ಸಂಪಾದಕೀಯ

ನವಾಬರ ಆಸೆ ನೆರವೇರಿಸಿದ ಮೌಂಟ್‌ಬ್ಯಾಟನ್

Published On :

1945 ರ ಸಮಯ. ಪಾಲನ್ಪುರ ನವಾಬರು ಇಂಗ್ಲಿಷರೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು. ತಮ್ಮ ಪ್ರಾಂತ್ಯವನ್ನು ಅವರ ನೆರವಿನಿಂದಲೇ ಆಳುತ್ತಿದ್ದರು. ಅವರು ಆಸ್ಟ್ರೇಲಿಯನ್ ಯುವತಿಯನ್ನು ವಿವಾಹವಾಗಿ ಆಕೆಯನ್ನು ಮುಸ್ಲಿಂ ಆಗಿ ಮತಾಂತರಗೊಳಿಸಿದ್ದರು. ನವಾಬರು ಆಕೆಗೆ ರಾಣಿಯ ಸ್ಥಾನಮಾನ ನೀಡಿದ್ದರೂ ಇಂಗ್ಲಿಷರು ಮಾತ್ರ ಆಕೆಯನ್ನು ರಾಣಿಯೆಂದು ಮಾನ್ಯ ಮಾಡಿರಲಿಲ್ಲ. ಇದು ನವಾಬರಿಗೆ ಬೇಸರವನ್ನುಂಟು ಮಾಡಿತ್ತು. ಆದ್ದರಿಂದ ತಮ್ಮ ಅಳಲನ್ನು ರೆಸಿಡೆಂಟ್ ಸರ್ ವಿಲಿಯಂ ಕ್ರಾಪ್ಟರ ಬಳಿ ತೋಡಿಕೊಂಡು ಹೇಗಾದರೂ ಮಾಡಿ ತಮ್ಮ ಪತ್ನಿಗೆ ಪಾಲನಪುರದ ರಾಣಿಯೆಂದು ಮಾನ್ಯತೆ ದೊರಕಿಸಿಕೊಡಲು ವಿನಂತಿಸಿದರು. ರೆಸಿಡೆಂಟರು ಈ ವಿಷಯನ್ನು ಆಗ ಸುಪ್ರೀಂ ಕಮ್ಯಾಂಡರ್ ಆಗಿದ್ದ ಮೌಂಟ್ ಬ್ಯಾಟನ್ನರಿಗೆ ತಿಳಿಸಿ, ಆಗ ವೈಸ್‌ರಾಯ್ ಆಗಿದ್ದ ವೇವಲ್ಲರಿಗೆ ಶಿಫಾರಸು ಮಾಡಲು ವಿನಂತಿಸಿದರು. ಮೌಂಟ್ ಬ್ಯಾಟನ್ನರು, ಖಂಡಿತಾ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಅದರಂತೆ ಒಮ್ಮೆ ದಿಲ್ಲಿಗೆ ಹೋಗಿದ್ದಾಗ ಮೌಂಟ್ ಬ್ಯಾಟನ್ನರು ಪಾಲನ್ಪುರದ ನವಾಬರ ಆಸೆಯನ್ನು ವೇವಲ್ಲರ ಬಳಿ ಪ್ರಸ್ತಾಪಿಸಿ, ಅವರ ಆಸ್ಟ್ರೇಲಿಯನ್ ಪತ್ನಿಗೆ ಹರ್ ಹೈನಸ್ ಪದವಿ ನೀಡಬೇಕೆಂದು ಕೇಳಿಕೊಂಡರು. ಆದರೆ ವೇವಲ್ಲರು ಪಾಲನ್ಪುರದ ನವಾಬರ ಬೇಡಿಕೆಯನ್ನು ಸಾರಾಸಗಟಾಗಿ ನಿರಾಕರಿಸಿ, ಸರಕಾರ ಅದಕ್ಕೆ ಒಪ್ಪಿದರೆ, ದೇಶೀಯ ರಾಜರೆಲ್ಲಾ ಆಂಗ್ಲರನ್ನೇ ಮದುವೆಯಾಗುವರೆಂದೂ, ಇದರಿಂದ ರಾಜವಂಶವೇ ಹೊರಟು ಹೋಗುತ್ತದೆಂದೂ ಅಭಿಪ್ರಾಯ ಪಟ್ಟರು. ಈ ವಿಷಯದಿಂದಾಗಿ ಮೌಂಟ್ ಬ್ಯಾಟನ್ನರಿಗೆ ನಿರಾಸೆಯಾಯಿತು. 1947ರಲ್ಲಿ ಭಾರತ ಸ್ವಾತಂತ್ರ್ಯ ಹೊಂದಿದಾಗ ಇದೇ ಮೌಂಟ್ ಬ್ಯಾಟನ್ನರು ಭಾರತದ ವೈಸ್‌ರಾಯ್ ಆಗಿದ್ದರು. ಅಂದು ಆಗಸ್ಟ್ 14ರ ಮಧ್ಯರಾತ್ರಿ ಭಾರತಕ್ಕೆ ಸ್ವಾತಂತ್ರ್ಯ ನೀಡಲು ನಿರ್ಧಾರವಾಗಿತ್ತು. ಆ ಸಂದರ್ಭದಲ್ಲಿ ಮೌಂಟ್ ಬ್ಯಾಟನ್ನರು ತಮ್ಮ ಕಚೇರಿಯಲ್ಲಿ ಕುಳಿತು ಆ ಕ್ಷಣಕ್ಕಾಗಿ ಕಾಯುತ್ತಿದ್ದರು. ಅಷ್ಟರಲ್ಲಿ ಅವರಿಗೆ ಪಾಲನ್ಪುರದ ನವಾಬರು ಸಲ್ಲಿಸಿದ್ದ ಕೋರಿಕೆ ನೆನಪಾಯಿತು. ತಮ್ಮ ಕಾರ್ಯದರ್ಶಿಗೆ ಹೇಳಿ ಕಳುಹಿಸಿ, "ಸರ್ಕಾರ ನಾವಾಬರ ಪತ್ನಿಯನ್ನು ರಾಣಿ ಎಂದು ಪರಿಗಣಿಸಿ, ಅವಳಿಗೆ ಹರ್ ಹೈನೆಸ್ ಎಂಬ ಪದವಿ ನೀಡಿದೆ" ಎಂಬ ವಿಷಯವನ್ನು ಉತ್ತಮವಾದ ಭಾಷೆಯಲ್ಲಿ ಬರೆದು ತರಲು ಆದೇಶಿಸಿದರು. 11.50ಕ್ಕೆ ಆ ಪತ್ರ ಸಿದ್ಧವಾಯಿತು. ಅದಕ್ಕೆ ಸಹಿ ಮಾಡುವಾಗ ತಾವು ಎಂದೋ ನೀಡಿದ ಮಾತನ್ನು ಉಳಿಸಿಕೊಂಡ ಧನ್ಯತಾಭಾವ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಆ ಪತ್ರ ಅವರ ಸಹಿಯನ್ನೊಳಗೊಂಡ ಕೊನೆಯ ಆದೇಶವಾಗಿತ್ತು.


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.