ಹೀಗೊಬ್ಬ ಲಂಚ ವಿರೋಧಿ ಅಧಿಕಾರಿ
ಜನಮೇಜಿರಾವ್ ತಮ್ಮ ಇಡೀ ಸರ್ಕಾರಿ ನೌಕರಿ ಜೀವನದಲ್ಲಿ ಎಂಜಲುಕಾಸಿಗೆ ಕೈ ಒಡ್ಡಿದವರಲ್ಲ. ಇದೇ ಅವರ ದೌರ್ಬಲ್ಯವಾಗಿ ...
ಜನಮೇಜಿರಾವ್ ತಮ್ಮ ಇಡೀ ಸರ್ಕಾರಿ ನೌಕರಿ ಜೀವನದಲ್ಲಿ ಎಂಜಲುಕಾಸಿಗೆ ಕೈ ಒಡ್ಡಿದವರಲ್ಲ. ಇದೇ ಅವರ ದೌರ್ಬಲ್ಯವಾಗಿ ನೌಕರಿಯಲ್ಲಿ ಕಿರಿಕಿರಿ ತಪ್ಪಲಿಲ್ಲ. ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಪದೇ ಪದೇ ವರ್ಗಾವಣೆಯಾದರು. ಅಕ್ಟ್ರಾಯಿ ಅಟೆಂಡರ್ ಆಗಿ ಸೇವೆಗೆ ಸೇರಿ, ನಂತರ ಪುರಸಭೆಯಲ್ಲಿ ಬಿಲ್‌ಕಲೆಕ್ಟರ್ ಆಗಿ ನೇಮಕವಾದರು. ನಂತರ ತಮ್ಮ ವಿದ್ಯಾಭ್ಯಾಸವನ್ನು ಡಿವಿಎಸ್ ಸಂಜೆ ಕಾಲೇಜಿನಲ್ಲಿ ಮುಂದುವರೆಸಿದರು. ಕೆಲಸಕ್ಕೆ ಸೇರಿದಾಗ ಕಚೇರಿಯಲ್ಲಿ ತಾಂಡವವಾಡುತ್ತಿದ್ದ ಲಂಚಾವತಾರವನ್ನು ನೋಡಿ ಅವರಿಗೆ ಜಿಗುಪ್ಸೆ ಉಂಟಾಯಿತು. ತಾವು ಮಾತ್ರ ಯಾವ ಕಾರಣಕ್ಕೂ ಲಂಚವನ್ನು ಸ್ವೀಕರಿಸಬಾರದೆಂದು ದೃಢ ನಿರ್ಧಾರ ಮಾಡಿದರು. ತಮ್ಮ ಕೆಲಸ ಮಾಡಿಸಿಕೊಳ್ಳಲು ಬಂದ ಸಾರ್ವಜನಿಕರಿಂದ ಕಾಫಿ ಸಹ ಕುಡಿಯುತ್ತಿರಲಿಲ್ಲ. ಇವರು ಕ್ರಮೇಣ ಕಂದಾಯ ಅಧಿಕಾರಿ, ಅಸೆಸಿಂಗ್ ಆಫೀಸರ್, ಚೀಫ್ ಆಫೀಸರ್ ಆದಾಗಲೂ ಇದೇ ನೀತಿಯನ್ನು ಅನುಸರಿಸಿದರು. ತಮ್ಮ ಟೇಬಲ್‌ನ ಮೇಲೊಂದು ಫಲಕ ಹಾಕಿದರು. ಅದರ ಮೇಲೆ "ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ. ನಾನು ಭ್ರಷ್ಟ ನೌಕರನಾಗಲಾರೆ" ಎಂಬ ಎದ್ದು ಕಾಣುವ ಬರಹ! ಮೇಜಿನ ಮೇಲೆ ಗಾಂಧೀಜಿಯ ಪುಟ್ಟ ಮೂರ್ತಿ. ಬೆಳಿಗ್ಗೆ ಕಚೇರಿಗೆ ಬಂದರೆ ಕಚೇರಿ ಸಮಯ ಮುಗಿಯುವವರೆಗೂ ಸಾರ್ವಜನಿಕ ಸೇವೆ. ಇದನ್ನು ಕಂಡ ಇತರ ನೌಕರರಿಗೆ ಹೊಟ್ಟೆಯಲ್ಲಿ ಏನೋ ಒಂದು ರೀತಿಯ ತಳಮಳ. ಎಲ್ಲ ಸಹೋದ್ಯೋಗಿಗಳೂ ಒಟ್ಟಿಗೆ ಸೇರಿ ಜನಮೇಜಿರಾಯರ ವಿರುದ್ಧ ಪ್ರತಿಭಟಿಸಿ ಫಲಕ ತೆಗೆಯಲು ಒತ್ತಾಯಿಸಿದರು. ಜನಮೇಜಿರಾವ್‌ಗೆ ಧಿಕ್ಕಾರ ಎಂಬ ಘೋಷಣೆ ಕೂಗಿದರು.
