ಸಂಪಾದಕೀಯ

ಶಾಲೆಗೆ ಹೋಗದಿದ್ದರೇನಂತೆ ಜೀವನವೇ ಪಾಠ ಕಲಿಸಿತು!

Published On :

ಜೇಮ್ಸ್ ಹಾಗ್ ಶಾಲೆಯ ಮುಖವನ್ನೇ ನೋಡದವನು. ಅವನ ತಂದೆ ತಾಯಿಯರಿಗೆ ತಮ್ಮ ಮಗ ಓದಿ ಉತ್ತಮ ಜೀವನ ನಡೆಸಬೇಕೆಂಬ ಬಯಕೆಯಿದ್ದರೂ ಸಹ ಕಡು ಬಡತನದಿಂದಾಗಿ ಅವನನ್ನು ಕುರಿ ಮೇಯಿಸುವ ಕೆಲಸಕ್ಕೆ ಕಳುಹಿಸಿದರು. ಹೀಗಾಗಿ ಜೇಮ್ಸ್ ತನ್ನ ಬಾಲ್ಯವನ್ನೆಲ್ಲಾ ಕುರಿಗಾಹಿಯಾಗಿಯೇ ಕಳೆದ. ಆದರೆ ಅವನ ಯಜಮಾನ ಜೇಮ್ಸನಲ್ಲಿದ್ದ ಜ್ಞಾನ ದಾಹವನ್ನು ಗುರುತಿಸಿ ತನ್ನಲ್ಲಿದ್ದ ಪುಸ್ತಕಗಳನ್ನು ಕೊಟ್ಟು ಓದಲು ಪ್ರೋತ್ಸಾಹಿಸಿದ. ಆಗ ಅವನಿಗೆ ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕೆಂಬ ಹಂಬಲ ಉಂಟಾಯಿತು. ಅವನ ತಾಯಿ ಮಾರ್ಗರೆಟ್‌ಗೆ ಗ್ರಾಮೀಣ ಪ್ರದೇಶದಲ್ಲಿ ಪ್ರಚಲಿತವಿದ್ದ ಸ್ಕಾಟ್ ಭಾಷೆಯ ಲಾವಣಿಗಳನ್ನು ಸಂಗ್ರಹಿಸುವ ಹವ್ಯಾಸವಿತ್ತು. ಅವುಗಳನ್ನು ಹಾಡಲು ಕಲಿತ ಜೇಮ್ಸ್‌ಗೆ ಕವಿತೆಗಳ ಬಗ್ಗೆ ಆಸಕ್ತಿ ಮೂಡಿತು. ಹೆಚ್ಚು ಹೆಚ್ಚು ಅಧ್ಯಯನದಿಂದ ಜ್ಞಾನ ಸಂಪಾದಿಸಿದ. ಕೊನೆಗೆ ಸ್ಕಾಟ್ ಮತ್ತು ಆಂಗ್ಲ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದ. ಅವನ ಬರವಣಿಗೆಯ ಶೈಲಿಯನ್ನು ಮತ್ತು ಸತ್ವವನ್ನು ಅನೇಕರು ಮೆಚ್ಚಿದರು. ಹೀಗಾಗಿ ಅವನ ಸಾಹಿತ್ಯಕ್ಕೆ ಹೆಚ್ಚಿನ ಜನಪ್ರಿಯತೆ ಸಿಕ್ಕಿತು. ಅವನಿಗೆ ವಾಲ್ಟರ್ ಸ್ಕಾಟ್ ಮತ್ತು ವಿಲಿಯಂ ವರ್ಡ್ಸ್‌ವರ್ತ್‌ರೊಡನೆ ಸ್ನೇಹವಿತ್ತು. ಹೀಗಾಗಿ ಅವರೂ ಸಹ ಅವನ ಬರವಣಿಗೆಯನ್ನು