಿವೆ. ಆ ದೃಶ್ಯವನ್ನು ಭಾರತಿಯವರು ಸಂತೋಷದಿಂದ ನೋಡುತ್ತಾ ಕುಳಿತಿದ್ದಾರೆ. ಅಂದಿನ ಆ ಕಾಳು ಅವರ ಮತ್ತು ಮಕ್ಕಳ ಹಸಿದ ಹೊಟ್ಟೆಗೆ ಆಹಾರವಾಗಬೇಕಿತ್ತು. ಹೀಗೆ ಪೋಲಾಗುತ್ತಿರುವುದನ್ನು ನೋಡಿದ ಚೆಲ್ಲಮ್ಮ ದುಃಖ ತಡೆಯಲಾರದೆ ಜೋರಾಗಿ ಅತ್ತುಬಿಟ್ಟರು. ಆದರೆ ಅದರ ಕಡೆ ಗಮನವೀಯದ ಭಾರತಿಯವರು ತಮ್ಮ ಪತ್ನಿಯನ್ನು ಕುರಿತು ಆ ಗುಬ್ಬಿಗಳು ಅದೆಷ್ಟು ಸಂತೋಷವಾಗಿ, ಅರಾಮವಾಗಿವೆ ನೋಡು. ನಾವೂ ಆ ರೀತಿ ಇರಬೇಡವೆ? ಎಂದು ನುಡಿದರು. ಅಲ್ಲದೆ ಒಂದು ಕವಿತೆಯನ್ನೂ ಅಲ್ಲಿಯೇ ಬರೆದು ಬಿಟ್ಟರು. "ಎಲ್ಲಾ ಸಂಕೋಲೆಗಳಿಂದಲೂ ತಪ್ಪಿಸಿಕೊಂಡು ಸ್ವತಂತ್ರವಾಗಿ ನೀನು ನಲಿಯುವಂತಾಗಲಿ, ಈ ಜಾಣ ಗುಬ್ಬಿಯಂತೆ..." ಎಂಬ ಸುಂದರ ಕವಿತೆ ಒಡಮೂಡಿತು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