ಏನೇ ಆದರೂ ಬೋರ್ಡ್ ತೆಗೆಯಲಾರೆ ಎಂದು ಇವರು ಹೇಳಿದರು. ಜನಮೇಜಿರಾವ್ ಆದರ್ಶವನ್ನು ಮೆಚ್ಚುವುದರ ಬದಲು ಸಹೋದ್ಯೋಗಿಗಳು ಪ್ರತಿಭಟನೆ ನಡೆಸಿದರು! ಹೋಗಲಿ ಇವರ ಮೇಲಧಿಕಾರಿಗಳಾದರೂ ಇವರಿಗೆ ಬೆಂಬಲಿಸಿದರೆ? ಅದೂ ಇಲ್ಲ. ಅವರು ಇಂತಹ ನಿಷ್ಟಾವಂತ ಅಧಿಕಾರಿಗೆ ಬೆಂಬಲಿಸುವುದರ ಬದಲಾಗಿ ಫಲಕ ತೆಗೆಯಬೇಕೆಂದು ನೋಟೀಸ್ ನೀಡಿದರು. ಯಾವುದಕ್ಕೂ ಜಗ್ಗದೇ ಇದ್ದಾಗ ಫಲಕವನ್ನೇ ಕಿತ್ತೆಸೆಯಲು ಪ್ರಾರಂಭಿಸಿದರು. ದಿನಂಪ್ರತಿ ಇವರು ಫಲಕ ಹಾಕುವುದು, ಮಾರನೆಯ ದಿನ ಫಲಕ ಮಾಯ. ಎದೆಗುಂದದ ಜನಮೇಜಿರಾವ್. ಪ್ರತಿನಿತ್ಯ ಬೋರ್ಡು ಬರೆದುಕೊಡಲು ಒಬ್ಬ ಕಲಾವಿದನನ್ನೇ ನೇಮಕಮಾಡಿಕೊಳ್ಳಬೇಕಾಯಿತು! ಹೀಗೆ ಅವರು ಬರೆಸಿದ ಫಲಕಗಳ ಸಂಖ್ಯೆ ನಲವತ್ತನ್ನೂ ಮೀರಿದೆ. ಕೆಲ ಸಹೋದ್ಯೋಗಿಗಳ ಕಿರುಕುಳ, ಕುಚೋದ್ಯ, ಹಿರಿಯ ಅಧಿಕಾರಿಗಳ ಒತ್ತಡ, ಆಗಾಗ್ಗೆ ಆಗುತಿದ್ದ ಅಪಮಾನಗಳು ಇವ್ಯಾವುವೂ ಇವರ ದೃಢ ನಿರ್ಧಾರವನ್ನು ಸಡಿಲಿಸಲಿಲ್ಲ. ಕೊನೆಗೆ ಫಲಕದ ವಿಷಯದಲ್ಲಿ ಜನಮೇಜಿ ಕೋರ್ಟು ಮೆಟ್ಟಿಲು ಹತ್ತಲೇಬೇಕಾಯಿತು.
ವಿಚಾರಣೆ ನಡೆಸಿದ ನ್ಯಾಯಾಲಯ, ಒಬ್ಬ ಪ್ರಾಮಾಣಿಕ ನೌಕರ ಫಲಕ ಹಾಕಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ ಎಂಬ ತೀರ್ಪು ನೀಡಿದಾಗ ನೆಮ್ಮದಿಯ ಉಸಿರು ಬಿಟ್ಟವರು ಜನಮೇಜಿರಾಯರು. ಆದರೂ ಲಂಚ ಸ್ವೀಕರಿಸದ ಇವರು ನಿತ್ಯ ಶಿಕ್ಷೆಗೆ ಒಳಗಾಗಬೇಕಾಯಿತು. ಯಾವ ಸ್ಥಳಕ್ಕೆ ಹೋದರೂ ಸಾರ್ವಜನಿಕರ ಪರ ಹೋರಾಟ, ಅವರ ಕೆಲಸವನ್ನು ಸುಸೂತ್ರವಾಗಿ ಮಾಡಿಕೊಟ್ಟು, ರಾಜಕಾರಣಿಗಳ ಅಸಮಾಧಾನಕ್ಕೆ, ಗುತ್ತಿಗೆದಾರರ ಅವಕೃಪೆಗೆ, ಮೇಲಧಿಕಾರಿಗಳ ಕುತಂತ್ರಕ್ಕೆ, ಸಹೋದ್ಯೋಗಿಗಳ ಕುಚೋದ್ಯಕ್ಕೆ ಸಿಲುಕಿದರು. ಆದರೂ ಅಳುಕದೆ ತಾವು ನಂಬಿದ ಮಾರ್ಗದಲ್ಲಿ ನಡೆದು ಈಗ ನಿವೃತ್ತರಾಗಿದ್ದಾರೆ. ಎಲ್ಲಿ ಹೋದರೂ ಅಲ್ಲೆಲ್ಲಾ ಸಾರ್ವಜನಿಕರಿಂದ ಶ್ಲಾಘನೆಗೆ ಒಳಗಾಗಿದ್ದಾರೆ. ಕೊನೆಗೂ ಇವರನ್ನು ವಿರೋಧಿಸಿದ ಪುರಸಭಾ ನೌಕರರೇ ತಮ್ಮ ಸಹೋದ್ಯೋಗಿಯ ಕೆಚ್ಚು ಮತ್ತು ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಗೌರವಿಸಿದಾಗ ತಮ್ಮ ಶ್ರಮ ಸಾರ್ಥಕವಾಯಿತೆಂಬ ಸಮಾಧಾನ ಪಟ್ಟರು. ಇಂದಿಗೂ ಶಿವಮೊಗ್ಗದ ಜನಪರ ಹೋರಾಟಗಳಲ್ಲಿ ಮಂಚೂಣಿಯಲ್ಲಿದ್ದು, ಭ್ರಷ್ಟಾಚಾರರಹಿತ ಸಮಾಜ ನಿರ್ಮಾಣಕ್ಕಾಗಿ ಪಣತೊಟ್ಟಿದ್ದಾರೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