ಪ್ರೋತ್ಸಾಹಿಸಿದರು. ಎಡಿನ್‌ಬರೋ ಪತ್ರಿಕೆಯಲ್ಲಿಯೂ ಕೆಲಕಾಲ ಸೇವೆ ಸಲ್ಲಿಸಿದ ಜೇಮ್ಸ್, ಸ್ಕಾಟಿಷ್ ಪಾಸ್ಟೊರಾಲ್ಸ್,  ಶೆಫರ್ಡ್ಸ್ ಗೈಡ್, ತ್ರೀ ಪೆರಿಲ್ಸ್ ಆಫ್ ಮ್ಯಾನ್ ಮುಂತಾದ ಕೃತಿಗಳನ್ನು ರಚಿಸಿ ಪ್ರಸಿದ್ಧನಾದ. ಪ್ರಸಿದ್ಧ ಕವಿ, ಕಾದಂಬರಿಕಾರ, ಪತ್ರಕರ್ತನಾದರೂ ಸಹ ತನ್ನನ್ನು ಎಟ್ರಿಕ್ ಕುರಿಗಾಹಿ ಎಂದೇ ಗುರುತಿಸಲ್ಪಡುವುದರಲ್ಲಿ ಸಂತಸ ಕಂಡಿದ್ದ.
ಅವನು ಕುರಿಗಾಹಿಯಾಗಿದ್ದಾಗ ಒಮ್ಮೆ ಏಳುನೂರಕ್ಕೂ ಹೆಚ್ಚು ಕುರಿಗಳು ಅನಿರೀಕ್ಷಿತವಾಗಿ ಸುರಿದ ಮಳೆ ಮತ್ತು ಬಿರುಗಾಳಿಯಿಂದಾಗಿ ಚೆಲ್ಲಾಪಿಲ್ಲಿಯಾದವು. ಮಳೆ ನಿಂತಾಗ ಮಧ್ಯ ರಾತ್ರಿಯಾಗಿತ್ತು. ಆಗ ಅವನು ತನ್ನ ಕುರಿಗಳನ್ನರಸುತ್ತಾ ಹೋದಾಗ ಅಲ್ಲೊಂದು ಅಚ್ಚರಿ ಕಾದಿತ್ತು. ಅವನ ಪ್ರೀತಿಯ ನಾಯಿ ಸಿರ್ರಾ ಎಲ್ಲ ಕುರಿಗಳನ್ನೂ ತಪ್ಪಲಿನ ಒಂದೆಡೆ ಸೇರಿಸಿಕೊಂಡು ಕಾವಲು ಕಾಯುತ್ತಿತ್ತು. ಅವನಿಗೆ ತನ್ನ ನಾಯಿಯ ಬಗ್ಗೆ ಅತೀವ ಒಲುಮೆಯುಂಟಾಗಿ ಅದನ್ನು ಕೊನೆಯವರೆಗೂ ತನ್ನ ಗೆಳೆಯನಂತೆ ಸಲುಹಿದ. ಜೇಮ್ಸ್ ಹಾಗ್ ದುರಂತವೊಂದರಲ್ಲಿ ಮಡಿದಾಗ ಕವಿ ವರ್ಡ್ಸ್‌ವರ್ತ್ ಹಾಗ್ ಬಗ್ಗೆ ಒಂದು ಕವನವನ್ನೇ ಬರೆದು ತನ್ನ ಗೌರವವನ್ನು ಸಲ್ಲಿಸಿದ್ದು ಸಾಮಾನ್ಯ ವಿಷಯವಾಗಿರಲಿಲ್ಲ. ಹೀಗೆ ಒಬ್ಬ ಕುರಿಕಾಯುವ ಬಾಲಕ, ಪ್ರಸಿದ್ಧ ಕವಿಯಾಗಿ ಇಂದಿಗೂ ಸಾಹಿತ್ಯಪ್ರಿಯರ ಮನದಾಳದಲ್ಲಿ ನೆಲಸಿದ್ದಾನೆಂದರೆ, ಅವನ ಸಾಧನೆಯ ಮಹತ್ವ ತಿಳಿದೀತು.


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.