ಸಂಪಾದಕೀಯ

ಮಾನವೀಯತೆ ಮೆರೆದ ಲಿಂಕನ್

Published On :

ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಮಾನವೀಯತೆಯ ಪ್ರತೀಕವಾಗಿದ್ದರು. ಅವರು ಅಧ್ಯಕ್ಷರಾಗುವುದಕ್ಕಿಂತ ಮೊದಲು ನ್ಯಾಯವಾದಿಗಳಾಗಿ ಸೇವೆ ಸಲ್ಲಿಸಿದ್ದರು. ಒಮ್ಮೆ ಅವರು ಮತ್ತು ಅವರ ಮೂವರು ವಕೀಲ ಮಿತ್ರರು ಒಂದು ಕಾಡಿನ ಮಧ್ಯೆ ಕುದುರೆಯ ಮೇಲೆ ಕುಳಿತು ಹಾದು ಹೋಗುವಾಗ ಒಂದು ದೃಶ್ಯವನ್ನು ಕಂಡರು. ಎರಡು ರಾಬಿನ್ ಹಕ್ಕಿಯ ಪುಟ್ಟ ಮರಿಗಳು ನೆಲದ ಹುಲ್ಲುಹಾಸಿನ ಮೇಲೆ ಬಿದ್ದು ನೋವಿನಿಂದ ಚೀರುತ್ತಿದ್ದವು. ಅವು ಅಲ್ಲಿಯೇ ಇದ್ದ ಎತ್ತರದ ಮರದ ತುದಿಯ ರೆಂಬೆಯಿಂದ ಬಿದ್ದಿದ್ದವು. ಅವುಗಳ ಕೂಗು ಕೇಳಿದರೆ ಯಾರಾದರೂ ತಮಗೆ ಸಹಾಯ ಮಾಡಬಾರದೆ? ಎಂಬಂತಿತ್ತು. ಓಹ್! ಇವು ಸಾಧಾರಣ ಪಕ್ಷಿಗಳ ಮರಿಗಳು, ನಾವೇನು ಮಾಡಲು ಸಾಧ್ಯ ಎಂದು ಮೂವರೂ ಹರಟೆ ಹೊಡೆಯುತ್ತಾ, ನಗುತ್ತಾ ಮುಂದೆ ಸಾಗಿದರು. ಆದರೆ ಅಬ್ರಹಾಂ ಲಿಂಕನ್ನರಿಗೆ ತಡೆಯಲಾಗಲಿಲ್ಲ. ಕುದುರೆಯಿಂದ ಇಳಿದು, ಚೀರಿ ಬೊಬ್ಬಿಡುತ್ತಿದ್ದ ಪುಟ್ಟ ಹಕ್ಕಿಗಳನ್ನು ಮೃದುವಾಗಿ ಅಂಗೈನಲ್ಲಿಟ್ಟುಕೊಂಡು ಮೈ ಸವರಿದರು. ಅವು ಮೊದಲಿನಂತೆ ಚೀರಿಡಲಿಲ್ಲ, ಬದಲಾಗಿ ಲಿಂಕನ್ನರ ಕೈಯಲ್ಲಿ ಬೆಚ್ಚಗೆ ಕುಳಿತವು. ಆಗ ಲಿಂಕನ್ ಆ ಮರಿಗಳನ್ನು ಅವುಗಳ ಗೂಡಿಗೆ ಬಿಡಲು ನಿರ್ಧರಿಸಿದರು. ಆ ಎತ್ತರವಾದ ಮರವನ್ನು ಪ್ರಯಾಸದಿಂದ ಹತ್ತಿ ಕೊಂಬೆಯ ಮೇಲಿದ್ದ ರಾಬಿನ್ ಹಕ್ಕಿಯ ಗೂಡಿನ ಬಳಿ ಬಂದು ಇಣುಕಿದಾಗ ಅಲ್ಲಿ ಎರಡು ಪುಟ್ಟ ಮರಿಗಳಿದ್ದುದನ್ನು ಕಂಡರು. ಅವುಗಳ ಜೊತೆ ಈ ಎರಡು ಹಕ್ಕಿಗಳನ್ನೂ ಬಿಟ್ಟಾಗ ಅವುಗಳ ಸಂತೋಷ ಕಂಡು ನೆಮ್ಮದಿಪಟ್ಟರು. ಮರದಿಂದ ಕೆಳಗಿಳಿಯುವಾಗ ಅವರ ಅಂಗಿ ಒಂದೆರಡು ಕಡೆ ಹರಿದಿತ್ತು. ಮೈಮೇಲಿನ ಬಟ್ಟೆ ಮತ್ತು ಪಾದರಕ್ಷೆ ಮಲಿನವಾಗಿತ್ತು. ಆದರೂ ಪುಟ್ಟ ಹಕ್ಕಿಗಳನ್ನು ರಕ್ಷಿಸಿದೆನೆಂಬ ಸಮಾಧಾನ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಸಾಕಷ್ಟು ಮುಂದೆ ಹೋಗಿದ್ದ ಮೂವರು ವಕೀಲರು ಹಂತಿರುಗಿ ನೋಡಿದಾಗ ಅಬ್ರಹಾಂ ಲಿಂಕನ್ ಕಾಣದೆ ಇದ್ದುದರಿಂದ ಸ್ವಲ್ಪ ಹೊತ್ತು ಅಲ್ಲಿಯೇ ನಿಂತರು. ಅಷ್ಟರಲ್ಲಿ ಲಿಂಕನ್ ಕುದುರೆಯ ಮೇಲೆ ಬರುತ್ತಿರುವುದನ್ನು ಕಂಡರು. ಅವರ ಮುಖದಲ್ಲಿ ಧನ್ಯತಾ ಭಾವ ಎದ್ದು ಕಾಣುತ್ತಿತ್ತು. ಆ ಅಸ್ತವ್ಯಸ್ತ ಉಡುಪನ್ನು ನೋಡಿ ಅವರಿಗೆ ಲಿಂಕನ್ ಮಾಡಿರಬಹುದಾದ ಕಾರ್ಯವೇನೆಂದು ತಿಳಿದು ಗೇಲಿ ಮಾಡಿದರು. ಅದಕ್ಕೆ ಲಿಂಕನ್ ಹೇಳಿದರು, "ಗೆಳೆಯರೇ, ಒಂದು ವೇಳೆ ಆ ಅಸಹಾಯಕ ಹಕ್ಕಿಗಳನ್ನು ಹಾಗೆಯೇ ಬಿಟ್ಟು ಬಂದಿದ್ದರೆ, ಈ ರಾತ್ರಿ ನನಗೆ ನಿದ್ದೆ ಬರುತ್ತಿರಲಿಲ್ಲ. ಇಂದು ಎಂದಿಗಿಂತಲೂ ಸುಖವಾಗಿ ನಿದ್ರಿಸಬಲ್ಲೆ."

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.